ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಸಂಸದ ಮುನಿಸ್ವಾಮಿ ಕಿವಿಮಾತು

Last Updated 31 ಜುಲೈ 2021, 15:26 IST
ಅಕ್ಷರ ಗಾತ್ರ

ಕೋಲಾರ: ‘ಪ್ರಚಾರಕ್ಕಾಗಿ ಪಕ್ಷದ ಮುಖಂಡರ ಹಿಂದೆ ಅಲೆಯುವುದನ್ನು ಬಿಟ್ಟು ಬೇರು ಮಟ್ಟದಿಂದ ಪಕ್ಷ ಸಂಘಟಿಸಿ. ಲೆಟರ್‌ಹೆಡ್‌ ಸಂಸ್ಕೃತಿಗೆ ಮೊದಲು ತಿಲಾಂಜಲಿ ಹಾಡಿ’ ಎಂದು ಸಂಸದ ಎಸ್‌.ಮುನಿಸ್ವಾಮಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಇಲ್ಲಿ ಶನಿವಾರ ನಡೆದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ‘ಪಕ್ಷ ನೀಡಿರುವ ಜವಾಬ್ದಾರಿಯನ್ನು ಕಾರ್ಯಕರ್ತರು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಮಾತ್ರ ಸಂಘಟನೆ ಬಲಗೊಳ್ಳುತ್ತದೆ. ಜವಾಬ್ದಾರಿ ಮರೆತು ಪಕ್ಷದಲ್ಲಿ ಸ್ಥಾನಮಾನ ಭಯಸುವುದು ತಪ್ಪು. ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜಿಸಿ’ ಎಂದು ಸೂಚಿಸಿದರು.

‘ಡಿಸೆಂಬರ್‌ನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಈ ಚುನಾವಣೆಯಲ್ಲಿ ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ತಳ ಮಟ್ಟದಿಂದ ಪಕ್ಷ ಬಲಪಡಿಸುವ ಅಗತ್ಯವಿದೆ. ಜಿಲ್ಲೆಯ ಪ್ರತಿ ಬೂತ್‌ನಲ್ಲೂ ಯುವ ಮೋರ್ಚಾ ಸಂಘಟನೆ ಕಟ್ಟಿ ಶಕ್ತಿ ತುಂಬಬೇಕು’ ಎಂದು ಸಲಹೆ ನೀಡಿದರು.

‘ಗ್ರಾ.ಪಂ ಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದರೆ ಮಾತ್ರ ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ. ಈ ಹಿಂದೆ ಪಕ್ಷ ಸಂಘಟನೆಯು ತುಂಬಾ ಕಷ್ಟವಿತ್ತು. ಪದಾಧಿಕಾರಿಗಳನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಆದರೆ, ಈಗ ಪಕ್ಷ ಸಾಕಷ್ಟು ಬೆಳೆದಿರುವುದರಿಂದ ಸಂಘಟನೆಯ ವಿವಿಧ ಹುದ್ದೆಗಳಿಗೆ ಹೆಚ್ಚಿನ ಪೈಪೋಟಿಯಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ನೇತೃತ್ವದಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆದಿದೆ. ಒಂದು ಕಾಲದಲ್ಲಿ ಪಕ್ಷದ ಕೇವಲ ಇಬ್ಬರು ಸಂಸದರಿದ್ದರು. ಈಗ 303 ಮಂದಿ ಸಂಸದರಿದ್ದಾರೆ. ಪಕ್ಷ ಬೆಳೆಸುವುದು ಮತ್ತು ಸಂಘಟನೆ ಬಲಪಡಿಸುವುದು ಯುವ ಮೋರ್ಚಾ ಸದಸ್ಯರ ಜವಾಬ್ದಾರಿ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ ಅವರ ವಿಶ್ವಾಸ ಗಳಿಸಬೇಕು’ ಎಂದು ತಿಳಿಸಿದರು.

‘ಗ್ರಾ.ಪಂಗಳಿಗೆ ಕೇಂದ್ರ ಸರ್ಕಾರದಿಂದ ಶೇ 80ರಷ್ಟು ಅನುದಾನ ಬರುತ್ತಿದೆ. ನರೇಗಾ ಅನುದಾನದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿ, ಕೆರೆಗಳಲ್ಲಿ ಹೂಳು ತೆಗೆಯುವುದು, ಚರಂಡಿ ನಿರ್ಮಾಣದಂತಹ ಕಾಮಗಾರಿಗಳನ್ನು ಮಾಡಿ ಜನರ ಸೇವೆ ಮಾಡಲು ಅವಕಾಶವಿದೆ’ ಎಂದು ಹೇಳಿದರು.

‘ಪಕ್ಷ ಸಂಘಟನೆಗೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಪಕ್ಷದ ಯಾವುದೇ ಕಾರ್ಯಕ್ರಮ ನಡೆದರೆ ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೀಡಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು’ ಎಂದರು.

ಸಾಮಾಜಿಕ ನ್ಯಾಯ: ‘ಬಿಜೆಪಿಯಲ್ಲಿ ಮಾತ್ರ ಸಾಮಾಜಿಕ ನ್ಯಾಯವಿದೆ. ಪಕ್ಷದಲ್ಲಿ ಕುಟುಂಬ ರಾಜಕಾರಣದ ಸಂಸ್ಕೃತಿಯಲ್ಲಿ. ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ಕುಟುಂಬ ರಾಜಕಾರಣವಿದೆ. ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬಸ್ಥರೇ ಉನ್ನತ ಹುದ್ದೆ ಅಲಂಕರಿಸುತ್ತಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್ ಟೀಕಿಸಿದರು.

‘ಪಕ್ಷ ಸಂಘಟನೆಗೆ ದುಡಿದವರು ದೊಡ್ಡ ಸ್ಥಾನ ಅಲಂಕರಿಸಿದ್ದಾರೆ. ಮೋದಿ ಅವರು ಒಂದು ಕಾಲದಲ್ಲಿ ಬೂತ್ ಮಟ್ಟದ ಕಾರ್ಯಕರ್ತರಾಗಿದ್ದರು. ನಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟದ ನಾಯಕರಾದರು. ಅವರಂತೆಯೇ ಪಕ್ಷದ ಪ್ರತಿ ಕಾರ್ಯಕರ್ತರಿಗೂ ರಾಜಕೀಯವಾಗಿ ಬೆಳೆಯುವ ಅವಕಾಶವಿದೆ. ಬಿಜೆಪಿಯನ್ನು ಸಿದ್ಧಾಂತದ ಮೇಲೆ ಕಟ್ಟಲಾಗಿದೆ’ ಎಂದರು.

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT