ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕು ಹಸನಾಗಲಿ: ಸಚಿವ ನಾಗೇಶ್‌

ಮಿಂಡಹಳ್ಳಿ ಕೈಗಾರಿಕಾ ಪ್ರದೇಶ: ಕೃಷಿ ಜಮೀನು ದರ ನಿಗದಿಗೆ ಸಭೆ
Last Updated 10 ಆಗಸ್ಟ್ 2020, 14:10 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಅಭಿವೃದ್ಧಿ ಜತೆಗೆ ರೈತರ ಬದುಕು ಹಸನು ಮಾಡಬೇಕು. ಕೃಷಿ ಭೂಮಿಗೆ ಕಂಪನಿಗಳು ಮಾರುಕಟ್ಟೆ ದರಕ್ಕಿಂತ ದುಪಟ್ಟು ಬೆಲೆ ಕೊಡಬಹುದು. ರೈತರು ಈ ಹಣ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇಲ್ಲಿ ಸೋಮವಾರ ನಡೆದ ನರಸಾಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಮಿಂಡಹಳ್ಳಿ ಗ್ರಾಮದ ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ರೈತರು ಅಭಿವೃದ್ಧಿ ಚಟುವಟಿಕೆಗಳಿಗೆ ಕೃಷಿ ಭೂಮಿ ಬಿಟ್ಟು ಕೊಟ್ಟ ಮೇಲೆ ಪರ್ಯಾಯವಾಗಿ ಬೇರೆಡೆ ಭೂಮಿ ಖರೀದಿಸಿ ಕೃಷಿ ಮಾಡಬೇಕು’ ಎಂದರು.

‘ಜಮೀನು ನೀಡಿದ ರೈತರ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕೆಂದು ಕಂಪನಿಗಳಿಗೆ ತಿಳಿಸಲಾಗಿದೆ. ಕುಟುಂಬದ ವಿದ್ಯಾವಂತರು ಉದ್ಯೋಗ ಪಡೆದರೆ ಜೀವನ ನಿರ್ವಹಿಸಬಹುದು. ಕಂಪನಿಗಳು ರೈತರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ಮಾಲೂರು ತಾಲ್ಲೂಕಿಗೆ ಸೇರಿದ ಮಿಂಡಹಳ್ಳಿಯ ಜಮೀನನ್ನು ಕೈಗಾರಿಕಾ ಪ್ರದೇಶವಾಗಿ ಪರಿವರ್ತಿಸಿ ಆದೇಶ ಮಾಡಲಾಗಿದೆ. ಟಾಟಾ ಕಂಪನಿಗೆ 300 ಎಕರೆ ಜಮೀನು ಅಗತ್ಯವಿದ್ದು, ರೈತರ ಜಮೀನಿಗೆ ದರ ನಿಗದಿಪಡಿಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

‘ಈ ಹಿಂದೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವಿಸ್ಟ್ರಾನ್‌ ಕಂಪನಿಗೆ ಪ್ರತಿ ಎಕರೆಗೆ ₹ 1 ಕೋಟಿ ದರದಲ್ಲಿ ಭೂಮಿ ಮಾರಾಟ ಮಾಡಲಾಗಿದೆ. ಈಗ ಎಕರೆಗೆ ₹ 43 ಲಕ್ಷ ನಿಗದಿಪಡಿಸಿದರೆ ರೈತರು ಭೂಮಿ ಕೊಡುವುದಿಲ್ಲ. ವಿಸ್ಟ್ರಾನ್‌ ಕಂಪನಿ ಖರೀದಿಸಿದ ದರವನ್ನೇ ನಿಗದಿಪಡಿಸಬೇಕೆಂಬ ಒತ್ತಡವಿದೆ’ ಎಂದು ವಿವರಿಸಿದರು.

ಸ್ಥಳೀಯರಿಗೆ ಮೀಸಲಾತಿ: ‘ಗ್ರಾಮದ ಶಾಲೆ, ಸ್ಮಶಾನ, ದೇವಾಲಯ ಸೇರಿದಂತೆ ಕೆಲ ಸೌಕರ್ಯಗಳಿಗೆ ಜಾಗ ಬಿಡಬೇಕು. ಕಂಪನಿಗಳು ಜಮೀನು ನೀಡಿದ ರೈತರ ಗ್ರಾಮಕ್ಕೆ ರಸ್ತೆ, ದೀಪ, ಕುಡಿಯುವ ನೀರಿನ ಸೌಕರ್ಯ ಕಲ್ಪಿಸಬೇಕು ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡಬೇಕು’ ಎಂದು ಸೂಚಿಸಿದರು.

ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಜಿಲ್ಲೆಯು ರಾಷ್ಟ್ರೀಯ ಹೆದ್ದಾರಿ ಸೌಲಭ್ಯ ಹೊಂದಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವುದರಿಂದ ಎಲ್ಲರೂ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗುತ್ತಿದ್ದಾರೆ. ಜಿಲ್ಲೆಯು ಭವಿಷ್ಯದಲ್ಲಿ ಇಡೀ ರಾಜ್ಯದಲ್ಲಿ ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಹೊಂದಲಿದೆ’ ಎಂದು ಅಭಿಪ್ರಾಯಪಟ್ಟರು.

‘ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಬಳಿ 1,500 ಎಕರೆ ಮತ್ತು ಮಾಲೂರು ಬಳಿ 1,500 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಮೀಸಲಿಡಲಾಗುವುದು. ಭವಿಷ್ಯದಲ್ಲಿ ಕೈಗಾರಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ಬರಲಿದ್ದು, ಕೋಲಾರ ದೊಡ್ಡ ವಾಣಿಜ್ಯ ನಗರಿಯಾಗಿ ಪರಿವರ್ತನೆಯಾಗಲಿದೆ. ಜತೆಗೆ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯಾಗಲಿವೆ’ ಎಂದು ಹೇಳಿದರು.

ಪರ್ಯಾಯ ಜಮೀನು: ‘ಮಿಂಡಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಲಸೌಕರ್ಯಕ್ಕೆ ಕೊರತೆ ಆಗಬಾರದು. ರೈತರಿಗೆ ಪರ್ಯಾಯ ಜಮೀನು ಮೀಸಲಿಟ್ಟು, ಕೃಷಿ ಮಾಡಲು ಅವಕಾಶ ಕಲ್ಪಿಸಬೇಕು. ಜಿಲ್ಲಾಧಿಕಾರಿಗಳು ಮತ್ತು ರಾಜ್ಯದ ಮಟ್ಟದ ಅಧಿಕಾರಿಗಳು ಜಮೀನು ಮಾಲೀಕರಾದ ರೈತರೊಂದಿಗೆ ಚರ್ಚಿಸಿ ದರದ ಸಂಬಂಧ ಅಂತಿಮ ತೀರ್ಮಾನ ಮಾಡಬೇಕು’ ಎಂದು ಶಾಸಕ ಕೆ.ವೈ.ನಂಜೇಗೌಡ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ರಾಜ್ಯ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ಅನುರಾಧಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸುರೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT