ಸೋಮವಾರ, ಮಾರ್ಚ್ 8, 2021
27 °C

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಪ್ರಣಾಳಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಶಿವಾರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದಿರುವ ಅಭ್ಯರ್ಥಿಗಳಿಬ್ಬರು ಮತದಾರರ ಮನ ಗೆಲ್ಲಲು ಚುನಾವಣಾ ಪ್ರಣಾಳಿಕೆಯ ಮೊರೆ ಹೋಗಿದ್ದಾರೆ.

ಸುಮಾರು 1,200 ಮತದಾರರನ್ನು ಹೊಂದಿರುವ ದೊಡ್ಡಶಿವಾರ ಗ್ರಾಮದಲ್ಲಿ 4 ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 12 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಈ ಪೈಕಿ ಎಸ್‌.ಜಿ.ಮೋಹನ್‌ಕುಮಾರ್‌ ಮತ್ತು ಶಾಂತಮ್ಮ ಅವರ ಪ್ರಚಾರ ವೈಖರಿ ವಿಭಿನ್ನವಾಗಿದೆ.

ಸಾಮಾನ್ಯ ಸದಸ್ಯ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮೋಹನ್‌ಕುಮಾರ್‌ ಮತ್ತು ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಶಾಂತಮ್ಮ ಚುನಾವಣಾ ಪ್ರಣಾಳಿಕೆ ಮೂಲಕ ಮತದಾರರನ್ನು ತಲುಪುವ ವಿನೂತನ ಪ್ರಯತ್ನ ನಡೆಸಿದ್ದಾರೆ.

ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಜನರ ಹಿತರಕ್ಷಣೆ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪದಂತಹ ಮೂಲಸೌಕರ್ಯ, ನರೇಗಾ ಅನುಷ್ಠಾನ, ಗ್ರಾಮದ ಕೆರೆ ತುಂಬಿಸುವುದು ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆ ಒಳಗೊಂಡಿದೆ.

ಡಿಪ್ಲೊಮಾ ಓದಿರುವ ಮೋಹನ್‌ಕುಮಾರ್‌ ಮತ್ತು 8ನೇ ತರಗತಿ ಓದಿರುವ ಶಾಂತಮ್ಮ ಅವರು ವಾಟ್ಸ್‌ಆ್ಯಪ್‌ ಮೂಲಕ ಮತದಾರರ ಮೊಬೈಲ್‌ಗೆ ಪ್ರಣಾಳಿಕೆ ಕಳುಹಿಸಿ ಮತ ಯಾಚಿಸುತ್ತಿದ್ದಾರೆ. ಅಲ್ಲದೇ, ಪ್ರಣಾಳಿಕೆಯ ಮುದ್ರಿತ ಪ್ರತಿಯನ್ನು ಗ್ರಾಮದ ಮನೆ ಮನೆಗೂ ಹಂಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಈ ಪ್ರಣಾಳಿಕೆಯ ಬಗ್ಗೆ ಗ್ರಾಮದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

‘ಚುನಾವಣಾ ಪ್ರಣಾಳಿಕೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಪ್ರಣಾಳಿಕೆಯಲ್ಲಿನ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಮೋಹನ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು