ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನಕ್ಕೆ ಜಾಗದ ಕೊರತೆ

ಜಮೀನು ನಿಗದಿಯಾಗಿದ್ದರೂ ಒತ್ತುವರಿ ತೆರವಿಗೆ ಹಿಂದೇಟು
Last Updated 2 ಜುಲೈ 2021, 4:38 IST
ಅಕ್ಷರ ಗಾತ್ರ

ಕೆಜಿಎಫ್: ನಗರದ ಮಧ್ಯಭಾಗದಲ್ಲಿ ಸ್ಮಶಾನಕ್ಕೆಂದು ಮೀಸಲಾದ ಜಾಗವನ್ನು ಕಂದಾಯ ಇಲಾಖೆಯು ನಗರಸಭೆಗೆ ಹಸ್ತಾಂತರ ಮಾಡಿಕೊಡದೆ ಇರುವುದರಿಂದ ಅಂತ್ಯಸಂಸ್ಕಾರಕ್ಕೆ ಜಾಗದ ಕೊರತೆ ಉಂಟಾಗಿದೆ.

ಕೋವಿಡ್ ಸಮಯದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ನಗರದ ಸ್ಮಶಾನಗಳಲ್ಲಿ ಜಾಗ ಸಿಗದೆ ಕೋರಮಂಡಲ್‌ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮುಸ್ಲಿಮರು ಬೇರೆ ತಾಲ್ಲೂಕಿಗೆ ಹೋಗಿ ಅಂತ್ಯಸಂಸ್ಕಾರ ಮಾಡುವಷ್ಟು ಮಟ್ಟಿಗೆ ಜಾಗದ ಅಭಾವ ಸೃಷ್ಟಿಯಾಯಿತು.

ಆದರೆ, ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆಂದು ಮೀಸಲಿಟ್ಟಿರುವ ಜಾಗದಲ್ಲಿ ಸ್ಮಶಾನವಿದ್ದರೂ ಅದನ್ನು ಗುರ್ತಿಸಿ, ನಗರಸಭೆಗೆ ನೀಡಲು ಕಂದಾಯ ಇಲಾಖೆ ಮುಂದಾಗಿಲ್ಲ. ಇದರಿಂದಾಗಿ ನೂರಾರು ವರ್ಷಗಳಿಂದ ಇರುವ ಗಾಂಧಿನಗರ ಸ್ಮಶಾನ ಅನಧಿಕೃತ ಸ್ಮಶಾನವಾಗಿಯೇ ಮುಂದುವರಿದುಕೊಂಡು ಬಂದಿದೆ.

ಕಂದಾಯ ಇಲಾಖೆಯ ಪಹಣಿಯಲ್ಲಿ ಸರ್ವೆ ನಂಬರ್ 67ರಲ್ಲಿ ಒಟ್ಟು 12.28 ಎಕರೆ ಜಾಗವಿದೆ. ಈ ಪೈಕಿ 6.08 ಎಕರೆ ಜಮೀನನ್ನು ಸ್ಮಶಾನಕ್ಕೆ ಮೀಸಲಾಗಿದೆ. ಈ ಸಂಬಂಧವಾಗಿ ಹಿಂದೆ ದಲಿತ ಮತ್ತು ಮುಸ್ಲಿಂ ಸಮುದಾಯದ ನಡುವೆ ಸ್ಮಶಾನದ ಜಾಗಕ್ಕೆಂದು ತಕರಾರು ಬಂದಾಗ ಅದರಲ್ಲಿ ಹಿಂದೂ ಸ್ಮಶಾನಕ್ಕೆ 4 ಎಕರೆ ಮತ್ತು ಮುಸ್ಲಿಂ ಸಮುದಾಯಕ್ಕೆ 2 ಎಕರೆ ಜಮೀನು ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ.

ಆದರೆ, ಬಹುತೇಕ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಅದನ್ನು ಬಿಡಿಸಲು ಕಂದಾಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದರಿಂದ ಸ್ಮಶಾನ ಜಾಗವನ್ನು ನಗರಸಭೆಗೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

2019ರ ಆಗಸ್ಟ್ ತಿಂಗಳಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಹಶೀಲ್ದಾರ್‌ಗೆ ಪತ್ರ ಬರೆದು ಸರ್ವೆ ನಂಬರ್ 67ರ ಒತ್ತುವರಿ ತೆರವು ಮಾಡುವಂತೆ ಸೂಚಿಸಿದ್ದರು. ಈ ಸಂಬಂಧ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದಿಂದ ಜಿಲ್ಲಾಡಳಿತಕ್ಕೆ ಸೂಚನೆ ಬಂದಿತ್ತು.

ಆದರೆ, ನಗರಸಭೆಗೆ ಜಮೀನು ವಹಿಸಿಕೊಡದೇ ಇದ್ದರೂ ಗಾಂಧಿನಗರದ ಸ್ಮಶಾನ ಅಭಿವೃದ್ಧಿಗೆ 2009ರಲ್ಲಿಯೇ ಹಣ ಖರ್ಚು ಮಾಡಿತ್ತು. ಇದರ ಜೊತೆಗೆ ಚಾಂಪಿಯನ್ ರೀಫ್ಸ್ನ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರ ಸ್ಮಶಾನದ ಅಭಿವೃದ್ಧಿ ಹಾಗೂ ಗೊಲ್ಲಹಳ್ಳಿ, ರಾಜೇಶ್ಕ್ಯಾಂಪ್, ಊರಿಗಾಂಪೇಟೆ ಮತ್ತು ಕೃಷ್ಣಾವರಂ ಸ್ಮಶಾನಗಳಿಗೆ ಕೂಡ ಕಾಯಕಲ್ಪ ನೀಡಿತ್ತು. ಗಾಂಧಿನಗರ ಸ್ಮಶಾನ ಹೊರತಾಗಿ ಬಹುತೇಕ ಎಲ್ಲಾ ಸ್ಮಶಾನಗಳು ಬಿಜಿಎಎಂಲ್ ವ್ಯಾಪ್ತಿಗೆ ಸೇರಿವೆ.

ಗಾಂಧಿನಗರ ಸ್ಮಶಾನದ ಸುತ್ತಮುತ್ತಲೂ ವಸತಿ ಪ್ರದೇಶಗಳು ತಲೆ ಎತ್ತುತ್ತಿರುವುದರಿಂದ ಭೂಮಿಯ ಬೆಲೆ ಏರುತ್ತಿದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ಪ್ರಯೋಜನ ಪಡೆದ ಭೂ ಮಾಫಿಯಾಗಳು ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡು ಬರುತ್ತಿದ್ದಾರೆ. ಸ್ಮಶಾನ ಗುರ್ತಿಸಿ ಕಾಂಪೌಂಡ್‌ ಹಾಕಿಕೊಟ್ಟರೆ ಮುಂದಿನ ದಿನಗಳಲ್ಲಿ ಸ್ಮಶಾನ ನಮ್ಮ ಪಾಲಿಗೆ ಇರುತ್ತದೆ ಎಂದು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು
ಹೇಳುತ್ತಾರೆ.

ಕಂದಾಯ ಇಲಾಖೆ ಪಹಣಿಯಲ್ಲಿ 6 ಎಕರೆ 2 ಗುಂಟೆ ಸ್ಮಶಾನಕ್ಕೆ ಮೀಸಲಾಗಿರುವುದು ಕಂಡುಬಂದಿದೆ. ಅಲ್ಲಿ ನೂರಾರು ಸಮಾಧಿಗಳು ಕೂಡ ಇವೆ. ಆದರೆ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪಕ ಅಭಿವೃದ್ಧಿ ಯೋಜನೆಯಲ್ಲಿ ಸರ್ವೆ ನಂಬರ್ 67 ಅನ್ನು ವಸತಿ ಉದ್ದೇಶಕ್ಕೆ ತೋರಿಸಿದೆ. ಆದರೆ, ಚಾಲ್ತಿಯಲ್ಲಿರುವ ಸ್ಮಶಾನದ ಭಾಗವನ್ನು ನಕ್ಷೆಯಲ್ಲಿ ತೋರಿಸಿಲ್ಲ. ಇದು ಕೂಡ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಎದ್ದು ತೋರಿಸುತ್ತಿದೆ.

‘ಕಂದಾಯ ಇಲಾಖೆಯ ಸರ್ವೆ ನಂಬರ್‌ನಲ್ಲಿರುವ ಜಾಗವನ್ನು ನಿಖರವಾಗಿ ಗುರ್ತಿಸಿ ನಗರಸಭೆಗೆ ನೀಡಿದರೆ ನಾವು ಅಭಿವೃದ್ಧಿ ಮಾಡುತ್ತೇವೆ’ ಎಂದು ನಗರಸಭೆಯ ಪೌರಾಯುಕ್ತಮೋಹನ್ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT