ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಸಂಪಾದನೆಗಿಂತ ಜೀವ ದೊಡ್ಡದು: ಜಿಲ್ಲಾಧಿಕಾರಿ ಸೆಲ್ವಮಣಿ

ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೆಲ್ವಮಣಿ ಕಿವಿಮಾತು
Last Updated 26 ಮಾರ್ಚ್ 2021, 15:31 IST
ಅಕ್ಷರ ಗಾತ್ರ

ಕೋಲಾರ: ‘ವೈದ್ಯಕೀಯ ವೃತ್ತಿಯಲ್ಲಿ ಹಣ ಸಂಪಾದನೆಗಿಂತ ಮಾನವೀಯತೆ ಮುಖ್ಯ. ಹಣಕ್ಕಿಂತ ಜೀವ ದೊಡ್ಡದು’ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಮಾನವೀಯ ಮೌಲ್ಯಗಳಿಗೆ ಒತ್ತು ಕೊಡಬೇಕು. ಇದರಿಂದ ಬಡವರಿಗೆ, ಹಿಂದುಳಿದವರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ 2 ಪ್ರಕರಣಗಳನ್ನು ಇತ್ಯರ್ಥಕ್ಕೆ ಪ್ರಸ್ತಾಪಿಸಲಾಯಿತು. ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಯಲ್ಲಿ 2020ರ ಆ.7ರಿಂದ 22 ದಿನಗಳ ಕಾಲ ಕೋವಿಡ್‌ಗೆ ಚಿಕಿತ್ಸೆ ಪಡೆದಿದ್ದ ಸಜ್ಜಾದ್‌ ದೌಲಾ ಎಂಬುವರು, ‘ಬಡವನಾದ ನಾನು ವೈದ್ಯಕೀಯ ವೆಚ್ಚವಾಗಿ ಜಾಲಪ್ಪ ಆಸ್ಪತ್ರೆಗೆ ₹ 36 ಸಾವಿರ ಪಾವತಿಸಿದ್ದೇನೆ. ಆ ಹಣ ವಾಪಸ್‌ ಕೊಡಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಸರ್ಕಾರವು 2020ರ ಆ.21ರ ನಂತರ ಕೊರೊನಾ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ಕೊಡಬೇಕೆಂದು ಆದೇಶಿಸಿತ್ತು. ಆದರೆ, ತಾವು ಅದಕ್ಕಿಂತ ಮುಂಚಿತವಾಗಿ ಚಿಕಿತ್ಸೆ ಪಡೆದಿರುವುದರಿಂದ ವೈದ್ಯಕೀಯ ವೆಚ್ಚ ಭರಿಸಲು ಅವಕಾಶವಿಲ್ಲ. ಆದರೂ ಆಸ್ಪತ್ರೆ ಆಡಳಿತ ಮಂಡಳಿಯು ಮಾನವೀಯತೆ ದೃಷ್ಠಿಯಿಂದ ವೈದ್ಯಕೀಯ ವೆಚ್ಚದಲ್ಲಿ ಶೇ 50ರಷ್ಟು ವಾಪಸ್‌ ನೀಡಬೇಕು’ ಎಂದು ಆದೇಶಿಸಿದರು. ಇದಕ್ಕೆ ಜಾಲಪ್ಪ ಆಸ್ಪತ್ರೆ ಅಧಿಕಾರಿಗಳು ಸಮ್ಮತಿಸಿದರು.

2ನೇ ಪ್ರಕರಣ: ಚಿಕಿತ್ಸೆಗಾಗಿ 2020ರ ಆ.20ರಂದು ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದ ಪೂರ್ಣಿಮಾ ಎಂಬುವರು ಮೊದಲ ದಿನ ಎಪಿಎಲ್ ಕಾರ್ಡ್, ಎಬಿಆರ್‌ಕೆ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಪತ್ರ ಸಲ್ಲಿಸುವುದಿಲ್ಲ. ಆದರೆ, ಎರಡನೇ ದಿನ ಆ ಎಲ್ಲಾ ದಾಖಲೆಪತ್ರಗಳನ್ನು ಸಲ್ಲಿಸಲು ಹೋದಾಗ ಆಸ್ಪತ್ರೆಯವರು ಸ್ವೀಕರಿಸುವುದಿಲ್ಲ.

ಹೀಗಾಗಿ ಪೂರ್ಣಿಮಾ ಅವರು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಶೇ 30ರಷ್ಟು ಚಿಕಿತ್ಸಾ ವೆಚ್ಚ ವಾಪಸ್‌ ಪಡೆಯಲು ಅವಕಾಶವಾಗಿರಲಿಲ್ಲ. ಈ ಸಂಬಂಧ ಅವರು ₹ 1.20 ಲಕ್ಷ ಚಿಕಿತ್ಸಾ ವೆಚ್ಚ  ಪಾವತಿಸಲಾಗಿದೆ ಎಂದು ಕುಂದು ಕೊರತೆ ಪರಿಹಾರ ಸಮಿತಿಗೆ ದೂರು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ‘ಎಪಿಎಲ್ ಕಾರ್ಡ್‌ದಾರರಿಗೆ ಶೇ 30ರಷ್ಟು ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಪೂರ್ಣಿಮಾ ಅವರಿಗೆ ಆಸ್ಪತ್ರೆಯವರು ಈಗಾಗಲೇ ಚಿಕಿತ್ಸಾ ವೆಚ್ಚದಲ್ಲಿ ₹ 10 ಸಾವಿರ ರಿಯಾಯಿತಿ ನೀಡಿದ್ದಾರೆ. ಚಿಕಿತ್ಸಾ ವೆಚ್ಚದ ಶೇ 30ರಷ್ಟು ಎಂದರೆ ₹ 29 ಸಾವಿರವನ್ನು ಆಸ್ಪತ್ರೆಯವರು ಪೂರ್ಣಿಮಾ ಅವರಿಗೆ ವಾಪಸ್‌ ನೀಡಬೇಕು’ ಎಂದು ಆದೇಶಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಾಧಿಕಾರಿ ಡಾ.ನಾರಾಯಣಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT