ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಮಾವಿಗೆ ಮನಸೋತ ಗ್ರಾಹಕ, ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಅಭಿಯಾನ

Published 21 ಮೇ 2023, 6:57 IST
Last Updated 21 ಮೇ 2023, 6:57 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಬಂಡಪಲ್ಲಿ ಸಮೀಪ ಶನಿವಾರ ಪ್ರಗತಿಪರ ಮಾವು ಬೆಳೆಗಾರ ಬಿ.ಎನ್.ಚಂದ್ರಾರೆಡ್ಡಿ ಮಾವಿನ ತೋಟ ಮಾವು ಪ್ರಿಯರಿಂದ ತುಂಬಿಹೋಗಿತ್ತು.

ಹೌದು, ವಿಶಾಲವಾದ ಮಾವಿನ ತೋಟದಲ್ಲಿ ಅಡ್ಡಾಡುತ್ತ‌ ತಮಗೆ ಪ್ರಿಯವೆನಿಸಿದ ಜಾತಿಯ ಮಾವಿನ ಕಾಯಿ ಆರಿಸಿಕೊಳ್ಳುವ ಹಿರಿಯರು, ಬೆರಗುಗಣ್ಣಿನಿಂದ ಫಲಭರಿತ ಮಾವಿನ ಮರಗಳನ್ನು ನೋಡುತ್ತ ಹೆಜ್ಜೆಹಾಕುವ ಮಕ್ಕಳು. ಮರದಲ್ಲಿ ಹಣ್ಣಾದ ಮಾವಿಗೆ ಕೈಹಾಕಿ ಕಿತ್ತು ಸವಿಯುವ ಆಸೆ ಹೊತ್ತ ವಿವಿಧ ವಯೋಮಾನದ ಜನರಿಂದ ತೋಟಕ್ಕೆ ವಿಶೇಷ ಕಳೆ ಬಂದಿತ್ತು.

ಮಾವು ಬೆಳೆಗಾರರಾದ ಬಿ.ಎನ್.ಚಂದ್ರಾರೆಡ್ಡಿ ಹಾಗೂ ಭಾಸ್ಕರ್ ರೆಡ್ಡಿ ಗ್ರಾಹಕರಿಗೆ ವಿವಿಧ ಜಾತಿಯ ಮಾವನ್ನು ಪರಿಚಯಿಸುತ್ತಾ ಸಾಗಿದ್ದರು. ಗ್ರಾಹಕರು ಬೆಳೆಗಾರರ ಮಾರ್ಗದರ್ಶನದಲ್ಲಿ ತಮಗೆ ಇಷ್ಟವಾದ ಬಲಿತ ಕಾಯಿ ಕಿತ್ತು ಚೀಲಕ್ಕೆ ಇಳಿಸುತ್ತಿದ್ದರು. ಮಕ್ಕಳು ಬಾಯಲ್ಲಿ ಶುಗರ್ ಬೇಬಿ ಜಾತಿಯ ಮಾವಿನ ರಸ ತುಂಬಿಕೊಂಡು ಖುಷಿ ಪಡುತ್ತಿದ್ದರು.

ಪ್ರತಿವರ್ಷ ಪಟ್ಟಣದ ಮಾವು ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಸಾಮಾನ್ಯ. ಅದರಿಂದ ಬೇಸತ್ತ ಬಿ.ಎನ್.ಚಂದ್ರಾರೆಡ್ಡಿ ಪರ್ಯಾಯ ಮಾರುಕಟ್ಟೆ ಹಿಡಿಯಲು ಆಲೋಚಿಸಿದರು. ಗೆಳೆಯ ಭಾಸ್ಕರ್ ರೆಡ್ಡಿ ಅವರೊಂದಿಗೆ ಸೇರಿ ಕಳೆದ ವರ್ಷ ಡಬ್ಲ್ಯುಡಬ್ಲ್ಯುಡಬ್ಲ್ಯ.ಕೋಲಾರ್ಮ್ಯಾಂಗೋಸ್.ಕಾಂ ಮೂಲಕ ಅಂತರ್ಜಾಲದಲ್ಲಿ ನಮ್ಮ ತೋಟದಿಂದ ನಿಮ್ಮ ಬಾಗಿಲಿಗೆ ಅಭಿಯಾನ ಪ್ರಾರಂಭಿಸಿದರು.

ನೈಸರ್ಗಿಕ ವಿಧಾನದಲ್ಲಿ ಹಣ್ಣು ಮಾಡಲಾದ ಮಾವನ್ನು ಅಂಚೆ ಮೂಲಕ ಗ್ರಾಹಕರಿಗೆ ಕಳುಹಿಸತೊಡಗಿದರು. ಮಾವಿನ ಸಹಜ ರುಚಿಗೆ ಮಾರುಹೋದ ಬೆಂಗಳೂರು ಮತ್ತಿತರ ನಗರಗಳ ಗ್ರಾಹಕರು ಹೆಚ್ಚು ಮಾವಿಗೆ ಬೇಡಿಕೆ ಸಲ್ಲಿಸತೊಡಗಿದರು. ಕೆಲವರು ತೊಟಕ್ಕೆ ಬಂದು ನೇರವಾಗಿ ಮಾವು ಖರಿದಿಸುವ ಇಚ್ಛೆ ವ್ಯಕ್ತಪಡಿಸಿದರು. ಇದರಿಂದ ಪ್ರೇರಿತರಾದ ಬಿ.ಎನ್.ಚಂದ್ರಾರೆಡ್ಡಿ ಬೇಡಿಕೆ ಇಟ್ಟಿದ್ದ ಎಲ್ಲರನ್ನೂ ಶನಿವಾರ ತೊಟಕ್ಕೆ ಆಹ್ವಾನಿಸಿದ್ದರು. ಅತ್ಯಂತ ಆತ್ಮೀಯವಾದ ವಾತಾವರಣದಲ್ಲಿ ಮಾವಿನ ವಹಿವಾಟು ನಡೆಯಿತು.‌

ತೋಟದಲ್ಲಿ ಲಭ್ಯವಿರುವ ದಶೇರಿ ಜಾತಿ ಮಾವು ಕೆಜಿಯೊಂದಕ್ಕೆ ₹100, ಕಾಲಾಪಾಡ್ ₹100, ಮಲ್ಲಿಕಾ ₹80, ಮಲಗೋಬ ₹150, ಷುಗರ್ ಬೇಬಿ ₹150, ಅಮರಪಾಲಿ ₹100, ಹಿಮಾಮ್ ಪಸಂದ್ ₹180, ರಸಪೂರಿ ₹80 ರಂತೆ ಬೆಲೆ ನಿಗದಿಪಡಿಸಲಾಗಿತ್ತು. ಹೆಚ್ಚಾಗಿ ಬೆಳೆಯುವ ತೋತಾಪುರಿ ಹಾಗೂ ನೀಲಂ ಇನ್ನೂ ಕೊಯಿಲಿಗೆ ಬಂದಿಲ್ಲದ ಕಾರಣ ಬೆಲೆ ನಿಗದಿಪಡಿಸಿಲ್ಲ.

ತೋಟದಲ್ಲಿ ಚೆನ್ನಾಗಿ ಬಲಿತ ಹಾಗೂ ಉತ್ತಮ ಗುಣಮಟ್ಟದ ಮಾವಿಗೆ ಈ ಬೆಲೆ ಕೊಡಲು ಗ್ರಾಹಕರದು ಯಾವುದೇ ತಕರಾರು ಇರಲಿಲ್ಲ. ಹಾಗೆ ನೋಡಿದರೆ ನಗರದಲ್ಲಿ ಈ ಬೆಲೆಗೆ ಇಂತಹ ಅತ್ಯತ್ತಮ ಗುಣಮಟ್ಟದ ಕಾಯಿ ಸಿಗುವುದಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ತೋಟದಲ್ಲಿ ಸಹಜವಾಗಿ ಹಣ್ಣು ಮಾಡುವ ಘಟಕ ಸ್ಥಾಪಿಸಲಾಗಿದ್ದು, ಹಣ್ಣು ಬೇಕಾದವರು ಖರೀದಿಸಿದರು.

'ನಾವು ಮೊದಲು ಆನ್ ಲೈನ್‌ನಲ್ಲಿ ಮಾವು ಖರೀದಿಸುತ್ತಿದ್ದೆವು. ತುಂಬಾ ರುಚಿಯಾಗಿರುತ್ತಿತ್ತು. ಹಾಗಾಗಿ ನೇರವಾಗಿ ತೋಟಕ್ಕೆ ಬಂದು ಖರೀದಿಸುವ ಉದ್ದೇಶದಿಂದ ಬಂದಿದ್ದೇವೆ. ಗ್ರಾಮೀಣ ಪರಿಸರದಲ್ಲಿ ಸುತ್ತಾಡಿ ಮಾವು ಖರೀದಿಸುವುದು ಖುಷಿ ಕೊಟ್ಟಿದೆ' ಎಂದು ಬೆಂಗಳೂರಿನ ಗೃಹಿಣಿ ಪಲ್ಲವಿ ’ಪ್ರಜಾವಾಣಿ‘ಗೆ ತಿಳಿಸಿದರು.

'ಕುಟುಂಬದ ಸದಸ್ಯರೊಂದಿಗೆ ಬಂದು ತೋಟದಲ್ಲಿ ಇಷ್ಟವಾದ ಮಾವು ಖರೀದಿಸುವುದು ಸಂತೋಷದ ಸಂಗತಿಯಾಗಿದೆ. ಅದಕ್ಕಿಂತ ಹೆಚ್ಚಾಗಿ ರೈತರೊಂದಿಗಿನ ಒಡನಾಟ ಪ್ರಿಯವೆನಿಸಿತು' ಎಂಬುದು ಡೊನಾಲ್ಡ್ ಡ್ರೋಜರ್ ಅವರ ಅಭಿಪ್ರಾಯ.

'ಮಾವು ಬೆಳೆಗಾರರು ಬದಲಾಗಬೇಕು. ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆ ಜತೆಗೆ ಆನ್ ಲೈನ್ ಮಾರುಕಟ್ಟೆ ಮೂಲಕ ಗ್ರಾಹಕರನ್ನು ಹಿಡಿಯಬೇಕು. ಅವರ ನಿರೀಕ್ಷೆ ಹುಸಿಯಾಗದಂತೆ ಎಚ್ಚರ ವಹಿಸಿ ವ್ಯವಹರಿಸಿದರೆ ನಷ್ಟದ ಮಾತು ದೂರವಾಗುತ್ತದೆ' ಎನ್ನುತ್ತಾರೆ ಮಾವು ಬೆಳೆಗಾರ ಬಿ.ಎನ್.ಚಂದ್ರಾರೆಡ್ಡಿ.

 ಮಾವಿನ ಹಣ್ಣು ಸವಿಯುತ್ತಿರುವ ಗ್ರಾಹಕರು
 ಮಾವಿನ ಹಣ್ಣು ಸವಿಯುತ್ತಿರುವ ಗ್ರಾಹಕರು
ಸಾಂಪ್ರದಾಯಿಕ ವಿಧಾನದಲ್ಲಿ ಹಣ್ಣು ಮಾಡಲಾಗಿರುವ ಮಾವು ತೋರಿಸುತ್ತಿರುವ ಪ್ರಗತಿಪರ ಮಾವು ಬೆಳೆಗಾರ ಬಿ.ಎನ್.ಚಂದ್ರಾರೆಡ್ಡಿ
ಸಾಂಪ್ರದಾಯಿಕ ವಿಧಾನದಲ್ಲಿ ಹಣ್ಣು ಮಾಡಲಾಗಿರುವ ಮಾವು ತೋರಿಸುತ್ತಿರುವ ಪ್ರಗತಿಪರ ಮಾವು ಬೆಳೆಗಾರ ಬಿ.ಎನ್.ಚಂದ್ರಾರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT