ಕೆಜಿಎಫ್: ‘ರಾಷ್ಟ್ರಭಕ್ತಿ ಮತ್ತು ನಾಡ ಪ್ರೀತಿ ಪ್ರಾಧಿಕಾರದ ಮೂಲ ಧ್ಯೇಯವಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಹೇಳಿದರು.
ಬೆಮಲ್ ಕಲಾ ಕ್ಷೇತ್ರದಲ್ಲಿ ಭಾನುವಾರ ಸುಗಮ ಸಂಗೀತ ಪರಿಷತ್, ಬೆಮಲ್ ಕನ್ನಡ ಮಿತ್ರರು, ಆಡಳಿತ ವರ್ಗ ಆಯೋಜಿಸಿದ್ದ ಅಮೃತ ಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಕೇವಲ ಲಿಪಿಯಲ್ಲ. ಅದು ಅಂತರಂಗದ ಭಾವನೆಗಳ ಸಂದೇಶವಾಗಿದೆ. ಯಾವ ಭಾಷೆ ಮನೆಯಂಗಳದ ಭಾಷೆ ಆಗುವುದಿಲ್ಲವೋ, ಆ ಭಾಷೆ ನಾಡಿನ ಭಾಷೆ ಆಗಲು ಸಾಧ್ಯವಿಲ್ಲ. ಅದಕ್ಕೆ ಸಂಕಲ್ಪ ಬೇಕಾಗಿದೆ. ಇಂತಹ ಸಂಕಲ್ಪ ಕನ್ನಡಿಗರ ಶಕ್ತಿಯಾಗಬೇಕು. ಕನ್ನಡವನ್ನು ಮಾತನಾಡಿದರೆ ಕೀಳರಿಮೆ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.
ಗಡಿ ಪ್ರದೇಶದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೆಲಸಗಳ ಜೊತೆಗೆ ಗಡಿ ಪ್ರದೇಶಗಳ ಅಭಿವೃದ್ಧಿ ಕೆಲಸಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾಧಿಕಾರಕ್ಕೆ ಸರ್ಕಾರ ಅಧಿಕಾರ ನೀಡಿದೆ. ಗಡಿನಾಡಿನಲ್ಲಿರುವ ವಿಭಿನ್ನ ಸಂಸ್ಕೃತಿಯ ಸಂಘರ್ಷದಲ್ಲಿ ಕನ್ನಡ ಮರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಕನ್ನಡ ಕಾಯುವ ಕೆಲಸ ಮಾಡಲಾಗುತ್ತಿದೆ ಎಂದರು.
300 ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಕನ್ನಡ ಮಿತ್ರರು ಸಂಸ್ಥೆಗೆ ಪ್ರತಿವರ್ಷ ₹ 1 ಲಕ್ಷ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಗಡಿ ಭಾಗದಲ್ಲಿ ಕನ್ನಡದ ಕಿಚ್ಚು ಆರಬಾರದು. ಅನಾಥ ಪ್ರಜ್ಞೆ ಕಾಣಬಾರದು. ಈ ಹಿನ್ನೆಲೆಯಲ್ಲಿ ನ. 2 ಮತ್ತು 3 ರಂದು ಗಡಿನಾಡ ಉತ್ಸವವನ್ನು ಬೆಂಗಳೂರಿನಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.
‘70 ಮತ್ತು 80ರ ದಶಕದಲ್ಲಿ ಸುಗಮ ಸಂಗೀತದ ಚಳವಳಿ ನಡೆಯಿತು. ಸುಗಮ ಸಂಗೀತ ಕವಿಯ ಭಾವನೆಯನ್ನು ಜನರಿಗೆ ನೇರವಾಗಿ ಮುಟ್ಟಿಸುತ್ತದೆ’ ಎಂದು ಬೆಮಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಈಶ್ವರ ಭಟ್ ಹೇಳಿದರು.
‘ಭಾಷೆ ಸಮ್ಮಿಲನ ಮತ್ತು ಸಂಘರ್ಷ ಎರಡನ್ನೂ ಸೃಷ್ಟಿಸುತ್ತದೆ. ಭಾವೈಕ್ಯ ಮತ್ತು ಸಹೋದರತ್ವ ಬೆಳೆಸಿಕೊಂಡು ಭಾಷೆ ಬೆಳೆಸಬೇಕು’ ಎಂದು ಉಪನ್ಯಾಸಕಿ ಬಿ.ಕೆ. ಮಂಜುಳಾ
ತಿಳಿಸಿದರು.
ಡಾ.ದೊಡ್ಡರಂಗೇಗೌಡ ಕವಿಗೋಷ್ಠಿ ನಡೆಸಿಕೊಟ್ಟರು. ಬಿ.ಆರ್. ಲಕ್ಷ್ಮಣರಾವ್ ಅವರು ವೆಂಕೋಬರಾವ್ ಪಡತಾರೆ ರಚಿತ ‘ಚಂದ್ರಮ ತಾರೆ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಂಜುಳಾ ಪರಮೇಶ್ ತಂಡದಿಂದ ನೃತ್ಯ ಕಾರ್ಯಕ್ರಮ
ನಡೆಯಿತು.
ಕವಿಯ ನೋಡಿ ಕವಿತೆ ಕೇಳಿ ಕಾರ್ಯಕ್ರಮದಲ್ಲಿ ಗಾಯಕರಾದ ನಗರ ಶ್ರೀನಿವಾಸ ಉಡುಪ, ವೈ.ಕೆ. ಮುದ್ದುಕೃಷ್ಣ, ನರಸಿಂಹನಾಯಕ್, ನಾಗಚಂದ್ರಿಕಾ, ಸೀಮಾ ನಾಯ್ಕರ್, ಕವಿಗಳಾದ ದುಂಡಿರಾಜ್, ನಾ. ದಾಮೋದರಶೆಟ್ಟಿ, ಸುಕನ್ಯಾ ಮಾರುತಿ , ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ದೊಡ್ಡವಾಡ ಭಾಗವಹಿಸಿದ್ದರು. ಸಮೀರ್ ಖೆಸ್ಸ್ ಎಬಿನೇಜರ್, ಮಾಲಾ ಶ್ರೀವತ್ಸ, ತಹಶೀಲ್ದಾರ್ ಕೆ.ಎನ್. ಸುಜಾತಾ, ಆಯುಕ್ತ ನವೀನ್ ಚಂದ್ರ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.