ಶನಿವಾರ, ಫೆಬ್ರವರಿ 27, 2021
31 °C
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರಪ್ಪ ಕಳವಳ

ಮನುಷ್ಯನ ದುರಾಸೆ: ಅರಣ್ಯ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರಪ್ಪ ಅಭಿಪ್ರಾಯಪಟ್ಟರು.

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರೂ ಯುವ ಕೇಂದ್ರ, ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ, ಕೇಂದ್ರ ಜಲಶಕ್ತಿ ಮಂತ್ರಾಲಯ ಹಾಗೂ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗಿಡ ಮರ ನಾಶದಿಂದ ವಾತಾವರಣ ಕಲುಷಿತಗೊಂಡು ಆರೋಗ್ಯ ಸಮಸ್ಯೆ ಎದುರಾಗಿದೆ. ಜತೆಗೆ ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ. ಜನ ಸ್ವಚ್ಛತೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದು, ಸಾಕಷ್ಟು ಸಮಸ್ಯೆ ಸೃಷ್ಟಿಯಾಗುತ್ತಿವೆ. ಜನಸಂಖ್ಯೆಗೆ ಹೋಲಿಸಿದರೆ ಮರಗಳ ಸಂಖ್ಯೆ ಕಡಿಮೆಯಿದ್ದು, ಶುದ್ಧ ಗಾಳಿ ಸಿಗುತ್ತಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹಿಂದಿನ ಕಾಲದಲ್ಲಿ ಖಾಲಿ ಜಾಗದಲ್ಲಿ ಎತ್ತರದ ಮರ ಕಾಣುತ್ತಿದ್ದವು. ಅರಣ್ಯ ಸಂಪತ್ತು ಸಮೃದ್ಧವಾಗಿತ್ತು. ಹೀಗಾಗಿ ಸಕಾಲಕ್ಕೆ ಮಳೆಯಾಗಿ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಅರಣ್ಯ ಸಂಪತ್ತು ನಾಶವಾಗಿದೆ. ಇದರಿಂದ ಬರ ಪರಿಸ್ಥಿತಿ ಎದುರಾಗಿದೆ’ ಎಂದು ವಿಷಾದಿಸಿದರು.

ಜಾಗೃತಿ ಮೂಡಿಸಬೇಕು: ‘ಖಾಲಿ ಜಾಗದಲ್ಲೆಲ್ಲಾ ಈಗ ಗಗನಚುಂಬಿ ಕಟ್ಟಡಗಳು ತಲೆ ಎತ್ತಿವೆ. ಮರ ಗಿಡ ಕಡಿದಿರುವುದರಿಂದ ಪ್ರಾಣಿ ಪಕ್ಷಿ ಸಂಕುಲ ನಾಶವಾಗುತ್ತಿದೆ. ಪರಿಸರ ಹಾಗೂ ಸಾರ್ವಜನಿಕ ಆಸ್ತಿ ರಕ್ಷಣೆಗೆ ಸರ್ಕಾರ ಅನೇಕ ಕಾರ್ಯಕ್ರಮ ರೂಪಿಸುತ್ತಿದೆ. ಸರ್ಕಾರದ ಜತೆಗೆ ಜನ ಕೈಜೋಡಿಸಬೇಕು. ಪರಿಸರ ನಾಶದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿರ್ಬಂಧಿಸಲಾಗಿದೆ. ಪ್ಲಾಸ್ಟಿಕ್ ಕೈ ಚೀಲ, ಬ್ಯಾನರ್ ಮತ್ತು ಫ್ಲೆಕ್ಸ್‌ ಬಳಸುವಂತಿಲ್ಲ. ಆದರೂ ಜನ ಮಿತಿ ಮೀರಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಬಟ್ಟೆ ಚೀಲ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಪ್ರಜೆಯ ಜವಾಬ್ದಾರಿ: ‘ಮಹಾತ್ಮ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸಾಗಿಸಿದರೆ ಮಾತ್ರ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ. ಸ್ವಚ್ಛತೆ ಕಾಪಾಡುವುದು ಕೇವಲ ಸರ್ಕಾರಗಳ ಕೆಲಸವಲ್ಲ. ಇದು ಪ್ರತಿ ಪ್ರಜೆಯ ಜವಾಬ್ದಾರಿ’ ಎಂದು ಜಿಲ್ಲಾ ನೆಹರೂ ಯುವ ಕೇಂದ್ರದ ಅಧಿಕಾರಿ ಪ್ರವೀಣ್‌ಕುಮಾರ್ ಹೇಳಿದರು.

‘ಪರಿಸರ ನಾಶದಿಂದ ಪ್ರಾಣಿ ಪಕ್ಷಿ ಸಂಕುಲಕ್ಕೆ ಸಮಸ್ಯೆಯಾಗುತ್ತಿದೆ. ಅರಣ್ಯ ನಾಶದಿಂದ ಭೂ ಸವಕಳಿ ಹೆಚ್ಚುತ್ತಿದೆ. ಜಲ ಮಾಲಿನ್ಯದಿಂದ ಅಂತರ್ಜಲ ಕಲುಷಿತಗೊಳ್ಳುತ್ತಿದೆ. ಜನ ಇನ್ನಾದರೂ ಎಚ್ಚೆತ್ತು ಪರಿಸರ ಮಾಲಿನ್ಯ ತಡೆಗೆ ಮುಂದಾಗಬೇಕು. ಇಲ್ಲದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅರಣ್ಯ ಪ್ರದೇಶ ಭೂಗಳ್ಳರ ಪಾಲಾಗುತ್ತಿದ್ದು, ಎಲ್ಲೆಡೆ ಲೇಔಟ್‌ಗಳು ನಿರ್ಮಾಣವಾಗುತ್ತಿವೆ. ಇದನ್ನು ತಪ್ಪಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಕಾದಿದೆ. ಪರಿಸರ ರಕ್ಷಣೆಗೆ ದೃಢ ಸಂಕಲ್ಪ ಮಾಡಬೇಕು. ಸರ್ಕಾರಿ ಜಾಗದಲ್ಲಿ, ಶಾಲಾ ಆವರಣದಲ್ಲಿ, ರಸ್ತೆ ಬದಿಯಲ್ಲಿ ಸಸಿ ನೆಟ್ಟು ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಮಧುಲತಾ ಮೋಸಸ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ನಾಗರಾಜ್, ಭಾರತ ಸೇವಾ ದಳದ ಜಿಲ್ಲಾ ಸಂಘಟಕರಾದ ದಾನೇಶ್, ನೆಹರೂ ಯುವ ಕೇಂದ್ರದ ಅಧಿಕಾರಿಗಳಾದ ಮುನೇಶ್‌, ಶಿವಕುಮಾರ್ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.