ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಯ ಅಮಾವಾಸ್ಯೆ: ಹಿರಿಯರ ಸ್ಮರಣೆ

Last Updated 6 ಅಕ್ಟೋಬರ್ 2021, 13:40 IST
ಅಕ್ಷರ ಗಾತ್ರ

ಕೋಲಾರ: ಪಿತೃಗಳಿಗೆ ತರ್ಪಣ ಬಿಡುವ ಮೂಲಕ ಅವರ ಆಶೀರ್ವಾದ ಬಯಸುವ ನಂಬಿಕೆಯ ಮಹಾಲಯ ಅಮಾವಾಸ್ಯೆಯನ್ನು ಜಿಲ್ಲೆಯಾದ್ಯಂತ ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕುಟುಂಬ ಸದಸ್ಯರೆಲ್ಲಾ ಒಟ್ಟಾಗಿ ಸ್ಮಶಾನಗಳಿಗೆ ತೆರಳಿ ಮೃತ ಹಿರಿಯರ ಸಮಾಧಿಗಳಿಗೆ ಪೂಜೆ ಸಲ್ಲಿಸಿ ಹಾಗೂ ತಿಲತರ್ಪಣ ಬಿಟ್ಟು ಶ್ರದ್ಧಾ ಕಾರ್ಯ ನೆರವೇರಿಸಿದರು. ಮತ್ತೆ ಕೆಲ ಕುಟುಂಬಗಳ ಸದಸ್ಯರು ಮನೆಯಲ್ಲೇ ಪೂಜೆ ಸಲ್ಲಿಸಿ ಪಿಂಡ ಪ್ರದಾನ ಮಾಡುವ ಮೂಲಕ ಹಿರಿಯರನ್ನು ಸ್ಮರಿಸಿದರು.

ಪೂರ್ವಜರಿಗೆ ಗೌರವ ಸಲ್ಲಿಸುವ ತಿಂಗಳು ಪಿತೃಪಕ್ಷವಾಗಿದ್ದು, ಈ ಅವಧಿಯಲ್ಲಿ ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಮೃತ ಹಿರಿಯರನ್ನು ಸ್ಮರಿಸಿ ಪೂಜೆ ಸಲ್ಲಿಸುವ ಪದ್ಧತಿ ಆಚರಣೆಯಲ್ಲಿದೆ. ಕೆಲ ಮನೆಗಳಲ್ಲಿ ಪೂಜೆಗೆ ಹೊಸ ಬಟ್ಟೆ ಇಡುವುದರ ಜತೆಗೆ ಪಿಂಡ ಪ್ರದಾನ ಮತ್ತಿತರ ಶ್ರದ್ಧಾ ಕಾರ್ಯ ಮಾಡಲಾಗುತ್ತದೆ.

ಅನ್ನದಾನಕ್ಕೆ ಮಹತ್ವ: ಅನ್ನದಾನ ಅಥವಾ ಹಸಿದಿರುವವರಿಗೆ ಆಹಾರ ನೀಡುವುದು ಪಿತೃಪಕ್ಷದ 15 ದಿನಗಳಲ್ಲಿ ನಡೆಯುವ ಪ್ರಮುಖ ಕಾರ್ಯವಾಗಿದ್ದು, ಈ ಆಚರಣೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಪೂರ್ವಜರ ಆತ್ಮ ಸ್ವರ್ಗಕ್ಕೆ ಸೇರುತ್ತದೆ ಎಂಬ ನಂಬಿಕೆ ಹಿಂದೂಗಳಲ್ಲಿದೆ.

ಮಹಾಭಾರತದಲ್ಲಿ ಕರ್ಣನು ಅರ್ಜುನನಿಂದ ಹತನಾದ ನಂತರ ದೇವದೂತರು ಆತನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ಆಗ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. ಬೆಳ್ಳಿ, ಬಂಗಾರ ಮಾತ್ರ ಕಾಣುತ್ತದೆ. ಆಗ ಕರ್ಣ ಯಮನನ್ನು ಪ್ರಾರ್ಥಿಸಿದಾಗ ಯಮ ಪ್ರತ್ಯಕ್ಷವಾಗಿ ಭಾದ್ರಪದ ಮಾಸದ ದಿನಗಳಂದು ದಾನ ಮಾಡಿದರೆ ಒಳಿತು ಎಂದು ಸೂಚಿಸುತ್ತಾನೆ. ನಂತರ ಕರ್ಣ ಮತ್ತೆ ಭೂಮಿಗೆ ಬಂದು ಅನ್ನದಾನ, ವಸ್ತ್ರದಾನ ಮಾಡಿ ಪುನಃ ಸ್ವರ್ಗಕ್ಕೆ ವಾಪಸ್‌ ಹೋಗುತ್ತಾನೆ ಎಂಬ ಪ್ರತೀತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT