ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ | ಪ್ರತಿಷ್ಠೆಯಾದ ಮಾವು ವಹಿವಾಟು

ಆನ್‌ಲೈನ್‌ನಲ್ಲಿ ವಹಿವಾಟು ನಡೆಸಲು ರೈತರ ಒತ್ತಾಯ
Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಕೊರೊನಾ ಭೀತಿಯ ನಡುವೆ ಮಾವಿನಕಾಯಿ ವಹಿವಾಟು ನಡೆಸುವುದು ರೈತ ಮುಖಂಡರು ಹಾಗೂ ಮಂಡಿ ಮಾಲೀಕರ ಮಧ್ಯೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಕಾಯಿ ವಹಿವಾಟು ನಡೆಸಿದಲ್ಲಿ ಕೊರೊನಾ ಸೋಂಕು ಹರಡುವ ಸಂಭವ ಇರುವುದರಿಂದ, ವಹಿವಾಟನ್ನು ತೋಟದಲ್ಲಿಯೇ ನಡೆಸಬೇಕು ಅಥವಾ ಆನ್‌ಲೈನ್ ಮೂಲಕ ಕಾಯಿ ಮಾರಾಟ ಮಾಡಬೇಕು ಎಂಬುದು ರೈತ ಮುಖಂಡರ ನಿಲುವಾಗಿದೆ. ಹೆಚ್ಚಿನ ಸಂಖ್ಯೆಯ ಮಾವು ಬೆಳೆಗಾರರ ಅಭಿಪ್ರಾಯವೂ ಇದೇ ಆಗಿದೆ.

ಶುಕ್ರವಾರ ಸಭೆ ನಡೆಸಿದ ವಿವಿಧ ರೈತ ಪರ ಸಂಘಟನೆಗಳ ಮುಖಂಡರು ಹಾಗೂ ಮಾವು ಬೆಳೆಗಾರರು ಈ ನಿರ್ಣಯ ಕೈಗೊಳ್ಳುತ್ತಿದ್ದಂತೆ, ಪಟ್ಟಣದ ಮಾವಿನ ಕಾಯಿ ಮಂಡಿಯೊಂದರಲ್ಲಿ ಸಭೆ ಸೇರಿದ ಮಂಡಿ ಮಾಲೀಕರು ಹಾಗೂ ವ್ಯಾಪಾರಿಗಳು ಎಪಿಎಂಸಿ ಪ್ರಾಂಗಣ ಹಾಗೂ ಪ್ರಾಂಗಣದ ಹೊರಗಿನ ಖಾಸಗಿ ಮಂಡಿಗಳಲ್ಲಿ ವಹಿವಾಟು ಪ್ರಾರಂಭಿಸಲು ನಿರ್ಧರಿಸಿದ್ದಾರೆ.

ಕೆಲವು ಪ್ರಬಲ ಜನಪ್ರತಿನಿಧಿಗಳ ಬೆಂಬಲದಿಂದ ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರಿ, ಮಾವು ಬೆಳೆಗಾರರಿಂದ ಶೇ 10ರಷ್ಟು ಕಮೀಷನ್‌ ಪಡೆಯುತ್ತಿದ್ದ ಮಂಡಿ ಮಾಲೀಕರಿಗೆ, ಮಾವಿನ ವಹಿವಾಟು ಮಾರುಕಟ್ಟೆ ಹೊರಗೆ ನಡೆಯುವುದು ಬೇಕಾಗಿಲ್ಲ. ಜತೆಗೆ ಬಂಡವಾಳ ರಹಿತವಾಗಿ ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದ ಸ್ಥಳೀಯ ವ್ಯಾಪಾರಿಗಳಿಗೆ ಹೊಸ ಬೆಳವಣಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.

ಕೆಲವು ಮಾವು ಬೆಳೆಗಾರರು ಈಗಾಗಲೇ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಸಹಯೋಗದೊಂದಿಗೆ ಆನ್‌ಲೈನ್‌ ಮಾರಾಟ ಪ್ರಾರಂಭಿಸಿದ್ದಾರೆ. ಒಳ್ಳೆ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ. ಇದು ಉಳಿದ ರೈತರನ್ನು ಆಕರ್ಷಿಸಿದೆ. ವೈಜ್ಞಾನಿಕ ವಿಧಾನದಲ್ಲಿ ಕಾಯಿ ಕೊಯಿಲು ಮಾಡಿ ಬೆಂಗಳೂರಿನ ಲಭ್ಯ ಮಾರುಕಟ್ಟೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ, ಹಾಲು ಕೇಂದ್ರಗಳ ಸಮೀಪ ಮಾರಾಟ ಮಾಡಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇಷ್ಟರ ಮಧ್ಯೆ ಜಿಲ್ಲಾ ಆಡಳಿತ, ಆರೋಗ್ಯ ಇಲಾಖೆ ಹಾಗೂ ಮಾರುಕಟ್ಟೆ ಸಮಿತಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ತಡೆಯಲು ಅಗತ್ಯವಾದ ಕ್ರಮ ಕೈಗೊಳ್ಳಲು ಮುಂದಾಗಿದೆ. ಸರಣಿ ಸಭೆಗಳನ್ನು ನಡೆಸಿ, ಮಾವು ಬೆಳೆಗಾರರು, ರೈತ ಮುಖಂಡು, ಮಂಡಿ ಮಾಲೀಕರು ಹಾಗೂ ವ್ಯಾಪಾರಿಗಳ ಅಭಿಪ್ರಾಯ ಪಡೆದುಕೊಡಿದೆ. ಸರ್ವ ಸಮ್ಮತ ಸೂತ್ರದಲ್ಲಿ ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಸಲಹೆ ಮಾಡಿದೆ.

ಮೇ.25ರ ಬಳಿಕ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮಂಡಿ ತೆರೆಯಲು, ಮಂಡಿ ಮಾಲೀಕರು ನಿರ್ಧರಿಸಿದ್ದಾರೆ. ಕೆಲವು ರೈತರು ಈಗಾಗಲೇ ಆನ್‌ಲೈನ್‌ ಸೌಲಭ್ಯ ಬಳಸಿಕೊಂಡು ಮಾವಿನ ಹಣ್ಣಿನ ವ್ಯಾಪಾರ ಪ್ರಾರಂಭಿಸಿ ಲಾಭ ಗಳಿಸುತ್ತಿದ್ದಾರೆ.

*
ಎಪಿಎಂಸಿ ಸಮಿತಿ ತಾಲ್ಲೂಕು ಆಡಳಿತದ ಮಾರ್ಗದರ್ಶನದಲ್ಲಿ ಮಾವು ವಹಿವಾಟಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುತ್ತಿದೆ.
-ಎನ್‌.ರಾಜೇಂದ್ರ ಪ್ರಸಾದ್‌, ಅಧ್ಯಕ್ಷರು, ಎಪಿಎಂಸಿ, ಶ್ರೀನಿವಾಸಪುರ

*
ಮಾರುಕಟ್ಟೆಯಲ್ಲಿ ಸೋಂಕು ನಿಯಂತ್ರಣ ಸುಲಭವಲ್ಲ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
-ವೈ.ವಿ.ವೆಂಕಟಾಚಲ, ವೈದ್ಯ, ಶ್ರೀನಿವಾಸಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT