ಗುರುವಾರ , ಏಪ್ರಿಲ್ 9, 2020
19 °C

ಠಾಣೆಗಳಲ್ಲಿ ಕಾನೂನು ಸಲಹಾ ಕೇಂದ್ರ: ನ್ಯಾಯಾಧೀಶ ಸಂತೋಷ್ ಗಜಾನನಭಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಜನಸಾಮಾನ್ಯರಿಗೆ ಉಚಿತವಾಗಿ ಕಾನೂನು ಸಲಹೆ ನೀಡುವ ಉದ್ದೇಶಕ್ಕೆ ಪೊಲೀಸ್ ಠಾಣೆಗಳಲ್ಲಿ ಕಾನೂನು ಸಲಹಾ ಕೇಂದ್ರ ಆರಂಭಿಸಲಾಗಿದೆ. ಸಾರ್ವಜನಿಕರು ಈ ಕೇಂದ್ರಗಳ ಸದುಪಯೋಗ ಪಡೆಯಬೇಕು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಸಲಹಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಯಾವುದೇ ಸ್ವರೂಪದ ಪ್ರಕರಣಗಳನ್ನು ಎದುರಿಸಲು ಜನಸಾಮಾ­ನ್ಯರಿಗೆ ಉಚಿತ ಕಾನೂನು ನೆರವು ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಆದೇಶದ ಅನ್ವಯ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಕಾನೂನು ಸಲಹಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕೆಲ ಕಕ್ಷಿದಾರರಿಗೆ ನೇರವಾಗಿ ನ್ಯಾಯಾಲಯಕ್ಕೆ ಬರಲು ಭಯ ಇರುತ್ತದೆ. ಕಾನೂನು ಸಲಹೆ ಪಡೆಯಲು ಇಚ್ಛಿಸುವವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ನೇರವಾಗಿ ಕಾನೂನು ಸಲಹಾ ಕೇಂದ್ರ ಸಂಪರ್ಕಿಸಿ ಕಾನೂನು ನೆರವು ಪಡೆಯಬಹುದು. ಜನರ ಅನುಕೂಲಕ್ಕಾಗಿ ವಕೀಲರನ್ನು ಕೇಂದ್ರಕ್ಕೆ ನಿಯೋಜಿಸಲಾಗುತ್ತದೆ’ ಎಂದು ವಿವರಿಸಿದರು.

‘ಅಪಘಾತ ಪ್ರಕರಣಗಳಲ್ಲಿ ಪರಿಹಾರ ವಿಚಾರವಾಗಿ ಸಲಹಾ ಕೇಂದ್ರದ ನೆರವು ಪಡೆಯಬಹುದು. ಕಾನೂನು ಅರಿವು ಇಲ್ಲದವರಿಗೆ ಈ ಕೇಂದ್ರಗಳು ನೆರವಿನ ಜತೆಗೆ ಸಲಹೆ ಸೂಚನೆ ನೀಡಲಿವೆ. ಆರೋಪಿಗಳು ಕಾನೂನು ನೆರವು ಪಡೆಯಲು ಇಚ್ಛಿಸಿದರೆ ಕೇಂದ್ರಗಳು ನೆರವು ನೀಡಲಿವೆ. ಈ ಸೇವೆಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ’ ಎಂದು ತಿಳಿಸಿದರು.

ಮೌಲ್ಯ ಕುಸಿಯುತ್ತಿವೆ: ‘ಸಮಾಜದಲ್ಲಿ ನೈತಿಕ ಮೌಲ್ಯ ಕುಸಿಯುತ್ತಿವೆ. ಕೌಟುಂಬಿಕ ದೌರ್ಜನ್ಯ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಶೋಷಣೆ ನಡೆಯದಂತೆ ತಡೆಯುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಮನೋಭಾವ ಕಡಿಮೆಯಾಗುತ್ತಿದೆ. ಜನರಲ್ಲಿ ಪರಸ್ಪರ ನಂಬಿಕೆ ಇಲ್ಲವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಾಗತಿಕ ಪರಿಸ್ಥಿತಿ ಮತ್ತು ಬಿಡುವಿಲ್ಲದ ಜೀವನ ಶೈಲಿಯಲ್ಲಿ ವಯೋವೃದ್ಧ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಸ್ಥಿತಿ ಎದುರಾಗಿದೆ. ಯುವಕ ಯುವತಿಯರಿಗೆ ವಯೋವೃದ್ಧರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, ಈಗ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ’ ಎಂದು ವಿಷಾದಿಸಿದರು.

‘ಹಿರಿಯ ನಾಗರಿಕರು ಬದುಕಿದ ರೀತಿ ಮತ್ತು ಅವರ ಅನುಭವ ಸಮಾಜಕ್ಕೆ ಅಮೂಲ್ಯ ಆಸ್ತಿ. ಅವರ ಬದುಕಿನ ಪರಿಚಯ ಮನೆಯ ಮೊಮ್ಮಕ್ಕಳಿಗೂ ಸಿಕ್ಕಿದ್ದಾಗ ಮಾತ್ರ ಸಂಸ್ಕೃತಿ, ಸಂಸ್ಕಾರ ಬೆಳೆಯುತ್ತದೆ. ಸಮ ಸಮಾಜ ನಿರ್ಮಾಣ ಮಾಡಬೇಕು. ಜನರಲ್ಲಿನ ಅಪನಂಬಿಕೆ ದೂರ ಮಾಡಬೇಕು. ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸಿ ಕಾನೂನಿನ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಕಾನೂನು ಅರಿವು: ‘ಮನುಷ್ಯನಿಗೆ ಕಾನೂನಿನ ಅರಿವು ಇದ್ದರೆ ಭ್ರಷ್ಟಾಚಾರ ರಹಿತ ಮತ್ತು ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ರಾಜಕೀಯ ಪ್ರೇರಿತ ಗಲಭೆ, ಭಿನ್ನಾಭಿಪ್ರಾಯ, ತಪ್ಪು ಗ್ರಹಿಕೆಯಿಂದಾಗುವ ದ್ವೇಷ, ಘರ್ಷಣೆ ತಪ್ಪಿಸಲು ಕಾನೂನು ಅರಿವು ಒಂದೇ ದಾರಿ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್ ಕಿವಿಮಾತು ಹೇಳಿದರು.

ಕೋಲಾರ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಚೌಡಪ್ಪ, ನಗರ ಠಾಣೆ ಇನ್‌ಸ್ಪೆಕ್ಟರ್ ರಂಗಸ್ವಾಮಿ, ಎಸ್‍ಐ ಎಂ.ಆರ್.ಅಣ್ಣಯ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್, ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)