ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಮಾವು ಬೆಲೆ ದಿಢೀರ್ ಕುಸಿತ

ಕಾಯಿ ಲಭ್ಯತೆ ಕಡಿಮೆ; ಬೆಳೆಗಾರರು ಎಚ್ಚರಿಕೆಯಿಂದ ವ್ಯವಹರಿಸಲು ಸಲಹೆ
Last Updated 14 ಜೂನ್ 2020, 10:28 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ಅನಿರೀಕ್ಷಿತವಾಗಿ ಮಾವಿನ ಕಾಯಿ ಖರೀದಿ ಬೆಲೆಯಲ್ಲಿ ಕುಸಿತ ಉಂಟಾಗಿತ್ತು. ಇದರಿಂದ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರು ಆತಂಕಗೊಂಡಿದ್ದಾರೆ.

ಇಲ್ಲಿನ ಮಾರುಕಟ್ಟೆಯಲ್ಲಿ ಮಾವಿನ ಆವಕದ ಪ್ರಮಾಣ ಕಡಿಮೆಯಾದಂತೆ ಬೆಲೆ ಏರುಮುಖವಾಗುವುದು ಸಾಮಾನ್ಯ. ಆದರೆ ಶನಿವಾರ ಮಾರುಕಟ್ಟೆಗೆ ಕಾಯಿ ಹಾಕಿದ ರೈತರು ಬೆಲೆ ಕಂಡು ಬೆಚ್ಚಿಬಿದ್ದರು.

‘ಹೆಚ್ಚಾಗಿ ರಸ ತಯಾರಿಕೆಗೆ ಹೋಗುವ ತೋತಾಪುರಿ ಮಾವು ಪ್ರಾರಂಭದಲ್ಲಿ ಟನ್‌ಗೆ ₹20 ರಿಂದ 25 ಸಾವಿರದವರೆಗೆ ಮಾರಾಟವಾಗುತ್ತಿತ್ತು. ಅದು ದಿನ ಕಳೆದಂತೆ ₹20 ಸಾವಿರದ ಆಜೂಬಾಜು ಇತ್ತು. ಆದರೆ ಈಗ ₹18 ರಿಂದ 19 ಸಾವಿರದವರೆಗೆ ಖರೀದಿಸಲಾಗುತ್ತಿದೆ. ಟನ್‌ಗೆ ₹40 ಸಾವಿರದ ಗಡಿ ದಾಟಿದ್ದ ಬೇನಿಷ, ಮಲಗೋಬ, ಮಲ್ಲಿಕಾ ಮುಂತಾದ ತಳಿಯ ಮಾವು ಈಗ ಟನ್‌ಗೆ ₹30 ರಿಂದ 35 ಸಾವಿರದವರೆಗೆ ಮಾತ್ರ ಮಾರಾಟವಾಗುತ್ತಿದೆ’ ಎಂದು ಮಾವು ಬೆಳೆಗಾರ ಸುದರ್ಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಸೋಂಕಿನ ಭಯ ಮಾವಿನ ಕಾಯಿ ಬೆಲೆಯ ಮೇಲೆ ಪ್ರಭಾವ ಬೀರಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಮಾರುಕಟ್ಟೆ ಪ್ರದೇಶದಲ್ಲಿ ಅನುಸರಿಸುತ್ತಿರುವ ಕಠಿಣ ಕ್ರಮಗಳಿಂದಾಗಿ ಹೊರ ರಾಜ್ಯಗಳ ಲಾರಿ ಮಾಲೀಕರು ಸುಲಭವಾಗಿ ತಮ್ಮ ವಾಹನಗಳನ್ನು ಕಳುಹಿಸುತ್ತಿಲ್ಲ. ಸೋಂಕಿನ ಭಯದಿಂದ ಹೊರಗಿನ ವ್ಯಾಪಾರಿಗಳ ಬರುತ್ತಿಲ್ಲ’ ಎಂಬುದು ಮಂಡಿ ಮಾಲೀಕರ
ಅಭಿಪ್ರಾಯ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 20 ರಷ್ಟು ಫಸಲು ಮಾತ್ರ ಬಂದಿದೆ. ಇರುವ ಬೇಡಿಕೆಗೆ ಹೋಲಿಸಿದರೆ, ಕಾಯಿ ಲಭ್ಯತೆ ಪ್ರಮಾಣ ತೀರಾ ಕಡಿಮೆ.ಇಂತಹ ಪರಿಸ್ಥಿತಿಯಲ್ಲಿ ಬೆಳೆಗಾರರು ತೃಪ್ತಿಕರವಾದ ಬೆಲೆಯನ್ನು ನಿರೀಕ್ಷಿಸಿದ್ದರು. ಪ್ರಾರಂಭದ ದಿನಗಳಲ್ಲಿ ಬೆಲೆ ಹೆಚ್ಚಾಗುವ ಸುಳಿವು ಸಿಕ್ಕಿತ್ತು. ಆದರೆ ದಿಢೀರ್‌ ಕುಸಿತ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್‌ –19 ಹರಡುವ ಭೀತಿ ಹಾಗೂ ಭಾರಿ ಮಳೆ ನಿರೀಕ್ಷೆ ಇರುವುದರಿಂದ ಶನಿವಾರ ಹೆಚ್ಚಿನ ಸಂಖ್ಯೆಯ ರೈತರು ಕಾಯಿ ಕಿತ್ತು ಮಾರುಕಟ್ಟೆಗೆ ಕೊಂಡೊಯ್ದಿದ್ದಾರೆ. ದಿನದ ಬೇಡಿಕೆಗಿಂತ ಅಧಿಕ ಪ್ರಮಾಣದ ಕಾಯಿ ಬಂದ ಪರಿಣಾಮವಾಗಿ ಬೆಲೆಯಲ್ಲಿ ಕುಸಿತ ಉಂಟಾಗಿದೆ ಎಂಬುದು ಮಾರುಕಟ್ಟೆ ಪಂಡಿತರ ಲೆಕ್ಕಾಚಾರ.

***

ಉದ್ದೇಶಪೂರ್ವಕ ಕೆಲಸ

‘ಇಲ್ಲಿನ ವ್ಯಾಪಾರಿಗಳು ಉದ್ದೇಶ ಪೂರ್ವಕವಾಗಿ ಬೆಲೆಯಲ್ಲಿ ಏರಿಳಿತ ಮಾಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಬೆಳೆಗಾರರು ಎಚ್ಚರಿಕೆಯಿಂದ ವ್ಯವಹರಿಸಬೇಕು. ಇರುವ ಫಸಲನ್ನು ಒಮ್ಮೆಗೇ ಕಿತ್ತುದಂದು ಮಾರುಕಟ್ಟೆಯಲ್ಲಿ ಸುರಿಯುವ ಪರಿಪಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್‌.ಸೂರ್ಯನಾರಾಯಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT