ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋರೆಗಾಂವ್ ಸ್ವಾಭಿಮಾನಿ ಹೋರಾಟದ ಪ್ರತೀಕ‘

Last Updated 1 ಜನವರಿ 2021, 15:59 IST
ಅಕ್ಷರ ಗಾತ್ರ

ಕೋಲಾರ: ‘ಕೋರೆಗಾಂವ್ ಕದನವು ಅವಮಾನಿತ ಅಸ್ಪೃಶ್ಯ ಸಮುದಾಯದ ವೀರ ಯೋಧರು ಅಸ್ಪೃಶ್ಯತೆ ಮತ್ತು ಅವಮಾನ ಸಹಿಸಲಾಗದೆ ಸಿಡಿದೆದ್ದು ನಡೆಸಿದ ಸ್ವಾಭಿಮಾನಿ ಹೋರಾಟದ ಪ್ರತೀಕ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್ ಹೇಳಿದರು.

ದಲಿತ ಸಂಘರ್ಷ ಸಮಿತಿಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತನಾಡಿ, ‘ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಜ.1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತದೆ’ ಎಂದು ವಿವರಿಸಿದರು.

‘ಅಂಬೇಡ್ಕರ್ ಪ್ರತಿ ವರ್ಷ ಕೋರೆಗಾಂವ್‌ಗೆ ಭೇಟಿ ನೀಡಿ ಹುತಾತ್ಮರ ಸ್ಮರಣಾರ್ಥ ಬ್ರಿಟಿಷ್‌ ಸರ್ಕಾರ ನಿರ್ಮಿಸಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಿದ್ದರು. ಮಹಾನ್‌ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು. ಅವರ ಸಮಾನತೆಯ ಕನಸು ನನಸಾಗಿಸುವುದು ಗುರಿಯಾಗಬೇಕು’ ಎಂದು ತಿಳಿಸಿದರು.

‘18ನೇ ಶತಮಾನದ ಭೀಮಾ ಕೋರೆಗಾಂವ್ ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದ ಯುದ್ಧವಾಗಿತ್ತು. ದಲಿತರು ಹಾಗೂ ದಮನಿತರ ಪರವಾಗಿ ಸ್ವಾಭಿಮಾನಕ್ಕಾಗಿ ವ್ಯವಸ್ಥೆ ವಿರುದ್ಧ ಹೋರಾಡಿದ ಯುದ್ಧವದು. ಕೋರೆಗಾಂವ್ ಯುದ್ಧದ ಬಗ್ಗೆ ಅಧ್ಯಯನ ನಡೆಸಿದ ಅಂಬೇಡ್ಕರ್ ದಿಗ್ಭ್ರಮೆಗೊಂಡು ಯುದ್ಧದ ಇತಿಹಾಸವನ್ನು ವಿಶ್ವಕ್ಕೆ ಸಾರುವ ಕೆಲಸ ಮಾಡಿದರು’ ಎಂದು ದಲಿತ ಮುಖಂಡ ರಾಜಪ್ಪ ಮಾಹಿತಿ ನೀಡಿದರು.

‘ಜಾತಿವಾದಿ ಬಲಪಂಥೀಯರು ನೈಜ ಇತಿಹಾಸ ತಿರುಚಲು ಮುಂದಾಗಿದ್ದಾರೆ. ದೇಶವನ್ನು ಬಲಪಂಥೀಯ ದೇಶವಾಗಿ ಮಾರ್ಪಡಿಸುವ ಹುನ್ನಾರ ನಡೆಸಿದ್ದಾರೆ. ಇತಿಹಾಸದ ಸತ್ಯ ಮರೆಮಾಚಿ ವಂಚಿಸಲಾಗುತ್ತಿದೆ. ಇದು ಭವಿಷ್ಯದ ಪೀಳಿಗೆಗೆ ಮಾಡುತ್ತಿರುವ ದೊಡ್ಡ ದ್ರೋಹ. ಇದರ ವಿರುದ್ಧ ಧ್ವನಿ ಎತ್ತಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಗತಿ ಕಂಡಿಲ್ಲ: ‘ಭಾರತವು 33 ಕೋಟಿ ದೇವರನ್ನು ಹೊಂದಿದ್ದರೂ ದೇಶ ಇನ್ನೂ ಪ್ರಗತಿ ಕಂಡಿಲ್ಲ. ಆದರೆ, 28 ಕೋಟಿ ಜನಸಂಖ್ಯೆ ಹೊಂದಿರುವ ಅಮೆರಿಕ ಇಡೀ ವಿಶ್ವವನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ದೇಶದಲ್ಲಿ ಮನುಷ್ಯ ಶಕ್ತಿವಂತನೋ, ದೇವರು ಶಕ್ತಿವಂತನೋ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ನಗರಸಭೆ ಸದಸ್ಯ ಎನ್.ಅಂಬರೀಶ್‌ ಅಭಿಪ್ರಾಯಪಟ್ಟರು.

‘1857ರಲ್ಲಿ ಸಿಪಾಯಿ ದಂಗೆ ನಡೆಯಿತು ಎಂದು ಹೇಳುತ್ತೇವೆ. ಆದರೆ, ಅದಕ್ಕಿಂತ 40 ವರ್ಷಗಳ ಹಿಂದೆಯೇ ಸಿಪಾಯಿ ದಂಗೆ ನಡೆದಿದೆ. ಭಾರತದ ಇತಿಹಾಸವನ್ನು ತಿರುಚಿದ ಕಾರಣ ಈ ಸತ್ಯ ಅಂಬೇಡ್ಕರ್ ಸಂಶೋಧನೆ ನಡೆಸುವವರೆಗೂ ತಿಳಿದಿರಲಿಲ್ಲ. ಕೋರೆಗಾಂವ್ ಯುದ್ಧವು ದಲಿತರ ಸ್ವಾಭಿಮಾನದ ಸಂಕೇತ’ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ಸದಸ್ಯರಾದ ರವಿ, ಸಂಪತ್, ಹನುಮಪ್ಪ, ಪಿಳ್ಳಪ್ಪ, ಮುಖಂಡರಾದ ಅಫ್ರೋಜ್‌ ಪಾಷಾ, ಅನ್ವರ್‌ ಖಾನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT