ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ದಿನದ ಅರ್ಥಪೂರ್ಣ ಆಚರಣೆ

ಆರೋಗ್ಯ ಇಲಾಖೆ ಸಿಬ್ಬಂದಿಗೆ ರೈತ ಸಂಘ ಸದಸ್ಯರ ಸನ್ಮಾನ
Last Updated 1 ಮೇ 2021, 15:26 IST
ಅಕ್ಷರ ಗಾತ್ರ

ಕೋಲಾರ: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸುವ ಮೂಲಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶನಿವಾರ ಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

‘ಕೊರೊನಾ ಸೋಂಕು ತಡೆಗೆ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಯ ಸೇವೆಗೆ ಬೆಲೆ ಕಟ್ಟಲಾಗದು. ಆದರೆ. ಅವರಿಗೆ ಭದ್ರತೆಯ ಮತ್ತು ಗೌರವಯುತ ಬದುಕು ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ವಿಷಾದಿಸಿದರು.

‘ದಿನೇದಿನೇ ಪ್ರತಿ ಹಂತದಲ್ಲೂ ಕಾರ್ಮಿಕರ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಆದರೆ, ಸರ್ಕಾರಗಳು ಕಾರ್ಮಿಕರ ಸಮಸ್ಯೆ ಪರಿಹಾರಕ್ಕೆ ಗಮನಹರಿಸದಿರುವುದು ಖಂಡನೀಯ. ಕಾರ್ಮಿಕರ ಬೆವರ ಹನಿಗೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಕಾರ್ಮಿಕರು ನೆಮ್ಮದಿಯಿಂದ ಬಾಳಲು ಸಾಧ್ಯ. ಕಾರ್ಮಿಕರೇ ಈ ದೇಶದ ನಿಜವಾದ ಭವಿಷ್ಯ ಎಂಬುದನ್ನು ಸರ್ಕಾರಗಳ ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

‘ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ನಿರ್ಣಾಯಕವಾಗಿದ್ದರೂ ಅವರಿಗೆ ಕನಿಷ್ಠ ವೇತನ, ಸೇವಾ ಭದ್ರತೆ, ಗುರುತಿನ ಚೀಟಿ ಸೇರಿದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಸರ್ಕಾರದ ಸವಲತ್ತುಗಳು ಅರ್ಹ ಕಾರ್ಮಿಕರಿಗೆ ತಲುಪದೇ ಇರುವುದು ವಿಷಾದನೀಯ. ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ಕಾರ್ಮಿಕರ ಹಿತ ಕಡೆಗಣಿಸಿವೆ’ ಎಂದು ದೂರಿದರು.

‘ದೇಶದಲ್ಲಿ ಇಂದು ಕಾರ್ಮಿಕರ ಪರಿಸ್ಥಿತಿ ಚೆನ್ನಾಗಿಲ್ಲ. ಒಂದೆಡೆ ಆರ್ಥಿಕ ಅಸ್ಥಿರತೆಯಿಂದ ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಕಂಪನಿಗಳು ಕಾರ್ಮಿಕರ ಕೆಲಸಕ್ಕೆ ಸರಿಯಾದ ವೇತನ ನೀಡದೆ ವಂಚಿಸುತ್ತಿವೆ. ಕಾರ್ಮಿಕರ ಕಾನೂನು ಕಡತಕ್ಕೆ ಮಾತ್ರ ಸೀಮಿತವಾಗಿದೆ’ ಎಂದು ಆರೋಪಿಸಿದರು.

ಒಗ್ಗೂಡಿ: ‘ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗೆ ಸಂಘಟಿತರಾಗಿ ಹೋರಾಡಬೇಕು. ವಿವಿಧ ಇಲಾಖೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರದ ಸವಲತ್ತುಗಳ ಬಗ್ಗೆ ಅಧಿಕಾರಿಗಳು ಕಾರ್ಮಿಕರಿಗೆ ಮಾಹಿತಿ ನೀಡಬೇಕು. ಕಟ್ಟಡ ಕಾರ್ಮಿಕರು, ಪೌರ ಕಾರ್ಮಿಕರು, ಅಂಗನವಾಡಿ, ಬಿಸಿಯೂಟ ನೌಕರರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಕಾರ್ಮಿಕರು ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಒಗ್ಗೂಡಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುನಾಥ್‌ ಕಿವಿಮಾತು ಹೇಳಿದರು.

‘ದುಡಿಯುವ ವರ್ಗದ ಮೇಲೆ ಶೋಷಣೆ ನಿರಂತರವಾಗಿದ್ದು, ಕಾರ್ಮಿಕರಿಗೆ ಭದ್ರತೆ ಇಲ್ಲವಾಗಿದೆ. ಕಾರ್ಮಿಕ ದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ ದುಡಿಯುವ ವರ್ಗಕ್ಕೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಪಣತೊಡಬೇಕಿದೆ’ ಎಂದು ಒತ್ತಾಯಿಸಿದರು.

ಸನ್ಮಾನ ಸ್ವೀಕರಿಸಿದ ಆರೋಗ್ಯ ಇಲಾಖೆ ಕೊರೊನಾ ವಾರಿಯರ್ಸ್, ‘ಕೋವಿಡ್‌ ಹಿನ್ನೆಲೆಯಲ್ಲಿ ಜನರು ಆರೋಗ್ಯ ಇಲಾಖೆ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ರಜೆ ಪಡೆಯದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಪ್ರತಿಯೊಬ್ಬರು ಕೋವಿಡ್‌ ಮಾರ್ಗಸೂಚಿ ಪಾಲಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT