ಮಂಗಳವಾರ, ಆಗಸ್ಟ್ 9, 2022
20 °C

ಮಣ್ಣಿನಲ್ಲಿ ತೇವಾಂಶ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬೆಳೆಗಳ ಸಂರಕ್ಷಣೆಗಾಗಿ ರೈತರು ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಣ್ಣಿನಲ್ಲಿ ತೇವಾಂಶವು ಮಣ್ಣಿನ ಕಣ ಹಾಗೂ ಕಣಗಳ ಜೋಡಣೆಯಿಂದಾಗುವ ಸೂಕ್ಷ್ಮ ರಂಧ್ರಗಳಲ್ಲಿ ಸಂಗ್ರಹವಾಗುತ್ತದೆ. ಮಣ್ಣಿನ ಸಾವಯವ ಅಂಶವು ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಲ್ಲದು. ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.

ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್ ಹಾಕಬೇಕು. ಹಸಿರೆಲೆ ಗೊಬ್ಬರಗಳ ಹೇರಳ ಬಳಕೆ, ಸಮತೋಲನ ಪೋಷಕಾಂಶ ಪೂರೈಕೆಯಲ್ಲಿ ಪೊಟ್ಯಾಶ್ ಪೋಷಕಾಂಶಕ್ಕೆ ಒತ್ತು ನೀಡುವುದು ಮುಖ್ಯ. ಪೊಟ್ಯಾಶ್ ಪೋಷಕಾಂಶವನ್ನು ಬೆಳೆಗಳಲ್ಲಿ ಶಿಫಾರಸ್ಸಿಗಿಂತ ಶೇ 25ರಷ್ಟು ಹೆಚ್ಚಾಗಿ ನೀಡುವುದರಿಂದ ಬೆಳೆಗೆ ಬರ ನಿರೋಧಕ ಶಕ್ತಿ ನೀಡುತ್ತದೆ ಮತ್ತು ಮಣ್ಣಿನಲ್ಲಿ ತೇವಾಂಶದ ಚಲನೆಯನ್ನು ನಿಯಂತ್ರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಮಣ್ಣಿನ ಮೇಲೆ ಸಾವಯವ ಪದಾರ್ಥ, ಕಳೆ ಹೊದಿಕೆ ಹಾಕುವುದರಿಂದ ಮಣ್ಣಿಗೆ ಸಂಧಿಸುವ ಸೂರ್ಯರಶ್ಮಿ ಕಡಿಮೆಗೊಂಡು ತೇವಾಂಶ ಆವಿಯಾಗುವ ಪ್ರಮಾಣ ತಗ್ಗುತ್ತದೆ. ಕಳೆಗಳನ್ನು ತೆಗೆದು ಮಣ್ಣಿಗೆ ಹೊದಿಕೆ ಹಾಕಿ ಜಮೀನು ಸ್ವಚ್ಛವಾಗಿ ಇಡುವುದರಿಂದ ಕಳೆಗಳಿಂದಾಗುವ ತೇವಾಂಶ ನಷ್ಟ ತಗ್ಗಿಸಬಹುದು. ಪುನರಾವರ್ತಿತ ಅಂತರ ಬೇಸಾಯದಿಂದ 2-3 ಸೆಂ.ಮೀ ಮೇಲ್ಮಣ್ಣು ಪುಡಿಯಾಗುವಂತೆ ಕುಂಟೆ ಹೊಡೆದು ಒಣ ಮಣ್ಣಿನ ಹೊದಿಕೆ ಸಿದ್ಧಪಡಿಸಬಹುದು ಎಂದು ವಿವರಿಸಿದ್ದಾರೆ.

ಬೆಳೆ ಅವಧಿಯಲ್ಲಿ ಪುನರಾವರ್ತಿತ ಅಂತರ ಬೇಸಾಯ ಮಾಡುವುದರಿಂದ ತೇವಾಂಶ ಆವಿಯಾಗುವ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ. ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಹೈಡ್ರೋಜೆಲ್ ಅನ್ನು ಗಿಡದ ಬುಡಕ್ಕೆ ಹಾಕಬೇಕು ಹಾಗೂ ಹನಿ ನೀರಾವರಿ ಪದ್ಧತಿ ಮೂಲಕ ಕಡಿಮೆ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಬೇಕು. ಹೆಚ್ಚಿನ ಮಾಹಿತಿಗೆ 7829512236 ಮೊಬೈಲ್‌ ಸಂಖ್ಯೆ ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿ ಕ್ಲಿನಿಕ್) ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.