ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಕುಷ್ಠ ರೋಗ ಅರಿವು ಆಂದೋಲನ

Last Updated 5 ಜನವರಿ 2021, 12:19 IST
ಅಕ್ಷರ ಗಾತ್ರ

ಕೋಲಾರ: ರಾಷ್ಟ್ರೀಯ ಕುಷ್ಠ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜ.30ರವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಮೂಡಿಸುವ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಠ ರೋಗಿಗಳ ಬಗ್ಗೆ ಸಮಾಜದಲ್ಲಿರುವ ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು ಆಂದೋಲನದ ಉದ್ದೇಶ. ಆಶಾ ಕಾರ್ಯಕರ್ತೆಯರು, ಕ್ಷೇತ್ರ ಮಟ್ಟದ ಮಹಿಳಾ ಹಾಗೂ ಪುರುಷ ಆರೋಗ್ಯ ಸಹಾಯಕರು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ಗ್ರಾಮ ಪಂಚಾಯಿತಿಗಳಲ್ಲಿ ಕುಷ್ಠ ರೋಗದ ಬಗ್ಗೆ ಆರೋಗ್ಯ ಶಿಕ್ಷಣ ನೀಡುತ್ತಾರೆ ಎಂದು ಹೇಳಿದ್ದಾರೆ.

ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ, ಕೆಂಪು ಅಥವಾ ತಾಮ್ರ ವರ್ಣದ ಮಚ್ಚೆ, ನರಗಳ ಊತ, ಮಚ್ಚೆಗಳ ಮೇಲೆ ಕೂದಲು ಇಲ್ಲದಿರುವುದು, ಮಚ್ಚೆಗಳಲ್ಲಿ ನವೆ ಇಲ್ಲದಿರುವುದು, ಬೆವರು ಬರದೆ ಇರುವುದು, ಕೈ ಕಾಲು ಜೋಮು ಹಿಡಿಯುವುದು, ಮುಖ ಮತ್ತು ಕಿವಿ ಮೇಲೆ ಹೊಳಪು, ಗಂಟು ಕಾಣುವುದು ಕುಷ್ಠ ರೋಗದ ಲಕ್ಷಣಗಳ ಎಂದು ಮಾಹಿತಿ ನೀಡಿದ್ದಾರೆ.

ಕುಷ್ಠ ರೋಗವು ದೀರ್ಘಾವಧಿ ರೋಗವಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯಿದೆ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಔಷಧೋಪಚಾರ ಮಾಡಿದರೆ ರೋಗ ಗುಣಪಡಿಸಬಹುದು. ಕುಷ್ಠ ರೋಗದ ಅಂಗವಿಕಲತೆ ತಡೆಗಟ್ಟಿ, ರೋಗಕ್ಕೆ ಅಂಟಿದ ಕಳಂಕ ದೂರ ಮಾಡಬಹುದು. ಈ ಕಾಯಿಲೆ ಬರಲು ಕನಿಷ್ಠ 6 ತಿಂಗಳಿಂದ 25 ವರ್ಷ ಮತ್ತು ಮೇಲ್ಪಟ್ಟು ಆಗಬಹುದು ಎಂದು ವಿವರಿಸಿದ್ದಾರೆ.

ಕುಷ್ಠ ರೋಗವು ಪ್ರಾಚೀನ ಕಾಲದಿಂದ ಬಂದ ಕಾಯಿಲೆ. ಇದು ಮೈಕೊ ಬ್ಯಾಕ್ಟೀರಿಯ ಲೇಪ್ರೆ ಸೂಕ್ಷ್ಮಾಣುವಿನಿಂದ ಹರಡುತ್ತದೆ. ಚರ್ಮ ಮತ್ತು ನರಗಳಿಗೆ ಬಹಳ ನಿಧಾನವಾಗಿ ಬರುವ ಕಾಯಿಲೆ. ಶಾಪ, ಪಾಪ, ಕರ್ಮ ಮತ್ತು ಮುಟ್ಟುವುದರೊಂದಿಗೆ ಈ ರೋಗ ಹರಡುವುದಿಲ್ಲ. ಒಂದು ಬಾರಿ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣವಾಗುತ್ತದೆ ಮತ್ತು ಮನುಷ್ಯರಿಗೆ ಮಾತ್ರ ಬರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಸಾಶನ: ಇದು ನೋವುರಹಿತ ಕಾಯಿಲೆ. ಅನುವಂಶಿಕವಾಗಿ ಬರುವುದಿಲ್ಲ. ಕುಷ್ಠ ರೋಗದಿಂದ ಸಾವು ಸಂಭವಿಸುವುದಿಲ್ಲ. ಆದರೆ, ಅಂಗವಿಕಲತೆ ಉಂಟು ಮಾಡುತ್ತದೆ. ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಕಚೇರಿಯಿಂದ ಕುಷ್ಠ ರೋಗಿಗಳಿಗೆ ಉಚಿತವಾಗಿ ಎಂಸಿಆರ್ ಚಪ್ಪಲಿ ಮತ್ತು ಗಾಯಗಳ ಚಿಕಿತ್ಸೆಗೆ ಔಷಧ ನೀಡಲಾಗುವುದು. ಗುಣಮುಖರಾದ ಎಲ್ಲಾ ಕುಷ್ಠ ರೋಗಿಗಳಿಗೆ ಮಾಸಾಶನ ಸಹ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು 2025ರೊಳಗೆ ಭಾರತವನ್ನು ಕುಷ್ಠ ರೋಗ ಮುಕ್ತ ದೇಶವಾಗಿಸಲು ಪಣ ತೊಟ್ಟಿವೆ. ಜಿಲ್ಲೆಯಲ್ಲಿ 2020–-21ನೇ ಸಾಲಿನಲ್ಲಿ 13 ಕುಷ್ಠ ರೋಗ ಪ್ರಕರಣ ವರದಿಯಾಗಿವೆ. ಆರಂಭಿಕ ಹಂತದಲ್ಲೇ ಕುಷ್ಠ ರೋಗ ಪತ್ತೆ, ತ್ವರಿತ ಚಿಕಿತ್ಸೆ ನೀಡಿ ಜಿಲ್ಲೆಯನ್ನು ಕುಷ್ಠ ರೋಗ ಮುಕ್ತ ಜಿಲ್ಲೆಯಾಗಿಸಲು ಸಾರ್ವಜನಿಕರು ಆಂದೋಲನ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT