ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ರಾಜಕೀಯ ಶಕ್ತಿ ಕೇಂದ್ರ ಕುರುಡುಮಲೆ!

ಚುನಾವಣೆ ಬಂದಾಗಲೆಲ್ಲಾ ರಾಜಕೀಯ ಪಕ್ಷಗಳಿಗೆ ನೆನಪಾಗುವ ವಿನಾಯಕ
Published 6 ಏಪ್ರಿಲ್ 2024, 6:53 IST
Last Updated 6 ಏಪ್ರಿಲ್ 2024, 6:53 IST
ಅಕ್ಷರ ಗಾತ್ರ

ಕೋಲಾರ: ರಾಜಕೀಯ ಪಕ್ಷಗಳಿಗೂ ‘ಮೂಡಣ ಬಾಗಿಲು’ ಕುರುಡುಮಲೆಗೂ ಎಲ್ಲಿಲ್ಲದ ಸಂಬಂಧ. ಚುನಾವಣೆ ಬಂತೆಂದರೆ ಸಾಕು ಈ ಕ್ಷೇತ್ರದ ವಿನಾಯಕನಿಗೆ ಎಲ್ಲ ಪಕ್ಷಗಳ ಮುಖಂಡರು ಬಂದು ಹರಕೆ ಕಟ್ಟಿಕೊಳ್ಳುತ್ತಾರೆ.

ರಾಜ್ಯದ ‘ದೇವಮೂಲೆ’ಯಲ್ಲಿರುವ ಪುರಾಣ ಪ್ರಸಿದ್ಧ ಈ ಕ್ಷೇತ್ರ ಬಹಳ ವರ್ಷಗಳಿಂದ ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದ್ದು, ಚುನಾವಣೆ ಪ್ರಚಾರ ಆರಂಭವಾಗುವುದೇ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಎನ್ನುವುದು ವಿಶೇಷ. ರಾಜಕಾರಣಿಗಳಿಗೆ ಅದೃಷ್ಟ ತಂದು ಕೊಡುವ ದೈವ ಎಂಬ ನಂಬಿಕೆಯೂ ಇದೆ.

ಹೀಗಾಗಿ, ರಾಜ್ಯದ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಮುಳಬಾಗಿಲು ತಾಲ್ಲೂಕಿನ ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸುತ್ತಾರೆ.

ಈಗಾಗಲೇ ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ತಮ್ಮ ಪ್ರಚಾರವನ್ನು ಕುರುಡುಮಲೆಯಿಂದಲೇ ಆರಂಭಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿ ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾವಣೆ ಸಿದ್ಧತೆಗೆ ಚಾಲನೆ ನೀಡಲಾಗಿತ್ತು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುರುಡುಮಲೆಯಿಂದಲೇ ಜೆಡಿಎಸ್‌ನ ಪಂಚರತ್ನ ಯಾತ್ರೆ ಆರಂಭವಾಗಿತ್ತು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ ಮೊದಲ ಸ್ಥಳ ಕುರುಡುಮಲೆ.

1994ರ ವಿಧಾನಸಭೆ ಚುನಾವಣೆ ವೇಳೆ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಕುರುಡುಮಲೆಯ ಗಣಪತಿಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಲಾಗಿತ್ತು. ಆಗ ಪಕ್ಷ 115 ಸ್ಥಾನಗಳೊಂದಿಗೆ ರಾಜ್ಯದಲ್ಲಿ ಜನತಾದಳ ಸ್ವತಂತ್ರವಾಗಿ ಅಧಿಕಾರ ಹಿಡಿದಿತ್ತು. ಆ ನಂತರ ಅವರು ಪ್ರಧಾನಿ ಕೂಡ ಆದರು. 1999ರಲ್ಲಿ ಎಸ್‌.ಎಂ.ಕೃಷ್ಣ ಕೂಡ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕುರುಡುಮಲೆ ಗಣೇಶನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ‘ಪಂಚರತ್ನ’ ಯಾತ್ರೆಗೆ ಚಾಲನೆ ನೀಡಿದ್ದ ಕ್ಷಣ
2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕುರುಡುಮಲೆ ಗಣೇಶನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ ‘ಪಂಚರತ್ನ’ ಯಾತ್ರೆಗೆ ಚಾಲನೆ ನೀಡಿದ್ದ ಕ್ಷಣ

ಅಭ್ಯರ್ಥಿಗಳು ಕೂಡ ಕುರುಡುಮಲೆಗೆ ಭೇಟಿ ನೀಡಿ ‘ಬಿ’ ಫಾರಂಗೆ ಪೂಜೆ ಸಲ್ಲಿಸುತ್ತಾರೆ. ಈಚೆಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಗಣೇಶನಿಗೆ ಪೂಜೆ ಸಲ್ಲಿಸಿದ್ದರು.

2023ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿ ಲೋಕಸಭೆ ಚುನಾವಣೆ ಸಿದ್ಧಗೆ ಚಾಲನೆ ನೀಡಿದ್ದ ಸಂದರ್ಭ
2023ರ ಸೆಪ್ಟೆಂಬರ್‌ನಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಕುರುಡುಮಲೆ ಗಣೇಶನಿಗೆ ಪೂಜೆ ಸಲ್ಲಿಸಿ ಲೋಕಸಭೆ ಚುನಾವಣೆ ಸಿದ್ಧಗೆ ಚಾಲನೆ ನೀಡಿದ್ದ ಸಂದರ್ಭ
‘ಪ್ರಜಾಧ್ವನಿ–2’ಗೆ ಇಂದು ಚಾಲನೆ: ಕಾಂಗ್ರೆಸ್‌ ‘ಪ್ರಜಾಧ್ವನಿ–2’ ಯಾತ್ರೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ದೇಗುಲದಲ್ಲಿ ಶನಿವಾರ ಬೆಳಿಗ್ಗೆ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಲೋಕಸಭೆ ಚುನಾವಣೆ ಪ್ರಚಾರ ಕಹಳೆ ಮೊಳಗಿಸಲಿದ್ದಾರೆ. ಬಳಿಕ ಮುಳಬಾಗಿಲು ನಗರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಮಾರ್ಚ್‌ 29ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಕೋಲಾರ ಕ್ಷೇತ್ರದ ಟಿಕೆಟ್‌ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿತ್ತು. ‘ಕರ್ನಾಟಕಕ್ಕೆ ‘ದೇವಮೂಲೆ’ ಕುರುಡುಮಲೆ. ಹೀಗಾಗಿ ರಾಜ್ಯಕ್ಕೂ ಒಳ್ಳೆಯದಾಗಬೇಕು. ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಬೇಕೆಂದು ಈ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸುತ್ತಿದ್ದೇವೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಈಚೆಗೆ ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ಆರಂಭಿಸಿದರು
ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಈಚೆಗೆ ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ತಮ್ಮ ಪ್ರಚಾರ ಆರಂಭಿಸಿದರು
ಕುರುಡುಮಲೆ ಇತಿಹಾಸ
ಮುಳುಬಾಗಿಲಿನಿಂದ 11ಕಿ.ಮೀ ದೂರದಲ್ಲಿರುವ ಕುರುಡುಮಲೆಗೆ ಬಹುತೇಕ ಶಾಸನಗಳಲ್ಲಿ ‘ಕುರುಡಿಮಲ’ ಎಂಬ ಹೆಸರಿದೆ. ಚೋಳರ ಆಳ್ವಿಕೆಯಲ್ಲಿ ಮಹತ್ವ ಪಡೆದ ಊರಿದು. ಗಣೇಶನನ್ನು ಆರಾಧಿಸಲು ದೇವದೇವತೆಗಳು ಕೂಡಿದ್ದರಿಂದ ‘ಕೂಡಿಮಲೆ’ ‘ಕೂಡುಮಲೈ’ ಎಂಬ ಹೆಸರು ಬಂದಿದೆ ಎಂಬುದು ಪ್ರತೀತಿ. ಗಣಪತಿ ದೇಗುಲ ವಿಜಯನಗರ ಕಾಲದ ವಾಸ್ತುಶೈಲಿ ಹೊಂದಿದೆ. ಸಾಲಿಗ್ರಾಮ ಶಿಲೆಯ ಲಕ್ಷಣಗಳಿರುವ ಗಣಪತಿಯನ್ನು ಮೂರು ಅಡಿ ಎತ್ತರದ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಗಣೇಶನ ವಿಗ್ರಹವು ಎಂಟೂವರೆ ಅಡಿ ಎತ್ತರವಿದೆ. ರಾಜ್ಯದ ಏಕಶಿಲಾ ಗಣಪತಿ ವಿಗ್ರಹಗಳಲ್ಲಿ ಇದೂ ಒಂದು ಎಂದು ಇತಿಹಾಸ ತಜ್ಞ ಶಿವಪ್ಪ ಅರಿವು ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT