ಮಂಗಳವಾರ, ಸೆಪ್ಟೆಂಬರ್ 21, 2021
23 °C

ಕೋವಿಡ್‌ ಹಗರಣ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜಿ.ಪರಮೇಶ್ವರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಚಿವರು ಕೋವಿಡ್ ನೆಪದಲ್ಲಿ ಸರ್ಕಾರದ ₹ 2 ಸಾವಿರ ಕೋಟಿ ಹಣ ತಮ್ಮ ಜೇಬಿಗಿಳಿಸಿ ಅಕ್ರಮ ನಡೆಸಿದ್ದು, ಈ ಸಂಬಂಧ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌ ಒತ್ತಾಯಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನ್ಯಾಯಾಂಗ ತನಿಖೆ ನಡೆದರೆ ರಾಜ್ಯ ಬಿಜೆಪಿ ಸರ್ಕಾರದ ಅವ್ಯವಹಾರ ಜನರಿಗೆ ಗೊತ್ತಾಗುತ್ತದೆ. ಅಕ್ರಮ ನಡೆದಿಲ್ಲ ಎನ್ನುವುದಾದರೆ ಸರ್ಕಾರ ಕೋವಿಡ್‌ ನಿರ್ವಹಣೆಗೆ ಮಾಡಿರುವ ಖರ್ಚು ವೆಚ್ಚದ ಶ್ವೇತಪತ್ರ ಹೊರಡಿಸಲಿ’ ಎಂದು ಆಗ್ರಹಿಸಿದರು.

‘ಜನ ಸಮುದಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ತಿಳಿದಿದೆ. ಕೊರೊನಾ ಸಂಕಷ್ಟದಲ್ಲೂ ಬಿಜೆಪಿ ತನ್ನ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಕೊರೊನಾ ಸೋಂಕಿನ ತಡೆಗೆ ಸೂಕ್ತ ಕ್ರಮ ಕೈಗೊಳ್ಳದ ಸರ್ಕಾರ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಹಣ ದೋಚಿದ್ದೆ ದೊಡ್ಡ ಸಾಧನೆ. ಜನರು ಸರ್ಕಾರದಿಂದ ಇಂತಹ ನೀಚ ಕೃತ್ಯ ನಿರೀಕ್ಷಿಸಿರಲಿಲ್ಲ’ ಎಂದು ಲೇವಡಿ ಮಾಡಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ, ವೈದ್ಯಕೀಯ ಸಚಿವರು, ಆರೋಗ್ಯ ಸಚಿವರು ಸೇರಿದಂತೆ ಸಂಪೂರ್ಣ ಸರ್ಕಾರ ಕೋವಿಡ್‌ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತಾವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಲಿ’ ಎಂದು ಸವಾಲು ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು