ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಐಡಿಎಲ್‌ ಅಕ್ರಮ: ತನಿಖೆ ಆರಂಭ

ಮುಖ್ಯ ಎಂಜಿನಿಯರ್‌ ಲೋಕೇಶ್‌ ನೇತೃತ್ವದಲ್ಲಿ ತನಿಖಾ ತಂಡ ರಚನೆ
Last Updated 6 ಆಗಸ್ಟ್ 2020, 13:23 IST
ಅಕ್ಷರ ಗಾತ್ರ

ಕೋಲಾರ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಅಧಿಕಾರಿಗಳು ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆಸಿರುವ ಅಕ್ರಮದ ಸಂಬಂಧ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.

ಕೆಆರ್‌ಐಡಿಎಲ್‌ ಅಧಿಕಾರಿಗಳು ಬಂಗಾರಪೇಟೆ ತಾಲ್ಲೂಕಿನ ಐತಾಂಡಹಳ್ಳಿ ಮತ್ತು ಎಂ.ಸೊಣ್ಣೂರು ಗ್ರಾಮದ ರಸ್ತೆ ಕಾಮಗಾರಿಯಲ್ಲಿ ನಡೆಸಿರುವ ಅಕ್ರಮದ ಸಂಬಂಧ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ಕೋಲಾರದ ಪ್ರಜ್ವಲ್‌ ಉರುಫ್‌ ದೀಪು ಎಂಬುವರು ಕೆಆರ್‌ಐಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಾಲಯ್ಯ ಅವರಿಗೆ ದೂರು ಕೊಟ್ಟಿದ್ದರು.

ಇದರ ಬೆನ್ನಲ್ಲೇ ಕೆಆರ್‌ಐಡಿಎಲ್‌ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆ ರಸ್ತೆ, ಚರಂಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿರುವ ಸಂಬಂಧ ಪಾಲಯ್ಯ ಅವರಿಗೆ ದೂರು ಸಲ್ಲಿಕೆಯಾಗಿವೆ.
ಈ ದೂರುಗಳನ್ನು ಆಧರಿಸಿ ಪಾಲಯ್ಯ ಅವರು ನಿಗಮದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಮತ್ತು ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಮಹೇಶ್‌ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ದಿಢೀರ್‌ ಭೇಟಿ: ಲೋಕೇಶ್‌ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲಾ ಕೇಂದ್ರದಲ್ಲಿನ ಕೆಆರ್‌ಐಡಿಎಲ್‌ ಕಚೇರಿಗೆ ಗುರುವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿತು. ಐತಾಂಡಹಳ್ಳಿ ರಸ್ತೆ ಹಾಗೂ ಕೆಆರ್‌ಐಡಿಎಲ್‌ ವತಿಯಿಂದ ಕಳೆದ 3 ವರ್ಷಗಳಲ್ಲಿ ನಡೆಸಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಅಧಿಕಾರಿಗಳ ತಂಡವು ಜಾಲಾಡಿತು.

ಅಲ್ಲದೇ, ಅಕ್ರಮದ ಸಂಬಂಧ ಕೆಆರ್‌ಐಡಿಎಲ್‌ ಕಾರ್ಯ ನಿರ್ವಾಹಕ ಎಂಜಿನಿಯರ್‌ ರಾಮು ಹಾಗೂ ದೂರುದಾರರ ವಿಚಾರಣೆ ನಡೆಸಿತು. ಜತೆಗೆ ಕಚೇರಿ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಕಲೆ ಹಾಕಿತು. ಲೋಕೇಶ್‌ ಮತ್ತು ಮಹೇಶ್‌ ಅವರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರವರೆಗೆ ವಿವಿಧ ಕಾಮಗಾರಿ ಕಡತಗಳು ಮತ್ತು ಬಿಲ್‌ನ ಪ್ರತಿಗಳನ್ನು ಪರಿಶೀಲಿಸಿದರು.

₹ 21 ಲಕ್ಷ ದುರ್ಬಳಕೆ: ಬಂಗಾರಪೇಟೆ ತಾಲ್ಲೂಕಿನ ಬ್ಯಾಟರಾಯನ ಬೆಟ್ಟದ ತಪ್ಪಲಲ್ಲಿ ರಸ್ತೆ ನಿರ್ಮಿಸಿರುವ ಕೆಆರ್‌ಐಡಿಎಲ್‌ ಅಧಿಕಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಚರಂಡಿ ನಿರ್ಮಿಸದೆ ಸುಮಾರು ₹ 21 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪ್ರಜ್ವಲ್‌ ದೂರು ಕೊಟ್ಟಿದ್ದರು.

ಈ ದೂರು ಆಧರಿಸಿ ಲೋಕೇಶ್‌ ಮತ್ತು ಮಹೇಶ್‌ ಅವರು ಬ್ಯಾಟರಾಯನ ಬೆಟ್ಟದ ತಪ್ಪಲಿಗೆ ಹೋಗಿ ಪರಿಶೀಲಿಸಿದಾಗ ಅಧಿಕಾರಿಗಳು ಚರಂಡಿಯನ್ನೇ ನಿರ್ಮಿಸದೆ ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡಿ ಅಕ್ರಮ ಎಸಗಿರುವ ಸಂಗತಿ ಬಯಲಾಯಿತು. ಕಾಮಗಾರಿ ಗುಣಮಟ್ಟ ಕಳೆಪೆಯಾಗಿರುವ ಕಾರಣ ರಸ್ತೆ ಹಲವೆಡೆ ಕಿತ್ತು ಹೋಗಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT