ಶುಕ್ರವಾರ, ಆಗಸ್ಟ್ 14, 2020
27 °C
ಸರ್ಕಾರದ ನಡೆ ಖಂಡನೀಯ: ದಲಿತ ಸಂಘರ್ಷ ಸಮಿತಿ ಸದಸ್ಯರ ಆಕ್ರೋಶ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಶನಿವಾರ ನಡೆಸಿದರು.

‘ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು 1961ರ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಸರ್ಕಾರದ ಈ ನಡೆ ಖಂಡನೀಯ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಭೂಮಿ ಒಡೆತನ ಸೇರಿದಂತೆ ರೈತ ಹಾಗೂ ಕೃಷಿ ಕಾರ್ಮಿಕರ ಹಿತಾಸಕ್ತಿಗೆ ಬದ್ಧವಾಗಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆಯು ಇಡೀ ದೇಶಕ್ಕೆ ಮಾದರಿಯಾಗಿತ್ತು. ರೈತರ ಮತ್ತು ಕೃಷಿ ಕಾರ್ಮಿಕರ ಪರವಾಗಿದ್ದ ಜನಪರ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಖಂಡನೀಯ’ ಎಂದು ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ವಿ.ನಾರಾಯಣಸ್ವಾಮಿ ಕಿಡಿಕಾರಿದರು.

‘ಸರ್ಕಾರ ಕೃಷಿಕರು, ಭೂರಹಿತ ಕೃಷಿ ಕಾರ್ಮಿಕರ ಹಿತಾಸಕ್ತಿ ಬಲಿ ಕೊಡಲು ಹೊರಟಿದೆ. ಭೂರಹಿತ ಬಡಜನರ ಭೂ ಒಡೆತನದ ಕನಸಿಗೆ ಕೊಳ್ಳಿ ಇಡುತ್ತಿದೆ. ಅನ್ನ ಕೊಡುವ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಲೂಟಿಕೋರ ಬಂಡವಾಳಶಾಹಿಗಳಿಗೆ ಪರಭಾರೆ ಮಾಡುವ ಹುನ್ನಾರ ಅಡಗಿದೆ’ ಎಂದು ಆರೋಪಿಸಿದರು.

ಒಕ್ಕಲೆಬ್ಬಿಸುತ್ತಿದೆ: ‘ಸರ್ಕಾರ ಆರ್ಥಿಕವಾಗಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪೂರಕವಾಗಿರುವ ಕೃಷಿ ಚಟುವಟಿಕೆಯಿಂದ ರೈತರು ಮತ್ತು ಕೃಷಿ ಕಾರ್ಮಿಕರನ್ನು ದುಡಿಮೆಯ ನೆಲೆಯಿಂದ ಶಾಶ್ವತವಾಗಿ ಒಕ್ಕಲೆಬ್ಬಿಸುತ್ತಿದೆ. ಬಂಡವಾಳಶಾಹಿ ರಾಜಕಾರಣಕ್ಕೆ ರೈತರನ್ನು ಗುಲಾಮರಾಗಿಸುವ ಸಂಚು ನಡೆದಿದೆ. ತಿದ್ದುಪಡಿ ಕಾಯ್ದೆ ಜಾರಿಯಾದರೆ ಉಳ್ಳವರೇ ಭೂ ಒಡೆಯರಾಗುತ್ತಾರೆ’ ಎಂದು ಧರಣಿನಿರತರು ಆತಂಕ ವ್ಯಕ್ತಪಡಿಸಿದರು.

‘ಆಹಾರದ ಸಾರ್ವಭೌಮತ್ವ ಹೊಂದಿದ್ದ ಭಾರತ ದೇಶವು ಆಳುವವರ ಕೃಷಿ ವಿರೋಧಿ ಧೋರಣೆಯಿಂದ ಕೃಷಿ ಬಿಕ್ಕಟ್ಟು ಹಾಗೂ ಆಹಾರದ ಸಮಸ್ಯೆ ಎದುರಿಸುತ್ತಿದೆ. ಬಡ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ದೂರದೃಷ್ಟಿಯಿಲ್ಲದ ರಾಜಕಾರಣಿಗಳ ಅಪ್ರಬುದ್ಧ ನಿರ್ಧಾರಗಳಿಂದ ಕೃಷಿ ಭೂಮಿ ನಾಶವಾಗಿ ಆಹಾರದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ’ ಎಂದು ದೂರಿದರು.

ಹೋರಾಟ ನಡೆಸುತ್ತೇವೆ: ‘ದೇಶದಲ್ಲಿ ಶೇ 80ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಇವರು ಹಣದಾಸೆಗೆ ಭೂಮಿ ಮಾರಾಟ ಮಾಡಿದರೆ ಭವಿಷ್ಯದಲ್ಲಿ ಎಂದಿಗೂ ಜಮೀನು ಖರೀದಿಸಲು ಸಾಧ್ಯವಾಗುವುದಿಲ್ಲ. ರೈತ ಕುಲಕ್ಕೆ ಮಾರಕವಾಗಿರುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಜಿಲ್ಲಾ ಘಟಕದ ಸಂಘಟನಾ ಸಂಚಾಲಕರಾದ ಎಸ್.ಡಿ.ಮುನಿಸ್ವಾಮಿ, ಕೆ.ಆರ್.ಮುನಿಯಪ್ಪ, ಎಚ್.ವೆಂಕಟರವಣ, ಪ್ರಕಾಶ್, ಟಿ.ನಾರಾಯಣಸ್ವಾಮಿ, ರವೀಂದ್ರಕುಮಾರ್, ಮುನಿರಾಜು, ರಾಜಣ್ಣ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು