ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಯುವಜನ ಆಯೋಗ ರಚಿಸಲಿ: ಅರಿವು ಶಿವಪ್ಪ 

Last Updated 10 ಜನವರಿ 2020, 13:02 IST
ಅಕ್ಷರ ಗಾತ್ರ

ಕೋಲಾರ: ‘ಯುವಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯದಲ್ಲಿ ಯುವಜನ ಆಯೋಗ ರಚಿಸಬೇಕು’ ಎಂದು ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಅರಿವು ಶಿವಪ್ಪ ಅಭಿಪ್ರಾಯಪಟ್ಟರು.

ಯುವ ಮುನ್ನಡೆ ಹಾಗೂ ಸಂವಾದ ಸಂಘಟನೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವಜನರ ಆರೋಗ್ಯದ ಅರಿವಿನ ಅಭಿಯಾನದಲ್ಲಿ ಮಾತನಾಡಿ, ‘ಯುವಕ ಯುವತಿಯರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಗಂಭೀರ ಪ್ರಯತ್ನ ನಡೆಯಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನೂಕೂಲವಾಗುತ್ತದೆ. ಜತೆಗೆ ಯುವಕ ಯುವತಿಯರ ಸರ್ವತ್ತೋಮುಖ ಅಭಿವೃದ್ಧಿಗೆ ಸಹಾಯವಾಗುತ್ತದೆ’ ಎಂದು ಹೇಳಿದರು.

‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ರೈತರ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥ ಉತ್ಪಾದಿಸುತ್ತಾರೆ. ಆದರೆ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ರೈತರು ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕ, ರಸಗೊಬ್ಬರ ಬಳಸುತ್ತಿರುವುದರಿಂದ ಆಹಾರ ಪದಾರ್ಥಗಳು ವಿಷಮಯವಾಗುತ್ತಿವೆ. ಇದರಿಂದ ವಿವಿಧ ಕಾಯಿಲೆ ಬರುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಯುವಕ ಯುವತಿಯರಿಗೆ ಮಾನಸಿಕ ಆರೋಗ್ಯ ಬಹಳ ಮುಖ್ಯ. ವಿದ್ಯಾರ್ಥಿ ಜೀವನವು ಏರಿಳಿತದಿಂದ ಕೂಡಿರುತ್ತದೆ. ಈ ಹಂತದಲ್ಲಿ ವ್ಯಕ್ತಿಯು ತನ್ನ ಭಾವನೆ, ದೈಹಿಕ ಬದಲಾವಣೆ, ಪಾಲಕರು ಮತ್ತು ಸ್ನೇಹಿತರು ಸೇರಿದಂತೆ ಪ್ರಮುಖ ಸಂಬಂಧಗಳಲ್ಲಿ ಉಂಟಾಗುವ ಬದಲಾವಣೆ ಆಧಾರದ ಮೇಲೆ ಹೊಸ ಗುರುತು ಹುಡುಕಿಕೊಳ್ಳುತ್ತಾನೆ’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಗುಂಡಪ್ಪ ತಿಳಿಸಿದರು.

ಕಾಳಜಿ ತೋರಬೇಕು

‘ಮನುಷ್ಯ ಖಿನ್ನತೆಗೆ ಒಳಗಾದರೆ ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡದ ಜೊತೆಗೆ ಉಂಟಾಗುವ ಪ್ರಮುಖ ಬದಲಾವಣೆ ಕಾರಣದಿಂದ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾನೆ. ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಿ, ಮಕ್ಕಳ ಮನೋವಿಕಾಸನದ ಬಗ್ಗೆ ಕಾಳಜಿ ತೋರಬೇಕು’ ಎಂದು ಕಿವಿಮಾತು ಹೇಳಿದರು.

‘ಯುವಕರ ವ್ಯಕ್ತಿತ್ವ ವಿದ್ಯಾರ್ಥಿ ಜೀವನದ ಹಂತದಲ್ಲಿ ರೂಪುಗೊಳ್ಳುತ್ತದೆ. ಅವರ ಮಿದುಳಿನ ಭಾಗಗಳು ವೃದ್ಧಿಯಾಗುವ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ, ಸಮಯ ನಿರ್ವಹಣೆ ಮಾಡುವ, ಗುರಿ ಯೋಜಿಸಿಕೊಳ್ಳುವ ಮತ್ತು ಸಮಸ್ಯೆ ಪರಿಹಾಕ್ಕೆ ಸಂಬಂಧಪಟ್ಟಂತೆ ಗೊಂದಲ ಉಂಟಾಗಿ ಆರೋಗ್ಯ ಹಾಳಾಗುತ್ತದೆ’ ಎಂದು ವಿವರಿಸಿದರು.

‘ಅತಿಯಾಗಿ ಮೊಬೈಲ್ ಬಳಸುವುದರಿಂದ ನಿದ್ರೆ ಸಮಸ್ಯೆ ಎದುರಾಗುತ್ತದೆ. ಅಸಮತೋಲಿತ ಆಹಾರದ ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗುತ್ತದೆ. ಇದಕ್ಕೆ ಮನೋವೈದ್ಯರ ಸಹಾಯ ಪಡೆಯುವುದು ಉತ್ತಮ. ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೌಲಭ್ಯವು ಸದುದ್ದೇಶಕ್ಕೆ ಬಳಕೆಯಾಗಬೇಕು’ ಎಂದು ಸಲಹೆ ನೀಡಿದರು.

ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಸಿ.ಎ.ರಮೇಶ್‌, ಉಪನ್ಯಾಸಕ ಅಬ್ದುಲ್, ಯುವ ಮುನ್ನಡೆ ಸಂಘಟನೆ ಸದಸ್ಯರಾದ ಶಶಿರಾಜ್, ಸುನಿತಾ, ಎನ್‌.ಗೌತಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT