ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಪದವಿ ಉಪನ್ಯಾಸಕರ ಕೊರತೆ

ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆ
Last Updated 5 ಫೆಬ್ರುವರಿ 2021, 4:56 IST
ಅಕ್ಷರ ಗಾತ್ರ

ಮುಳಬಾಗಿಲು: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ ತರಗತಿಗಳು ನಡೆಯುತ್ತಿದ್ದು, ಒಟ್ಟಾರೆ 1,200 ವಿದ್ಯಾರ್ಥಿಗಳಿದ್ದಾರೆ. ಆದರೆ, ಉಪನ್ಯಾಸಕರ ಕೊರತೆ ಪರಿಣಾಮ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ.

ಶೇ 90ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಬರುತ್ತಾರೆ. ಈ ಪೈಕಿ ಶೇಕಡ 80ರಷ್ಟು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ್ದಾರೆ. ಜಿಲ್ಲೆಯಲ್ಲಿಯೇ ದಾಖಲಾತಿಯಲ್ಲಿ ಕಾಲೇಜು ಎರಡನೇ ಸ್ಥಾನ ಪಡೆದುಕೊಂಡಿದೆ.

ಕಾಲೇಜಿನ ಶಿಕ್ಷಣದಲ್ಲಿ ಶೇಕಡ 70ರಷ್ಟು ಅತಿಥಿ ಉಪನ್ಯಾಸಕರು ಹಾಗೂ ಶೇಕಡ 30ರಷ್ಟು ಕಾಯಂ ಉಪನ್ಯಾಸಕರು ಇರುವುದು ನಿಯಮ. ಕಾಲೇಜಿಗೆ 42 ಅತಿಥಿ ಉಪನ್ಯಾಸಕರ ಅವಶ್ಯಕತೆ ಇದೆ. ಈಗ 21 ಉಪನ್ಯಾಸಕರು ಮಾತ್ರ ಇದ್ದಾರೆ. ಕಾಲೇಜಿನಲ್ಲಿ ವಾಣಿಜ್ಯ ವಿಭಾಗಕ್ಕೆ 10 ಉಪನ್ಯಾಸಕರ ಅವಶ್ಯಕತೆ ಇದ್ದರೂ ಈಗ ಕೇವಲ ಒಬ್ಬರು ಇದ್ದಾರೆ. ಇದರಿಂದ ಈ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ರೀತಿಯಲ್ಲಿ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ಆಂಗ್ಲಭಾಷೆಗೆ ಇಬ್ಬರು ಉಪನ್ಯಾಸಕರು ನಿಯೋಜನೆಯ ಮೇರೆಗೆ ಕೆಲಸ ಮಾಡುತ್ತಿದ್ದು, ಇನ್ನೂ ಮೂವರು ಉಪನ್ಯಾಸಕರ ಅವಶ್ಯಕತೆ ಇದೆ.

ಕನ್ನಡ ಭಾಷಾ ಉಪನ್ಯಾಸಕರು ಇಬ್ಬರಿದ್ದು, ಒಬ್ಬರ ಅವಶ್ಯಕತೆ ಇದೆ. ರಸಾಯನ ವಿಜ್ಞಾನ ವಿಷಯ ಬೋಧನೆಗೆ ಒಬ್ಬ ಉಪನ್ಯಾಸಕರಿದ್ದು ಕೆಜಿಎಫ್ ಪ್ರಥಮದರ್ಜೆ ಕಾಲೇಜಿನಿಂದ ನಿಯೋಜಿತರಾಗಿದ್ದಾರೆ. ವಾರಕ್ಕೆ ಮೂರು ದಿನ ಬಂದು ಬೋಧನೆ ಮಾಡುತ್ತಿದ್ದಾರೆ. ಜೀವಶಾಸ್ತ್ರ, ಗಣಿತ ವಿಷಯಗಳಿಗೆ ತಲಾ ಒಬ್ಬರ ಉಪನ್ಯಾಸಕರ ಅವಶ್ಯಕತೆ ಇದ್ದು, ಗಣಕ ವಿಜ್ಞಾನಕ್ಕೆ ಇಬ್ಬರು ಉಪನ್ಯಾಸಕರ ಅಗತ್ಯವಿದೆ.

ಕಳೆದ ಎರಡು ವರ್ಷಗಳ ಹಿಂದೆ ದೈಹಿಕ ಶಿಕ್ಷಣ ನಿರ್ದೇಶಕರು ನಿವೃತ್ತಿ ಹೊಂದಿರುವುದರಿಂದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಹಿನ್ನಡೆಯಾಗಿದೆ. ಈ ಹುದ್ದೆಗೆ ನಿರ್ದೇಶಕರನ್ನು ನೇಮಕ ಮಾಡಲು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

2020ರ ನ. 17ರಿಂದ ಅಂತಿಮ ಪದವಿ ತರಗತಿಗಳು ಪ್ರಾರಂಭಗೊಂಡಿವೆ. ಜನವರಿಯಿಂದ ಪ್ರಥಮ ಹಾಗೂ ದ್ವಿತೀಯ ಪದವಿ ತರಗತಿಗಳು ಪ್ರಾರಂಭಗೊಂಡಿದ್ದು ಎಲ್ಲ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ.

ಸರ್ಕಾರದ ಆದೇಶದಂತೆ ಪದವಿ ತರಗತಿಗಳಿಗೆ ಫೆಬ್ರುವರಿ- ಮಾರ್ಚ್‌ ತಿಂಗಳಲ್ಲಿ ಪರೀಕ್ಷೆ ಆರಂಭವಾಗುತ್ತಿರುವುದರಿಂದ ಸಿಲೆಬಸ್ ಮುಗಿಸಬೇಕಿದೆ. ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಮಾಡಿರುವ ಸರ್ಕಾರ ಶೇಕಡ 50ಕ್ಕೆ ನಿಗದಿ ಮಾಡಿರುವುದು ಶೈಕ್ಷಣಿಕ ಅಭಿವೃದ್ಧಿಗೆ ಪೆಟ್ಟು ಬಿದ್ದಿದೆ.

‘ಕಾಲೇಜಿನಲ್ಲಿ ಹಲವು ವರ್ಷಗಳಿಂದ ಉಪನ್ಯಾಸಕರ ಕೊರತೆ ಇದ್ದರೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಶಿಕ್ಷಣದ ಬಗ್ಗೆ ಅಸಡ್ಡೆಯನ್ನು ಪ್ರತಿಭಟಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎನ್ನುತ್ತಾರೆ ಡಿವೈಎಫ್ಐ ಸಂಘಟನೆಯ ಮುಖಂಡ ವಾಸುದೇವ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT