ಶನಿವಾರ, ಜುಲೈ 24, 2021
25 °C
ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದ ಪ್ರಕರಣಗಳು: ಹೆಚ್ಚಿದ ಆತಂಕ

ಕೋಲಾರ | ವೈದ್ಯಕೀಯ ವಿದ್ಯಾರ್ಥಿಗಳು, ನರ್ಸ್‌ಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಕಳೆದ 24 ತಾಸಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ನರ್ಸ್‌ ಸೇರಿದಂತೆ 8 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.

ಜಿಲ್ಲಾ ಕೇಂದ್ರದ ಆರ್‌.ಎಲ್‌ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಮೂವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದೀಗ ಸೋಂಕು ಹರಡಿರುವುದು ಖಚಿತವಾಗಿದೆ.

ಮತ್ತೊಂದೆಡೆ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸಪುರ ತಾಲ್ಲೂಕಿನ ಗೂಟ್ಟುಕುಂಟೆ ಗ್ರಾಮದ 26 ವರ್ಷದ ನರ್ಸ್‌ಗೆ ಸೋಂಕು ಇರುವುದು ದೃಢಪಟ್ಟಿದೆ. ಇವರು ಎಸ್‌ಎನ್ಆರ್‌ ಆಸ್ಪತ್ರೆಗೆ ದಾಖಲಾಗಿರುವ ನಗರದ ಶಹಿನ್‌ಷಾನಗರ ಬಡಾವಣೆಯ ಸೋಂಕಿತ ಆಟೊ ಚಾಲಕರೊಬ್ಬರಿಗೆ ಚಿಕಿತ್ಸೆ ನೀಡಿದ್ದರು.

ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕಿನ ಜಂಗಮ ಗುರ್ಜೇನಹಳ್ಳಿಯ ಕ್ಯಾನ್ಸರ್‌ ರೋಗಿಯೊಬ್ಬರಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿದೆ. ಇವರಿಗೆ ಹೇಗೆ ಸೋಂಕು ತಗುಲಿತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಬಂಗಾರಪೇಟೆ ತಾಲ್ಲೂಕಿನಲ್ಲಿ 2 ಕೊರೊನಾ ಸೋಂಕಿನ ಪ್ರಕರಣ ವರದಿಯಾಗಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಿಂದ ಬಂಗಾರಪೇಟೆ ತಾಲ್ಲೂಕಿನ ಬನಹಳ್ಳಿಯಲ್ಲಿರುವ ತವರು ಮನೆಗೆ ಬಂದಿದ್ದ 20 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ. ಪತಿಯ ಜತೆ ಕೃಷ್ಣಗಿರಿ ಜಿಲ್ಲೆಯಲ್ಲಿ ವಾಸವಾಗಿದ್ದ ಇವರು ಜೂನ್‌ 15ರಂದು ಬನಹಳ್ಳಿಗೆ ಬಂದಿದ್ದರು.

ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯು ಇವರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇವರಿಗೆ ಸೋಂಕು ತಗುಲಿರುವುದಾಗಿ ಪ್ರಯೋಗಾಲಯದ ವರದಿಯಲ್ಲಿ ಹೇಳಲಾಗಿದೆ. ಪ್ರಯೋಗಾಲಯದ ವರದಿ ಬರುವ ಮುನ್ನವೇ ಇವರು ಜೂನ್‌ 16ರಂದು ಕೃಷ್ಣಗಿರಿ ಜಿಲ್ಲೆಯಲ್ಲಿನ ಪತಿಯ ಮನೆಗೆ ಮರಳಿದ್ದಾರೆ. ಇವರ ಸಂಪರ್ಕಕ್ಕೆ ಬಂದಿರುವ ಕುಟುಂಬದ 10ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಜಿಲ್ಲಾ ಕೇಂದ್ರದಲ್ಲಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ವಸತಿ ಸಮುಚ್ಚಯದಲ್ಲಿ ಜೂನ್‌ 14ರಂದು ಪತ್ತೆಯಾಗಿದ್ದ ಕೊರೊನಾ ಸೋಂಕಿತ ಚಾಲಕನ ಪ್ರಾಥಮಿಕ ಸಂಪರ್ಕದಿಂದ ಬಂಗಾರಪೇಟೆ ತಾಲ್ಲೂಕಿನ ಕುಪ್ಪನಹಳ್ಳಿಯಲ್ಲಿನ ಅವರ ಅತ್ತೆಗೆ ಸೋಂಕು ತಗುಲಿದೆ. ಸೋಂಕಿತ ಚಾಲಕ ಕುಪ್ಪನಹಳ್ಳಿಯಲ್ಲಿನ ಪತ್ನಿಯ ಮನೆಗೆ ಹೋಗಿ ಬಂದಿದ್ದರು.

ಯುವತಿಗೆ ಸೋಂಕು: ಕೆಜಿಎಫ್‌ ತಾಲ್ಲೂಕಿನ ತೂಕಲ್‌ ರಾಮಪುರ ಗ್ರಾಮಕ್ಕೆ ಇತ್ತೀಚೆಗೆ ದೆಹಲಿಯಿಂದ ಬಂದಿದ್ದ 25 ವರ್ಷದ ಯುವತಿಗೆ ಸೋಂಕು ತಗುಲಿದೆ. ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದ ಇವರು ಜ್ವರದ ಕಾರಣಕ್ಕೆ 2 ದಿನದ ಹಿಂದೆ ಜಿಲ್ಲಾ ಕೇಂದ್ರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.

ಇವರು ತೂಕಲ್‌ ರಾಮಪುರಕ್ಕೆ ಬಂದ ನಂತರ ಸಂಬಂಧಿಕರೊಬ್ಬರು ಮದುವೆಯಲ್ಲಿ ಭಾಗಿಯಾಗಿ ಹಲವರ ಸಂಪರ್ಕಕ್ಕೆ ಬಂದಿದ್ದರು. ಅಲ್ಲದೇ, ಗ್ರಾಮದ ಹಲವರು ಇವರ ಸಂಪರ್ಕಕ್ಕೆ ಬಂದಿರುವುದು ಆರೋಗ್ಯ ಇಲಾಖೆಯ ಪರಿಶೀಲನೆಯಿಂದ ಗೊತ್ತಾಗಿದೆ. ಸೋಂಕಿತರು ಪತ್ತೆಯಾಗಿರುವ ಬಡಾವಣೆ ಹಾಗೂ ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು