ಸೋಮವಾರ, ಸೆಪ್ಟೆಂಬರ್ 27, 2021
24 °C
ಎನ್‌ಎಸ್‌ಎಸ್‌ ಶಿಬಿರ

ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಕಲ್ಪ ಮಾಡಿ: ಕೇಶವಮೂರ್ತಿ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಜನರಲ್ಲಿ ನೈರ್ಮಲ್ಯದ ಅರಿವು ಮೂಡಿಸಬೇಕು’ ಎಂದು ವೇಮಗಲ್ ಪೊಲೀಸ್ ಠಾಣೆ ಎಸ್‍ಐ ಕೇಶವಮೂರ್ತಿ ಕಿವಿಮಾತು ಹೇಳಿದರು.

ವೇಮಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್‌ ಘಟಕವು ತಾಲ್ಲೂಕಿನ ಸೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲೆರಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಗ್ರಾಮೀಣ ಭಾಗದ ಜನರಲ್ಲಿ ಸ್ವಚ್ಛತೆಯ ಅರಿವಿನ ಕೊರತೆಯಿದೆ. ಮನೆ ಬಳಿಯೇ ತಿಪ್ಪೆ ಹಾಕಿಕೊಳ್ಳುವುದು, ನೀರಿನ ಮೂಲಗಳ ಬಳಿ ಕಸ ಸುರಿಯುವುದು ಸಾಮಾನ್ಯವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಬರುತ್ತಿವೆ. ಮತ್ತೊಂದೆಡೆ ಪರಿಸರ ಮಾಲಿನ್ಯವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯವಾಗಿರಲು ಸಾಧ್ಯ. ಸರ್ಕಾರವೇ ಸ್ವಚ್ಛ ಭಾರತ್ ಯೋಜನೆ ಜಾರಿಗೆ ತಂದಿದ್ದು, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ. ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಮನುಷ್ಯನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಹೀಗಾಗಿ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧಿಸಿದೆ. ಬಟ್ಟೆ ಚೀಲ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ಈ ಹಿಂದೆ ಗ್ರಾಮೀಣ ಭಾಗದಲ್ಲಿ ಮನೆಗೊಬ್ಬರಂತೆ ಗುಂಪುಗೂಡಿ ಗ್ರಾಮ ಸ್ವಚ್ಛತೆ, ರಸ್ತೆ ದುರಸ್ತಿ, ಗದ್ದೆ ತೋಟಗಳಿಗೆ ಕಾಲುವೆ ನಿರ್ಮಾಣದಂತಹ ಕೆಲಸ ಸಾಮೂಹಿಕವಾಗಿ ನಿರ್ವಹಿಸುತ್ತಿದ್ದರು. ಆದರೆ, ಆಧುನಿಕತೆ ಬೆಳೆದಂತೆ ಮನೆ ಮುಂದಿನ ಚರಂಡಿ ಸ್ವಚ್ಛ ಮಾಡಲು ಜನ ಹಿಂದೇಟು ಹಾಕುತ್ತಾರೆ. ಎಲ್ಲದಕ್ಕೂ ಸರ್ಕಾರ ಅಥವಾ ಗ್ರಾಮ ಪಂಚಾಯಿತಿ ಕಡೆ ಕೈತೋರಿಸುವ ಪರಿಪಾಠ ಬೆಳೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಭವಿಷ್ಯದ ಪ್ರಜೆಗಳು: ‘ಶಿಬಿರದಲ್ಲಿ ಕಾಲೇಜಿನ 100 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ, ಕಳೆ ಗಿಡಗಳ ನಾಶ, ನೀರಿನ ಮೂಲಗಳ ಬಳಿ ನೈರ್ಮಲ್ಯ ಕಾಪಾಡುವ ಕೆಲಸ ಮಾಡಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ನಾರಾಯಣಸ್ವಾಮಿ ಹೇಳಿದರು.

‘ವಿದ್ಯಾರ್ಥಿ ಸಮುದಾಯದಲ್ಲಿ ಗ್ರಾಮೀಣ ಜನರ ಸೇವೆ ಮಾಡುವ ಸಾಮಾಜಿಕ ಕಾಳಜಿ ಬೆಳೆಸುವುದು ಮತ್ತು ಶ್ರಮದಾನದ ಮಹತ್ವ ತಿಳಿಸುವುದು ಶಿಬಿರದ ಉದ್ದೇಶವಾಗಿತ್ತು. ವಿದ್ಯಾರ್ಥಿಗಳೇ ಭವಿಷ್ಯದ ಪ್ರಜೆಗಳು. ಮಕ್ಕಳೇ ದೇಶದ ಬುನಾದಿ. ಸಮಾಜ ಸರಿ ದಾರಿಯಲ್ಲಿ ಸಾಗಿದರೆ ಮಾತ್ರ ದೇಶದಲ್ಲಿ ಶಾಂತಿ ನೆಲೆಗೊಳ್ಳುತ್ತದೆ. ಮಕ್ಕಳು ಅಡ್ಡದಾರಿ ಹಿಡಿದರೆ ದೇಶದ ಭವಿಷ್ಯ ಕತ್ತಲಾಗುತ್ತದೆ’ ಎಂದು ತಿಳಿಸಿದರು.

ಜಾಗೃತಿ ಮೂಡಿಸಿ: ‘ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಭಾವನೆ ಬಲಗೊಳಿಸುವುದರ ಜತೆಗೆ ಗ್ರಾಮೀಣ ಜನರ ಸಂಕಷ್ಟಗಳ ಬಗ್ಗೆ ಅರಿವು ಮೂಡಿಸಲು ಶಿಬಿರ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೂ ಜಾಗೃತಿ ಮೂಡಿಸಬೇಕು. ಸೇವಾ ಮನೋಭಾವ ಮೈಗೂಡಿಸಿಕೊಂಡು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಎನ್‌ಎಸ್‌ಎಸ್‌ ಘಟಕದ ಅಧಿಕಾರಿ ರಾಮಕೃಷ್ಣಪ್ಪ ಸಲಹೆ ನೀಡಿದರು.

ಗ್ರಾಮದ ಮುಖಂಡರಾದ ಮುನಿರಾಜು, ಆರ್.ಆಂಜಿನಪ್ಪ, ಬೈರೇಗೌಡ, ಎಂ.ರಮೇಶ್, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.