ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

28ಕ್ಕೆ ಬೆಂಗಳೂರಲ್ಲಿ ಬೃಹತ್‌ ಪ್ರತಿಭಟನೆ: ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ

ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ: ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ ನಿರ್ಧಾರ
Published : 14 ಆಗಸ್ಟ್ 2024, 14:31 IST
Last Updated : 14 ಆಗಸ್ಟ್ 2024, 14:31 IST
ಫಾಲೋ ಮಾಡಿ
Comments

ಕೋಲಾರ: ‘ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಆಗಸ್ಟ್ 28ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ‘ಕಾಂಗ್ರೆಸ್ ಹಠಾವೋ, ದಲಿತ್ ಬಚಾವೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಒಕ್ಕೂಟದ ರಾಜ್ಯ ಸಂಚಾಲಕ ಪ್ರೊ.ಎ.ಹರಿರಾಂ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ‌, ‘ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದ ಹಿನ್ನೆಲೆಯಲ್ಲಿ ಮನೆಗೆ ಕಳಿಸಿದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ನಾವೇ ರಾಜ್ಯದಾದ್ಯಂತ ಶ್ರಮಿಸಿ ಮತದಾರರಲ್ಲಿ ಭರವಸೆ ಮೂಡಿಸಿದೆವು. ದಲಿತರು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿದರು. ಆದರೆ ಇವರೂ ಈಗ ಬಿಜೆಪಿ ಹಾದಿ ಹಿಡಿದಿರುವುದು ನೋವಿನ ಸಂಗತಿ. ಈ ಎರಡೂ ಪಕ್ಷಗಳಿಗೆ ಪರ್ಯಾಯ ಈಗಿನ ತುರ್ತಾಗಿದೆ’ ಎಂದರು.

‘15 ಬಾರಿ ಬಜೆಟ್ ಮಂಡಿಸಿದವರು, ದಲಿತ ರಾಮಯ್ಯ ಎಂದೆಲ್ಲಾ ಸಿದ್ದರಾಮಯ್ಯ ಅವರನ್ನು ಬಣ್ಣಿಸಲಾಗಿತ್ತು. ಪ್ರಣಾಳಿಕೆಯಲ್ಲಿಯೂ ದಲಿತಪರ ಎಂದು ಸಾಕಷ್ಟು ಆಶ್ವಾಸನೆ ನೀಡಿದ್ದರು. ಈಗ ಹೊಸ ಯೋಜನೆ ಜಾರಿಗೆ ತರುವ ಬದಲು ಇರುವ ಯೋಜನೆಗಳನ್ನೇ ತೆಗೆಯಲು ಮುಂದಾಗಿದ್ದಾರೆ. ದಲಿತರ ವಿರೋಧಿಯಾಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ. ಎಸ್‌ಸಿಪಿ-ಟಿಎಸ್‌ಪಿ ಅನುದಾನದ ₹25 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಯು ದಲಿತರ ಜಮೀನು ಮಾರಾಟದ ಹೆಸರಿನಲ್ಲಿ ಹಣ ದೋಚುತ್ತಿದ್ದಾರೆ. ವಿದ್ಯಾರ್ಥಿ ವೇತನ ನೀಡುವುದು ವ್ಯರ್ಥ ಎಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ಹೇಳುತ್ತಾರೆ. ಪ್ರಗತಿಪರ ಸಂಘಟನೆಗಳ ನಾಯಕರಿಗೆ ಇದ್ಯಾವುದೂ ಕಣ್ಣಿಗೆ ಕಾಣುತ್ತಿಲ್ಲ. ನಮ್ಮ ಪ್ರತಿಭಟನೆ ಯಾವುದೇ ಪಕ್ಷದ ಪರ ಅಥವಾ ವಿರುದ್ಧವಲ್ಲ. ದಲಿತ ಸಮುದಾಯದ ಉಳಿವಿಗೆ ಮಾತ್ರ’ ಎಂದರು.

ಪದಾಧಿಕಾರಿ ಸಿದ್ಧಾರ್ಥ್ ಆನಂದ್ ಮಾಲೂರು ಮಾತನಾಡಿ, ‘ಕೋಚಿಮುಲ್‌, ಡಿಸಿಸಿ ಬ್ಯಾಂಕ್‌ ಸೇರಿದಂತೆ ಜಿಲ್ಲೆಯಲ್ಲಿ ₹5 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ಮೀತಿಮೀರಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳೂ ಹೆಚ್ಚಿವೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

ದಲಿತ ಸಮಾಜಸೇನೆ ರಾಜ್ಯ ಅಧ್ಯಕ್ಷ ಸೂಲಿಕುಂಟೆ ಆನಂದ್, ‘ಕೆಲವು ಮುಖಂಡರು ಕಾಂಗ್ರೆಸ್, ಬಿಜೆಪಿ ನಾಯಕರ ಬೆಂಬಲಿಗರಾಗಿದ್ದಾರೆಯೇ ಹೊರತು ಹೋರಾಟಗಾರರಲ್ಲ. ಪ್ರತಿಭಟನೆಯಲ್ಲಿ ಸುಮಾರು 25 ಸಂಘಟನೆಗಳಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ’ ಎಂದರು.

ಚಳವಳಿ ರಾಜಣ್ಣ ಮಾತನಾಡಿ, ‘ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ರೂಪಿಸಿದ ಸಿದ್ದರಾಮಯ್ಯ ಅವರೇ ಈಗ ಉಲ್ಲಂಘನೆ ಮಾಡುತ್ತಿದ್ದಾರೆ.‌ ದಲಿತ ಸಮುದಾಯಗಳಿಗೆ ಹೆಚ್ಚು ಹಣ ಇಟ್ಟಿದ್ದು ಸಿದ್ದರಾಮಯ್ಯ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ,‌ ಅದನ್ನು ವಾಪಸ್‌ ‌ಪಡೆದಿದ್ದೂ ಅವರೇ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಸಮಿತಿಯ ಪದಾಧಿಕಾರಿಗಳಾದ ಶಂಕರ್ ರಾಮಲಿಂಗಯ್ಯ, ಸಿದ್ದಾಪುರ ಮಂಜುನಾಥ್, ಜಗನ್ನಾಥ್, ಮುನೇಶ್ ಡಿ., ಮೋಹನ್ ಇದ್ದರು.

ದಲಿತ ಸಮುದಾಯದವರ ಮನೆ ಕಾಯಬೇಕಿದ್ದ ಮೀಸಲು ಕ್ಷೇತ್ರದ ಶಾಸಕರು ತಮ್ಮ ನಾಯಕರ ಮನೆ ಕಾಯುವ ಕೆಲಸ ಮಾಡುತ್ತಿದ್ದಾರೆ
ಪ್ರೊ.ಎ.ಹರಿರಾಂ ಅಹಿಂದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT