ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ಹಂಗಾಮು: ಮಾವು ಫಸಲು ಕಡಿಮೆ

‘ಪ್ರಜಾವಾಣಿ’ ಫೋನ್‌–ಇನ್‌ನಲ್ಲಿ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಬಾಲಕೃಷ್ಣ ಹೇಳಿಕೆ
Last Updated 14 ಮಾರ್ಚ್ 2020, 13:52 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಈ ಬಾರಿ ಮಾವು ಫಸಲು ಕಡಿಮೆಯಾಗಲಿದೆ. ಇದಕ್ಕೆ ಹವಾಮಾನ ವೈಪರಿತ್ಯ ಪ್ರಮುಖ ಕಾರಣ’ ಎಂದು ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಉಪ ನಿರ್ದೇಶಕ ಎಚ್‌.ಟಿ.ಬಾಲಕೃಷ್ಣ ತಿಳಿಸಿದರು.

‘ಪ್ರಜಾವಾಣಿ’ಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಾವು ಬೆಳೆಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಬಾಲಕೃಷ್ಣ, ‘ಮಾವು ಬೆಳೆಯಲ್ಲಿ ಸಾಕಷ್ಟು ಏರುಪೇರಾಗಿದ್ದು, ಪ್ರಸಕ್ತ ವರ್ಷವನ್ನು ಇಳಿ ಹಂಗಾಮು ಎಂದು ಪರಿಗಣಿಸಲಾಗಿದೆ. ಒಂದೆಡೆ ಮಾವಿನ ಮರಗಳಲ್ಲಿ ಈಗ ಹೂವು ಕಾಣಿಸಿಕೊಂಡಿದೆ. ಮತ್ತೆ ಕೆಲವೆಡೆ ಪಿಂದೆಗಳು ಕಾಯಿ ಕಚ್ಚುತ್ತಿವೆ’ ಎಂದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಫೋನ್‌–ಇನ್‌ ಕಾರ್ಯಕ್ರಮಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದ ಮಾವು ಬೆಳೆಗಾರರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಸತತ ಒಂದೂವರೆ ತಾಸು ಕರೆಗಳು ರಿಂಗಣಿಸಿದವು. ಉಪ ನಿರ್ದೇಶಕ ಬಾಲಕೃಷ್ಣ, ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿ ಕೆ.ಎಸ್.ನಾಗರಾಜ್‌, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್‌.ಮಂಜುನಾಥ್‌ ರೈತರ ಅಹವಾಲು ಆಲಿಸಿದರು. ಬಿಡುವಿಲ್ಲದೆ ಕರೆ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಸೂಚಿಸಿದರು. ಮಾವು ಬೆಳೆ ಸಂಬಂಧ ರೈತರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ನೀಡಿದ ಉತ್ತರ ಕೆಳಗಿನಂತಿದೆ.

* ಕಿಶೋರ್‌ಕುಮಾರ್‌, ನಂಗಲಿ: ಮಾವು ಅಭಿವೃದ್ಧಿ ಕೇಂದ್ರದಿಂದ ರೈತರಿಗೆ ಮಾಹಿತಿ ಸಿಗುತ್ತಿಲ್ಲ. ಕೇಂದ್ರದಿಂದ ತರಬೇತಿ ಆಯೋಜಿಸಿ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ.
–ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 63 ತರಬೇತಿ ಕಾರ್ಯಾಗಾರ ನಡೆಸಿದ್ದೇವೆ. ವಿಜ್ಞಾನಿಗಳನ್ನು ಮಾವಿನ ತೋಪುಗಳಿಗೆ ಕರೆದೊಯ್ದು ಮಾವು ಬೆಳೆ ನಿರ್ವಹಣೆ ಸಂಬಂಧ ರೈತರಿಗೆ ಸ್ಥಳದಲ್ಲೇ ತರಬೇತಿ ಕೊಟ್ಟು ಮಾಹಿತಿ ನೀಡಿದ್ದೇವೆ. ಏಪ್ರಿಲ್‌ ತಿಂಗಳಲ್ಲಿ ಮುಳಬಾಗಿಲು ತಾಲ್ಲೂಕಿನ ತಾಯಲೂರಿನಲ್ಲಿ ತರಬೇತಿ ಕಾರ್ಯಾಗಾರ ನಡೆಸುತ್ತೇವೆ. ಯಾವುದೇ ಗೊಂದಲವಿದ್ದರೆ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಸಂಪರ್ಕಿಸಬಹುದು.

* ಕೆ.ನಾರಾಯಣಗೌಡ, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ: ಮಾವು ಬೆಳೆಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಆದರೆ, ಮಾವು ಸಂಸ್ಕರಣಾ ಘಟಕ ಸ್ಥಾಪನೆ ಏಕೆ ವಿಳಂಬವಾಗುತ್ತಿದೆ.
–ಜಿಲ್ಲೆಯಲ್ಲಿ 50,433 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ಸುಮಾರು 45 ಸಾವಿರ ರೈತರು ಮಾವು ಬೆಳೆಯುತ್ತಿದ್ದಾರೆ. ಆದರೆ, ಮಾವು ಸಂಸ್ಕರಣಾ ಘಟಕ ಆರಂಭಕ್ಕೆ ಅನುದಾನದ ಕೊರತೆಯಿದೆ. ಅನುದಾನಕ್ಕಾಗಿ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದೇವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 18 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾದರೆ ಮಾವು ಸಂಸ್ಕರಣಾ ಘಟಕ ಸ್ಥಾಪಿಸುತ್ತೇವೆ.

* ರಾಜರೆಡ್ಡಿ, ದಿಗುವಪಲ್ಲಿ: ಬದಾಮಿ, ನೀಲಂ, ತೋತಪುರಿ ತಳಿಯ ಮಾವಿನ ಗಿಡಗಳಲ್ಲಿ ಕಾಯಿ ಕೊರಕ ಹುಳು ಬಾಧೆ ಕಾಣಿಸಿಕೊಂಡಿದೆ. ಈ ಸಮಸ್ಯೆಗೆ ಪರಿಹಾರವೇನು?
–5 ಎಂ.ಎಲ್‌ ಇಂಡಾಕ್ಸಿ ಕಾರ್ಬ್‌ ಕೀಟನಾಶಕವನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಿ ಪ್ರತಿ ಮರಕ್ಕೆ ಸಿಂಪಡಣೆ ಮಾಡಬೇಕು. ಇದರಿಂದ ಕಾಯಿ ಕೊರಕ ಹೊಳು ಬಾಧೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.

* ನಾಗಿರೆಡ್ಡಿ, ಪಣಸಮಾಕನಹಳ್ಳಿ: 2 ಎಕರೆ ಬದಾಮಿ ತಳಿಯ ಮಾವು ಬೆಳೆದಿದ್ದೇನೆ. ತೋಪಿನಲ್ಲಿ ಪಿಂದೆದೆ (ಈಚು) ಹುಳು ಬಿದ್ದಿದೆ. ಇದಕ್ಕೆ ಪರಿಹಾರವೇನು?
–ಹಿಂದಿನ ವರ್ಷ ವಾತಾವರಣದಲ್ಲಿ ಆದ ಏರುಪೇರಿನಿಂದ ಈ ಸಮಸ್ಯೆ ಎದುರಾಗಿದೆ. ಕೀಟನಾಶಕ ಸಿಂಪಡಣೆ ಮಾಡುವುದರಿಂದ ಹುಳು ಬಾಧೆ ಹತೋಟಿಗೆ ತರಬಹುದು.

* ಲಕ್ಷ್ಮಣ್, ಗೌನಿಪಲ್ಲಿ: ಮಾವಿನ ಚಿಗುರಿಗೆ ಹುಳು ಕಾಟ ಹೆಚ್ಚಿದೆ. ಹುಳುಗಳು ಚಿಗುರು ತಿನ್ನುತ್ತಿರುವುದರಿಂದ ಮಾವಿನ ಮರಗಳು ಒಣಗುತ್ತಿವೆ. ಇದಕ್ಕೆ ಪರಿಹಾರ ಹೇಳಿ.
–ಲ್ಯಾಂಬ್ಡಾ ಸೈಲೋಥ್ರಿನ್‌, ಇಮಿಡಾ ಕ್ಲೋಪ್ರಿಡ್‌ ಕೀಟನಾಶಕವನ್ನು ನೀರಿನಲ್ಲಿ ಬೆರೆಸಿ ಗಿಡಗಳಿಗೆ ಸಿಂಪಡಿಸಿದರೆ ಹುಳು ಕಾಟ ನಿಯಂತ್ರಣಕ್ಕೆ ಬರುತ್ತದೆ.

* ರವಿಕುಮಾರ್‌, ಬಂಗಾರಪೇಟೆ: ನೀರಿನ ಕೊರತೆ ನಡುವೆಯೂ ಮಾವು ಬೆಳೆದಿದ್ದೇನೆ. ಆದರೆ, ಹೆಚ್ಚಿನ ಇಳುವರಿಯಿಲ್ಲ. ಇಳುವರಿ ಹೆಚ್ಚಳಕ್ಕೆ ಹಾಗೂ ನೀರಿನ ಕೊರತೆ ನೀಗಿಸಲು ಏನು ಮಾಡಬೇಕು?
–ಜಿಲ್ಲೆಯು ಒಣ ಭೂಮಿ ಪ್ರದೇಶವಾಗಿದೆ. ನೀರಿನ ಕೊರತೆ ನೀಗಿಸಲು 4 ಗಿಡಗಳ ಮಧ್ಯೆ ಒಂದೊಂದು ಇಂಗು ಗುಂಡಿ ನಿರ್ಮಿಸಬೇಕು. ಮಳೆ ನೀರು ಈ ಗುಂಡಿಗಳಲ್ಲಿ ಇಂಗುವುದರಿಂದ ಮರಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗುತ್ತದೆ. ಮಳೆ ಇಲ್ಲದಿದ್ದ ಸಂದರ್ಭದಲ್ಲಿ ಈ ಗುಂಡಿಗಳನ್ನು ಕಾಂಪೋಸ್ಟ್‌ ಗುಂಡಿಗಳಾಗಿ ಪರಿವರ್ತಿಸಬಹುದು. ಇಳುವರಿ ಹೆಚ್ಚಳಕ್ಕೆ ಲಘು ಪೋಷಕಾಂಶ ನಿರ್ವಹಣೆ ಬಹಳ ಮುಖ್ಯ. ಪ್ರತಿ ಮರಕ್ಕೆ ಬುಡದಿಂದ 3 ಅಡಿ ದೂರದಲ್ಲಿ 25 ಕೆ.ಜಿ ಕೊಟ್ಟಿಗೆ ಗೊಬ್ಬರ ಸೇರಿಸಬೇಕು. ಲಘು ಪೋಷಕಾಂಶ ಮಿಶ್ರಣಕ್ಕೆ 26 ಶಾಂಪು, 56 ನಿಂಬೆ ಹಣ್ಣು ಬೆರೆಸಿ ವರ್ಷಕ್ಕೆ 3 ಬಾರಿ ಸಿಂಪಡಣೆ ಮಾಡಬೇಕು.

* ಮೋಹನ್‌ರೆಡ್ಡಿ, ಟಿ.ಕುರುಬರಹಳ್ಳಿ: 2 ವರ್ಷದ ಮಾವಿನ ಗಿಡಗಳು ಕಾಯಿ ಬಿಟ್ಟಿವೆ. ಕಾಯಿಗಳನ್ನು ತೆಗೆಯಬೇಕೇ?
–ಗಿಡಗಳಿಗೆ 3 ವರ್ಷ ಆಗುವವರೆಗೆ ಕಾಯಿ ತೆಗೆದುಬಿಡಿ. ಜತೆಗೆ ಗಿಡ ಸವರುವಿಕೆ ಮಾಡಿ. ಈ ಹಂತದಲ್ಲಿ ಕಾಯಿ ತೆಗೆಯದಿದ್ದರೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ.

* ಶ್ರೀನಿವಾಸರೆಡ್ಡಿ, ಕ್ಯಾಸಂಬಳ್ಳಿ: ಮಳೆ ಅಭಾವದಿಂದ ಇಳುವರಿ ಕಡಿಮೆಯಾಗಿದೆ. ಜಿಲ್ಲೆಯ ಹವಾಮಾನಕ್ಕೆ ಯಾವ ತಳಿಯ ಮಾವು ಸೂಕ್ತ?
–ಮಳೆ ಪ್ರಮಾಣ ಕಡಿಮೆಯಿರುವ ಒಣ ಪ್ರದೇಶಕ್ಕೆ ಕೆಲ ನಿರ್ದಿಷ್ಟ ಮಾವಿನ ತಳಿಗಳಿವೆ. ತೋತಾಪುರಿ, ನೀಲಂ, ಮಲ್ಲಿಕ, ಬಂಗನಪಲ್ಲಿ ತಳಿಗಳಿಗೆ ಹೆಚ್ಚಿನ ನೀರು ಬೇಕಿಲ್ಲ. ಮಳೆ ಆಶ್ರಯದಲ್ಲೇ ಈ ತಳಿಯ ಗಿಡಗಳನ್ನು ಬೆಳೆಯಬಹುದು.

* ವೆಂಕಟಪ್ಪ, ಮುಳಬಾಗಿಲು: ತೋಪಿನಲ್ಲಿ ಬದಾಮಿ ತಳಿಯ 500 ಮರಗಳಿದ್ದು, ಕಾಂಡ ಕೊರಕ ಹುಳದ ಹಾವಳಿ ಹೆಚ್ಚಿದೆ. ಇದನ್ನು ತಡೆಯುವುದು ಹೇಗೆ?
–ಡೈಕ್ಲೊ ರೊವಾಸ್‌ ಕೀಟನಾಶಕದ ಹನಿಗಳನ್ನು ಹುಳು ತೂತು ಮಾಡಿರುವ ಜಾಗಕ್ಕೆ ಹಾಕಬೇಕು. ನೊವಾನ್‌ ಹನಿಗಳಿಂದ ರಂಧ್ರಗಳನ್ನು ಮುಚ್ಚಬೇಕು. ಹುಳುಗಳು ದೊಡ್ಡ ಪ್ರಮಾಣದಲ್ಲಿ ರಂಧ್ರ ಮಾಡಿದ್ದರೆ ಆ ಭಾಗದ ತೊಗಟೆ ತೆಗೆಯಬೇಕು. ಸೀಲರ್‌ ಕಮ್‌ ಹೀಲರ್‌ ಪುಡಿಯನ್ನು ನೀರಿನಲ್ಲಿ ಬೆರೆಸಿ ರಂಧ್ರದಲ್ಲಿ ಸೇರಿಸಿ ಕೆಂಪು ಮಣ್ಣಿನಿಂದ ಮುಚ್ಚಬೇಕು.

* ಮಂಜುನಾಥ್, ತೊರಗನದೊಡ್ಡಿ: ಬಂಗಾರಪೇಟೆ ತಾಲ್ಲೂಕಿನಲ್ಲಿ ಮಾವು ಬೆಳೆ ವಿಸ್ತಾರ ಹೆಚ್ಚಿಸಲು ಏನು ಕ್ರಮ ಕೈಗೊಂಡಿದ್ದೀರಿ? ತಾಲ್ಲೂಕಿನಲ್ಲಿ ಮಾವು ಬೆಳೆ ಯಶಸ್ವಿಯಾಗುತ್ತಿಲ್ಲ?
–ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಮಾವು ಬೆಳೆಗೆ ಪೂರಕ ವಾತಾವರಣವಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ ಸುಮಾರು 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. ತಾಲ್ಲೂಕಿನಲ್ಲಿ ಇತ್ತೀಚೆಗೆ ಬೆಳೆ ಸಮೀಕ್ಷೆ ಮಾಡಲಾಗಿದ್ದು, ಬೇತಮಂಗಲ ಮತ್ತು ಕ್ಯಾಸಂಬಳ್ಳಿ ಭಾಗದಲ್ಲಿ ಮಾವು ಹೆಚ್ಚಿನ ಪ್ರಮಾಣದಲ್ಲಿದೆ.

* ಸುರೇಶ್‌ಕುಮಾರ್, ನಂಗಲಿ: ಗಿಡಗಳಿಗೆ ಸಿಂಪಡಿಸುವ ಕಾರ್ಬನ್‌ ಡೈಜಮ್‌ ಕೀಟನಾಶಕ ಅಂಶವು ಹಣ್ಣುಗಳಲ್ಲಿ ಕೊಯ್ಲಿನ ನಂತರವೂ ಹಲವು ದಿನಗಳವರೆಗೆ ಉಳಿದಿರುತ್ತದೆ. ಹೀಗಾಗಿ ವಿದೇಶಕ್ಕೆ ರಫ್ತಿನ ವೇಳೆ ಹಣ್ಣು ನಿರಾಕರಿಸುತ್ತಿದ್ದಾರೆ. ಯಾವ ಹಂತದಲ್ಲಿ ಕಾರ್ಬನ್‌ ಡೈಜಮ್‌ ಸಿಂಪಡಿಸಬೇಕು?
–ಕಾಯು ಕೊಯ್ಲಿಗೆ 100 ದಿನ ಮುನ್ನ ಕಾರ್ಬನ್‌ ಡೈಜಮ್‌ ಸಿಂಪಡಿಸಿದರೆ ಯಾವುದೇ ಸಮಸ್ಯೆಯಿಲ್ಲ. ಇದರಿಂದ ರಫ್ತಿನ ವೇಳೆಗೆ ಹಣ್ಣಿನಲ್ಲಿ ಯಾವುದೇ ರಾಸಾಯನಿಕ ಅಂಶ ಉಳಿಯುವುದಿಲ್ಲ.

* ಮಹೇಶ್‌, ಬಂಗಾರಪೇಟೆ: ಆರೋಗ್ಯ ಹಾಗೂ ರುಚಿಗೆ ಯಾವ ತಳಿಯ ಮಾವು ಹಣ್ಣು ಸೂಕ್ತ?
–ಕ್ಯಾಲ್ಸಿಯಂ ಕಾರ್ಬೈಡ್‌ ಬಳಸದೆ ಸ್ವಾಭಾವಿಕವಾಗಿ ಮಾಗಿಸಿದ ಹಣ್ಣಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಎಲ್ಲಾ ತಳಿಯ ಮಾವಿನ ಹಣ್ಣುಗಳಲ್ಲಿ ವಿಟಮಿನ್‌ ಎ ಮತ್ತು ಸಿ ಇರುತ್ತದೆ. ಮಲ್ಲಿಕಾ ತಳಿಯ ಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಸೇವನೆಗೆ ಉತ್ತಮ. ಬದಾಮಿ ತಳಿಯ ಹಣ್ಣುಗಳು ಹೆಚ್ಚು ರುಚಿಕರವಾಗಿರುತ್ತವೆ.

* ಎಚ್.ಅಶೋಕ್, ಮುಳಬಾಗಿಲು: ಗಿಡದಲ್ಲಿ ಹೂವು ಮತ್ತು ಪಿಂದೆ ಉದುರುತ್ತಿದ್ದು, ಇಳುವರಿ ಗಣನೀಯವಾಗಿ ಕುಸಿದಿದೆ. ಇದಕ್ಕೆ ಕಾರಣವೇನು?
–ಹವಾಮಾನ ವೈಪರಿತ್ಯ, ಬೋರಾನ್‌ ಕೊರತೆ, ಜಿಗಿ ಹುಳುವಿನ ಕಾಟ ಸೇರಿದಂತೆ ಹಲವು ಕಾರಣಕ್ಕೆ ಹೂವು ಮತ್ತು ಪಿಂದೆ ಉದುರುತ್ತವೆ. ಇದು ಸಹಜ ಪ್ರಕ್ರಿಯೆ. ಇಮಿಡಾ ಸಿಂಪಡಣೆಯಿಂದ ಈ ಸಮಸ್ಯೆ ಪರಿಹರಿಸಬಹುದು. ಜತೆಗೆ ಸೂರ್ಯನ ಬೆಳಕು ಮರದ ಎಲ್ಲಾ ಕೊಂಬೆಗಳಿಗೆ ತಲುಪುವಂತೆ ಮಾಡಬೇಕು. ಮರಗಳು ದೊಡ್ಡದಾಗಿ ಬೆಳೆದಿದ್ದರೆ ಒಳ ಭಾಗದ ರೆಂಬೆಗಳನ್ನು ಕತ್ತರಿಸಬೇಕು.

* ದಿನೇಶ್‌ಗೌಡ, ಹುಣಸನಹಳ್ಳಿ: 30 ಎಕರೆ ಮಾವು ತೋಪಿದೆ. ಗಿಡಗಳಲ್ಲಿ ಹೂವಿನ ಪ್ರಮಾಣ ಕಡಿಮೆಯಿರುವ ಕಾರಣ ವ್ಯಾಪಾರಸ್ಥರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮುಂಗಡ ಹಣ ಕೊಟ್ಟಿರುವ ವ್ಯಾಪಾರಸ್ಥರು ಹಣ ವಾಪಸ್‌ ಕೇಳುತ್ತಿದ್ದಾರೆ.
–ಮಾವು ಬೆಳೆಯುವ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಸ್ಯೆಯಿದೆ. ಹೂವಿನ ಪ್ರಮಾಣ ಕಡಿಮೆಯಿರುವ ಬಗ್ಗೆ ಚಿಂತಿಸಬೇಕಿಲ್ಲ. ಹೂವಿನಲ್ಲಿ ಶೇ 0.05ರಷ್ಟು ಮಾತ್ರ ಈಚುಗಳಾಗುತ್ತವೆ. ದಶೇರಿ, ಇಮಾಮ್‌ ಪಸಂದ್, ಮಲ್ಲಿಕಾ ತಳಿ  ಮಾವಿನ ಸಸಿ ನಾಟಿ ಮಾಡಿದರೆ ಹೆಚ್ಚು ಇಳುವರಿ ಪಡೆಯಬಹುದು.

* ಗೋವಿಂದಪ್ಪ, ಚೊಕ್ಕಂಡಹಳ್ಳಿ: ನೀಲಗಿರಿ ತೆರವುಗೊಳಿಸಿ ಮಾವು ಹಾಕಲು ನಿರ್ಧರಿಸಿದ್ದೇನೆ. ಇದಕ್ಕೆ ಸಹಾಯಧನ ಸಿಗುತ್ತದೆಯೆ?
–ನರೇಗಾ ಅಡಿ 5 ಎಕರೆವರೆಗೆ ಮಾವು ಬೆಳೆ ಅಭಿವೃದ್ಧಿಪಡಿಸಲು ಅವಕಾಶವಿದೆ. ಗುಣಿ ತೆಗೆಯಲು, ಸಸಿ ಖರೀದಿ ಹಾಗೂ ಕೂಲಿ ಹಣ ಪಾವತಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡುತ್ತೇವೆ. ಪಹಣಿ, ಉದ್ಯೋಗ ಚೀಟಿ, ಗುರುತಿನ ಚೀಟಿ, ಪಡಿತರಚೀಟಿಯೊಂದಿಗೆ ಅರ್ಜಿ ಸಲ್ಲಿಸಿ ಸಹಾಯಧನಕ್ಕೆ ಹೆಸರು ನೊಂದಣಿ ಮಾಡಿಸಬೇಕು.

* ಕೃಷ್ಣಪ್ಪ, ಬಂಗಾರಪೇಟೆ: ಮಾವಿಗೆ ಜಿಲ್ಲೆಯಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲ. ವಹಿವಾಟಿಗೆ ಸೌಕರ್ಯ ಕಲ್ಪಿಸುತ್ತೀರಾ?
–ರೈತರ ಆದಾಯ ದ್ವಿಗುಣಗೊಳಿಸಲು ಹಾಗೂ ಮಾರುಕಟ್ಟೆ ಸೌಕರ್ಯ ಕಲ್ಪಿಸಲು ಬೆಂಗಳೂರಿನಲ್ಲಿ ಪ್ರತಿ ವರ್ಷ ಮಾವು ಮೇಳ ನಡೆಸುತ್ತಿದ್ದೇವೆ. ಮಾವು ಮಾರಾಟ ಈ ಬಾರಿ ಜಿಲ್ಲೆಯಲ್ಲೇ ಮಾವು ಬೆಳೆಗಾರರು, ಮಾರಾಟಗಾರರು ಹಾಗೂ ಗ್ರಾಹಕರ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಆನ್‌ಲೈನ್‌ ಮೂಲಕ ಮಾವಿನ ವಹಿವಾಟಿಗೆ ಅವಕಾಶ ಕಲ್ಪಿಸುತ್ತೇವೆ.

–ನಿರ್ವಹಣೆ: ಜೆ.ಆರ್.ಗಿರೀಶ್‌ ಮತ್ತು ಕೆ.ಎಸ್‌.ಸುದರ್ಶನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT