ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜಿಎಸ್‌ಟಿ ಪಾಲು ನೀಡಲಿ

ಕೇಂದ್ರಕ್ಕೆ ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ಸುದರ್ಶನ್‌ ಒತ್ತಾಯ
Last Updated 7 ಸೆಪ್ಟೆಂಬರ್ 2020, 15:42 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬಾಕಿ ಶೀಘ್ರವೇ ನೀಡಬೇಕು’ ಎಂದು ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್‌.ಸುದರ್ಶನ್‌ ಒತ್ತಾಯಿಸಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರವು ರಾಜ್ಯಕ್ಕೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ (ಆರ್‌ಬಿಐ) ಸಾಲ ಪಡೆಯುವಂತೆ ಸೂಚಿಸುವ ಮೂಲಕ ಗಣತಂತ್ರ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಟೀಕಿಸಿದರು.

‘ರಾಜ್ಯದ 2019-20ನೇ ಸಾಲಿನ ಜಿಎಸ್‌ಟಿ ಪಾಲು ₹ 31,674 ಕೋಟಿ ಹಾಗೂ ಹಿಂದಿನ ಬಾಕಿ ₹ 13,764 ಕೋಟಿ ಬಿಡುಗಡೆ ಮಾಡಬೇಕು. ಜಿಎಸ್‌ಟಿ ಬಾಕಿ ಕೇಳಲು ರಾಜ್ಯದ ರಾಜಹುಲಿ ಸರ್ಕಾರಕ್ಕೆ ಏಕೆ ಹಿಂಜರಿಕೆ’ ಎಂದು ವ್ಯಂಗ್ಯವಾಡಿದರು.

‘ದೇಶದ ಆರ್ಥಿಕ ಪರಿಸ್ಥಿತಿ ವಿಚಾರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇವರೇ ಕಾಪಾಡಬೇಕೆಂದು ಹೇಳಿಕೆ ನೀಡಿರುವುದು ಕೇಂದ್ರದ ದಿವಾಳಿತನಕ್ಕೆ ಸಾಕ್ಷಿ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ತನ್ನ ವೈಫಲ್ಯ ಮರೆಮಾಚಲು ಭಾವನಾತ್ಮಕ ವಿಷಯಗಳನ್ನು ಕೆದಕಿ ಜನರ ದಿಕ್ಕು ತಪ್ಪಿಸುತ್ತಿದೆ’ ಎಂದು ಕಿಡಿಕಾರಿದರು.

ಶ್ವೇತಪತ್ರಕ್ಕೆ ಒತ್ತಾಯ: ‘ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಆರ್ಥಿಕ ಪರಿಸ್ಥಿತಿ ಸಂಬಂಧ ಶ್ವೇತಪತ್ರ ಹೊರಡಿಸಬೇಕು. ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ನೌಕರರಿಗೆ ಸಂಬಳ ಕೊಡಲು ಸಹ ಸರ್ಕಾರದಲ್ಲಿ ಹಣವಿಲ್ಲ. ಮತ್ತೊಂದೆಡೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸುಸ್ಥಿತಿಯಲ್ಲಿದ್ದ ರಾಜ್ಯ ಆರ್ಥಿಕವಾಗಿ ಹಿಂದುಳಿಯುವಂತಾಗಿದೆ. ಮುಖ್ಯಮಂತ್ರಿಗಳು ಈ ದುಸ್ಥಿತಿ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಒಳ ಮೀಸಲಾತಿಗೆ ಸಂಬಂಧಪಟ್ಟ ಪ್ರಕರಣ ಸುಪ್ರೀಂ ಕೋರ್ಟ್‌ನ ಮುಂದಿದ್ದು, ನ್ಯಾಯಾಲಯ ಸಾಧ್ಯವಾದಷ್ಟು ಬೇಗನ ಪ್ರಕರಣ ಇತ್ಯರ್ಥಪಡಿಸಬೇಕು. ಒಳ ಮೀಸಲಾತಿಗೆ ಸಂಬಂಧಪಟ್ಟಂತೆ ರಾಜಕೀಯವಾಗಿ, ಸಾಮಾಜಿಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಮುಂದೆ ತಮ್ಮ ಅಭಿಪ್ರಾಯ ಹೇಳಬೇಕು’ ಎಂದರು.

ಉನ್ನತ ತನಿಖೆ: ‘ಮಾದಕ ವಸ್ತುಗಳ ದಂಧೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಬೇರು ಸಮೇತ ಈ ದಂಧೆ ನಿರ್ಮೂಲನೆ ಮಾಡಲು ಸರ್ಕಾರ ಉನ್ನತ ತನಿಖೆಗೆ ಆದೇಶಿಸಬೇಕು. ಈ ವಿಚಾರದಲ್ಲಿ ರಾಜಕಾರಣದ ಪ್ರಶ್ನೆ ಬರಬಾರದು. ಸಚಿವರು ತನಿಖೆಗೆ ಸೂಚಿಸಿದ ನಂತರ ಮನಬಂದಂತೆ ಹೇಳಿಕೆ ನೀಡುವುದು ಎಷ್ಟು ಸರಿ? ರಾಜಕೀಯವಾಗಿ ಹೇಳಲು ಅವರ ಪಕ್ಷದ ಅಧ್ಯಕ್ಷರು ಹಾಗೂ ವಕ್ತಾರರು ಇಲ್ಲವೇ?’ ಎಂದು ಪ್ರಶ್ನಿಸಿದರು.

‘ಮಾಲೂರು ತಾಲ್ಲೂಕಿನ ಮಿಂಡಹಳ್ಳಿ ಸಮೀಪ ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನವಾಗುವ ರೈತರ ಜಮೀನಿಗೆ ಎಕರೆಗೆ ₹ 1.20 ಕೋಟಿ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಶಿಫಾರಸ್ಸು ಮಾಡಿದ್ದಾರೆ. ಅದೇ ರೀತಿ ನರಸಾಪುರ ಹಾಗೂ ವೇಮಗಲ್‌ನಲ್ಲಿ 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವ ಕೃಷಿ ಜಮೀನಿಗೆ ಅಷ್ಟೇ ಪರಿಹಾರಧನ ನಿಗದಿಪಡಿಸಬೇಕು’ ಎಂದು ಮನವಿ ಮಾಡಿದರು.

ವೈಫಲ್ಯ ತಿಳಿಸುತ್ತೇವೆ: ‘ಪಕ್ಷವು ದೇಶಪಾಂಡೆ ಅಧ್ಯಕ್ಷತೆಯಲ್ಲಿ ವಿಷನ್‌ ಕರ್ನಾಟಕ ಸಮಿತಿ ರಚಿಸಿದ್ದು, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸುತ್ತೇವೆ. ವಿಷನ್‌ ಕರ್ನಾಟಕದಡಿ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ತರಬೇತಿ ನೀಡುವ ಮೂಲಕ ಜನರಿಗೆ ಸರ್ಕಾರದ ವೈಫಲ್ಯಗಳು ತಿಳಿಯುವಂತೆ ಮಾಡುತ್ತೇವೆ’ ಎಂದು ಗುಡುಗಿದರು.

‘ಕಾಂಗ್ರೆಸ್‌ಗೆ ವಿರೋಧ ಪಕ್ಷವಾಗಿ ಜವಾಬ್ದಾರಿ ದೊಡ್ಡದಿದೆ. ಜಿಲ್ಲಾ ಕೇಂದ್ರಗಳ ಕಟ್ಟಡಗಳ ನಿರ್ವಹಣೆಗೆ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ 37 ಜಿಲ್ಲಾ ಕೇಂದ್ರಗಳಲ್ಲಿ ಕಚೇರಿ ನಿರ್ಮಾಣಕ್ಕೆ ಮತ್ತು ಹಳೇ ಕಟ್ಟಡ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT