ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘ ದೂತ್ ಆ್ಯಪ್‌ ಆರಂಭ

ರೈತರಿಗೆ ಕೃಷಿ ಆಧಾರಿತ ಸಲಹೆ–ಹವಾಮಾನ ಮುನ್ಸೂಚನೆ
Last Updated 4 ಸೆಪ್ಟೆಂಬರ್ 2021, 15:29 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಆಧಾರಿತ ಸಲಹೆ ಮತ್ತು ಸ್ಥಳೀಯ ಹವಾಮಾನ ಮುನ್ಸೂಚನೆಯನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ತಲುಪುವ ಪ್ರಯತ್ನವನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಜಂಟಿಯಾಗಿ ಮೇಘ ದೂತ್ ಮೊಬೈಲ್‌ ಆ್ಯಪ್‌ ಮೂಲಕ ಆರಂಭಿಸಿವೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರು ಬೆಳೆಯುವ ಬೆಳೆಗಳಲ್ಲಿ ಅಧಿಕ ಇಳುವರಿ ಪಡೆಯಲು ಹವಾಮಾನ ಹಾಗೂ ಕೃಷಿ ಚಟುವಟಿಕೆಗಳು ಸಮತೋಲನದಿಂದ ಕೂಡಿರಬೇಕು. ರೈತರು ಮಾಡುವ ಕೃಷಿ ಚಟುವಟಿಕೆಗಳು ಶೇ 40ರಷ್ಟು ಮಾತ್ರ ಬೆಳೆಯ ಮೇಲೆ ಪರಿಣಾಮ ಬೀರುತ್ತವೆ. ಉಳಿದ ಶೇ 60ರಷ್ಟು ಹವಾಮಾನ ಅಂಶಗಳಿಂದ ಕೂಡಿರುತ್ತವೆ ಎಂದು ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಒಗ್ಗೂಡಿ ಜಿಲ್ಲಾ ಕೇಂದ್ರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲಾ ಕೃಷಿ ಹವಾಮಾನ ಘಟಕ ಸ್ಥಾಪನೆ ಮಾಡಿವೆ. ಇದು ರೈತರಿಗೆ ಹವಾಮಾನ ಮುನ್ಸೂಚನೆ ನೀಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಹವಾಮಾನ ವೈಪರಿತ್ಯದಿಂದ ಆಗುವ ಪರಿಣಾಮಗಳ ಕುರಿತು ರೈತರಲ್ಲಿ ಅರಿವು ಮೂಡಿಸಿ ವಿವಿಧ ಹಂತದ ಹವಾಮಾನ ಮುನ್ಸೂಚನೆ ನೀಡಲು, ಕೃಷಿಯನ್ನು ಲಾಭದಾಯಕವಾಗಿಸಲು, ರೈತರಿಗೆ ಕಾಲಕಾಲಕ್ಕೆ ಸೂಕ್ತ ಸಲಹೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಭಾರತೀಯ ಹವಾಮಾನ ಇಲಾಖೆ ಸಾಕಷ್ಡು ಪ್ರಯತ್ನ ಪಟ್ಟಿದೆ ನಡೆಸಿದೆ ಎಂದು ಹೇಳಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಯಂಚಾಲಿತ ಹವಾಮಾನ ಉಪಕರಣವು ಏ.6ರಿಂದ ಚಾಲ್ತಿಯಲ್ಲಿದೆ. ಈ ಉಪಕರಣವು 3 ಕಿ.ಮೀ ವ್ಯಾಪ್ತಿಯಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ, ತೇವಾಂಶ, ಗಾಳಿಯ ವೇಗ ಮತ್ತು ದಿಕ್ಕು, ಮಣ್ಣಿನ ತೇವಾಂಶ ಮತ್ತು ಉಷ್ಣಾಂಶ, ಮಳೆ ಪ್ರಮಾಣದ ಕುರಿತು ಪ್ರತಿನಿತ್ಯ 15 ನಿಮಿಷಕ್ಕೊಮ್ಮೆ ಮಾಹಿತಿ ನೀಡುತ್ತದೆ ಎಂದು ವಿವರಿಸಿದ್ದಾರೆ.

ಜಿಲ್ಲಾ ಕೃಷಿ ಹವಾಮಾನ ಘಟಕವು ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಮುಂದಿನ 5 ದಿನಗಳ ಹವಾಮಾನದ ಸ್ಥಿತಿಗತಿ, ಆ ಹವಾಮಾನ ಅಂಶಗಳಿಗೆ ಸರಿಯಾಗಿ ರೈತರು ಬೆಳೆಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳ ಕುರಿತು ವಾಟ್ಸ್‌ ಆ್ಯಪ್‌ ಮತ್ತು ಫೇಸ್‌ಬುಕ್‌ ಮೂಲಕ ಮಾಹಿತಿ ರವಾನೆ ಮಾಡುತ್ತದೆ. ರೈತರು ತಮ್ಮ ಮೊಬೈಲ್‌ನಲ್ಲಿ ಮೇಘ ದೂತ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT