ಬುಧವಾರ, ಜನವರಿ 20, 2021
26 °C
ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನರಸಿಂಹಗೌಡ ನಾರಣಾಪುರ ಆಶಯ

ಕೆಜಿಎಫ್ ಉದ್ಯೋಗ ಸೃಷ್ಟಿಯ ತಾಣವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್‌: ಚಿನ್ನದ ಗಣಿಯ ಪುನರ್ ಸ್ಥಾಪನೆ ಜೊತೆಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿಕೊಟ್ಟು ನಗರವನ್ನು ಮಾದರಿ ನಗರವನ್ನಾಗಿ ಮಾಡಬೇಕು ಎಂದು ಕೆಜಿಎಫ್ ತಾಲ್ಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ಪ್ರೊ.ನರಸಿಂಹಗೌಡ ನಾರಣಾಪುರ ಹೇಳಿದರು.

ನಗರದ ಮಹಾವೀರ ಜೈನ್‌ ಕಾಲೇಜಿನಲ್ಲಿ ಭಾನುವಾರ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ನಗರವು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಶಾಲಾ ಕಾಲೇಜುಗಳನ್ನು ಹೊಂದಿ, ಶಿಕ್ಷಣ ರಂಗದಲ್ಲಿ ಉನ್ನತ ಸ್ಥಾನ ಗಳಿಸಿದೆ. ಪ್ರತಿ ಮನೆಯಲ್ಲಿಯೂ ವಿದ್ಯಾವಂತರಿದ್ದಾರೆ. ಸ್ಥಳೀಯವಾಗಿ ಉದ್ಯೋಗಾವಕಾಶಗಳು ಇಲ್ಲದ ಕಾರಣ ಸಾವಿರಾರು ಮಂದಿ ಪ್ರತಿನಿತ್ಯ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ. ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆಗೊಂಡರೆ, ಸ್ಥಳೀಯ ಯುವಶಕ್ತಿಯನ್ನು ಉಪಯೋಗಿಸಿಕೊಂಡು ತಾಲ್ಲೂಕನ್ನು ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ. ವಿಸ್ತಾರವಾದ ಖಾಲಿ ಪ್ರದೇಶಗಳಲ್ಲಿ ಐಟಿ, ಬಿಟಿ ಕಂಪನಿಗಳನ್ನು ಸ್ಥಾಪಿಸಬಹುದು ಎಂದರು.

ನಗರದಲ್ಲಿ ಎಲ್ಲ ವಿಧವಾದ ಪದವಿ, ಡಿಪ್ಲೊಮೋ, ಪಾಲಿಟೆಕ್ನಿಕ್‌, ನರ್ಸಿಂಗ್, ಡೆಂಟಲ್‌, ಶಿಕ್ಷಕರ ತರಬೇತಿ, ದೈಹಿಕ ಶಿಕ್ಷಣ ಇತ್ಯಾದಿ ವಿಷಯಗಳಲ್ಲಿ ಅಧ್ಯಯನ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ. ನಗರದಲ್ಲಿ ಸುಸಜ್ಜಿತವಾಗಿ ಗ್ರಂಥಾಲಯವನ್ನು ನಿರ್ಮಾಣ ಮಾಡಿ, ಜನರಲ್ಲಿ ಓದುವ ಸಂಸ್ಕೃತಿಯನ್ನು ಉಂಟು ಮಾಡಬೇಕೆಂದು
ಆಶಿಸಿದರು.

ಚಿನ್ನದ ನಿಕ್ಷೇಪಗಳು ಇನ್ನೂ ಇವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ. ಮಾರಿಕುಪ್ಪಂ, ಬಿಸಾನತ್ತಂ, ಚಿಗರಿಕುಂಟೆ ಮುಂತಾದ ಗಣಿಗಳ ಭೂ ಪ್ರದೇಶದಲ್ಲಿ ಗಣಿ ಕಾರ್ಯಕ್ಕೆ ಚಾಲನೆ ನೀಡಿದರೆ, ಬೀದಿ ಪಾಲಾಗಿರುವ ಸಾವಿರಾರು ಕುಟುಂಬಗಳಿಗೆ ಮತ್ತು ಉದ್ಯೋಗ ಸೃಷ್ಟಿಸಿದಂತಾಗುತ್ತದೆ. ಚಿನ್ನದ ಗಣಿಯಿಂದ ಸಂಸ್ಕರಿಸಿದ ಮಣ್ಣನ್ನು ಶೇಖರಿಸಿಟ್ಟಿರುವ ಸಯನೈಡ್‌ ಗುಡ್ಡದಲ್ಲಿರುವ ಮಣ್ಣು ಜನರಿಗೆ ಆರೋಗ್ಯದ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಆದ್ದರಿಂದ ಸಯನೈಡ್‌ ಗುಡ್ಡದ ಮಣ್ಣನ್ನು ಸಿಮೆಂಟ್‌, ಇಟ್ಟಿಗೆ ಮೊದಲಾದವುಗಳಿಗೆ ಬಳಸಿಕೊಂಡು ಗುಡ್ಡವನ್ನು ಖಾಲಿ ಮಾಡುವುದು ಸೂಕ್ತ ಎಂದರು.

ಬೇತಮಂಗಲ ಕೆರೆಯಲ್ಲಿ ಸಂಪೂರ್ಣವಾಗಿ ಹೂಳು ತೆಗೆಸಬೇಕಾಗಿದೆ. ಹೂಳು ಮಣ್ಣನ್ನು ತೋಟಗಳಿಗೆ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರೂ ಕೈ ಜೋಡಿಸಬೇಕು. ಮಳೆ ನೀರು ಸಂಗ್ರಹ ಯೋಜನೆಯಡಿ ನೀರನ್ನು ಸಂಗ್ರಹಿಸುವ ಕೆಲಸ ತ್ವರಿತವಾಗಿ ಆಗಬೇಕು ಎಂದು ನಾರಣಾಪುರ ಹೇಳಿದರು.

ಕೋಲಾರ ಜಿಲ್ಲೆಯಲ್ಲಿ ಜನಪದ ಸಾಹಿತ್ಯವನ್ನು ಸಂಗ್ರಹಿಸಿ, ಸಂಶೋಧನೆ ನಡೆಸಿ ವಿಶ್ಲೇಷಣೆ ಮಾಡುವ ಕೆಲಸ ಆಗಬೇಕು. ಅದನ್ನು ಮುಂದಿನ ಪೀಳಿಗೆಗೆ ರವಾನಿಸಬೇಕು ಎಂದು ಅವರು ಆಗ್ರಹಿಸಿದರು.

ಶಾಸನಗಳ ಭಾಷಾಂತರ: ಕೆಜಿಎಫ್‌ನಲ್ಲಿ 200ಕ್ಕೂ ಹೆಚ್ಚು ಶಾಸನಗಳು ಇವೆ. ಉರ್ದು, ತಮಿಳು ಭಾಷೆಯಲ್ಲಿರುವ ಶಾಸನಗಳನ್ನು ಭಾಷಾಂತರ ಮಾಡುವ ಕೆಲಸ ಆಗಬೇಕು. ನಗರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ. ಹೋಂಡಾ ಕಂಪನಿ ನಿರ್ಮಾಣ ಮಾಡುತ್ತಿರುವ ಸ್ಟೇಡಿಯಂ ಕಟ್ಟಡದಲ್ಲಿಯೇ ಗ್ರಂಥಾಲಯ ನಿರ್ಮಾಣ ಮಾಡಲಾಗುವುದು. ಬೆಮಲ್‌ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಾಗುವುದು ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

ತಾಲ್ಲೂಕು ದರ್ಶನ: 40 ವರ್ಷಗಳ ಹಿಂದೆ ಭಾಷಾ ಸಂಘರ್ಷ ವಿಜೃಂಭಿಸುತ್ತಿದ್ದ ಕೆಜಿಎಫ್‌ನಲ್ಲಿ ಈಗ ಸಾಮರಸ್ಯ ಎದ್ದುಕಾಣುತ್ತಿದೆ. ಕನ್ನಡದ ಜೊತೆಗೆ ತಮಿಳರು ಹೊಂದಿಕೊಂಡಿದ್ದಾರೆ. ಆರ್ಥಿಕ, ಔದ್ಯೋಗಿಕ ಬದಲಾವಣೆ ಕನ್ನಡದ ಕಡೆಗೆ ವಾಲುವಂತೆ ಮಾಡಿದೆ. ಭಾಷಾ ಸಂಘರ್ಷ ಅನುಸಂಧಾನವಾಗಿ ಮಾರ್ಪಾಟಾದ ಬಗ್ಗೆ ಅಧ್ಯಯನ ಮಾಡಬೇಕು. ಈ ನಿಟ್ಟಿನಲ್ಲಿ ಕೆಜಿಎಫ್ ತಾಲ್ಲೂಕು ದರ್ಶನ ತಿಳಿಸುವ ಪುಸ್ತಕವನ್ನು ಪ್ರಕಟಿಸಬೇಕು. ಶಾಸಕರು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಎರಡು ಸಾವಿರ ವರ್ಷದಿಂದ ಅನ್ನ ನೀಡುವ ಭಾಷೆಯಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ರಾಜ್‌ಕುಮಾರ್‌ ಹೇಳಿದರು.

ಸಮ್ಮೇಳನಾಧ್ಯಕ್ಷರ ಬದುಕು ಬರಹಗಳ ಬಗ್ಗೆ ಡಾ.ಬಿ.ಕೆ.ಮಂಜುಳಾ ಮಾತನಾಡಿದರು. ಜನಪದ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ಡಾ.ಜಯಲಲಿತ, ಡಿವಿಜಿ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು ಕುರಿತು ಡಾ.ಶ್ರೀನಿವಾಸ್‌ ಪ್ರಸಾದ್‌ ಮಾತನಾಡಿದರು.

ಹಿರಿಯ ಕನ್ನಡ ಹೋರಾಟಗಾರ ಎ.ಜಿ.ಗುರುಶಾಂತಪ್ಪ ಸೇರಿದಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಜಿ.ಸುಧಾಕರ್ ರಚಿತ ಕೋಲಾರ ಜಿಲ್ಲಾ ಜಾನಪದ ಕಥೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್‌, ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ಕೆಡಿಎ ಅಧ್ಯಕ್ಷೆ ಅಶ್ವಿನಿ, ತಹಶೀಲ್ದಾರ್ ಕೆ.ಎನ್‌.ಸುಜಾತಾ, ಪ್ರೊ. ವೆಂಕಟರಮಣಪ್ಪ, ಬೆಮಲ್‌ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್, ಕನ್ನಡ ಮಿತ್ರರು ಅಧ್ಯಕ್ಷ ಆರ್.ಎಸ್‌.ಪಾಟೀಲ್‌, ಎಸ್‌.ಎನ್‌.ರಾಜಗೋಪಾಲಗೌಡ, ವಿ.ಬಿ.ದೇಶಪಾಂಡೆ, ರವಿಪ್ರಕಾಶ್, ನರಸಿಂಹ ಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.