ಮಂಗಳವಾರ, ನವೆಂಬರ್ 24, 2020
22 °C

‘₹170 ಕೋಟಿ ಮೌಲ್ಯದ ಹಾಲಿನ ಉತ್ಪನ್ನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ‘ಕೋಲಾರ- ಚಿಕ್ಕಬಳ್ಳಾ ಪುರ ಜಿಲ್ಲೆಗಳಲ್ಲಿ ಕೋಲಾರ ಹಾಲು ಮಂಡಳಿ (ಕೋಚಿಮುಲ್) ಮತ್ತು ಡಿಸಿಸಿ ಬ್ಯಾಂಕ್ ರೈತರ ಪಾಲಿಗೆ ಎರಡು ಕಣ್ಣು ಗಳು’ ಎಂದು ಕೋಚಿಮುಲ್ ನಿದೇಶಕ ಕಾಡೇನಹಳ್ಳಿ ನಾಗರಾಜ್ ನುಡಿದರು.

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.

‘ಸಹಕಾರಿ ಸಂಘ ಹುಟ್ಟುಹಾಕಿ ಬೆಳೆಸುವುದು ಕಷ್ಟದ ಕೆಲಸ. ಆದರೆ ಹಾಳು ಮಾಡುವುದು ಸುಲಭದ ಕೆಲಸ. ಇಂದು ಹಾಲು ಉತ್ಪಾದನೆ ಗಣನೀಯವಾಗಿ ಏರಿದ್ದರೂ ಕೋಚಿಮುಲ್ ರೈತರಿಂದ ಹಾಲು ಪಡೆಯುತ್ತಿದೆ. ಬ್ಯಾಂಕ್‌ಗಳಿಂದ ಓಓಡಿ ರೂಪದಲ್ಲಿ ₹70 ಕೋಟಿ ಪಡೆದು ರೈತರಿಂದ ಪಡೆದ ಹಾಲಿಗೆ ಹಣ ನೀಡುತ್ತಿದೆ. ಹಾಲನ್ನು ಒಂದು ದಿನದ ಮೇಲೆ ಶೇಖರಿಸಲು ಕಾರಣ ಸಾಧ್ಯವಿಲ್ಲದ ಕಾರಣ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಸುಮಾರು ₹175 ಕೋಟಿಗಳಷ್ಟು ಹಾಲಿನ ಉತ್ಪನ್ನಗಳು ಕೋಲಾರ ಒಕ್ಕೂಟದಲ್ಲಿ ಶೇಖರವಾಗಿದೆ’ ಎಂದರು.

‘ಕೋಚಿಮುಲ್‌ಗೆ ಖಾಸಗಿ ಹಾಲು ಸಂಸ್ಥೆಗಳು ಪೈಪೋಟಿ ನೀಡುತ್ತಿದೆ. ಆದರೂ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಖಾಸಗಿ ಹಾಲು ಸಂಸ್ಥೆಗಳು ಹಾಲಿಗೆ ದ್ರವಗಳನ್ನು ಸೇರಿಸಿ ಗ್ರಾಹಕರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಕೋಚಿಮುಲ್ ಹಾಲು ಉತ್ಪಾದಕರ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ’ ಎಂದರು.

ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ ಮಾತನಾಡಿ, ‘ನೆಹರೂ ಕೋರಿಕೆಯ ಮೇರೆಗೆ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆ ಮತ್ತು ಸಹಕಾರ ಸಪ್ತಾಹವಾಗಿ ಆಚರಿಸಲಾಗುತ್ತಿದೆ’ ಎಂದರು.

ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವಿ.ರಘುಪತಿರೆಡ್ಡಿ ಮಾತನಾಡಿ, ‘ಸಹಕಾರ ಸಂಘದ ಮೂಲಕ ಅನೇಕ ಮಂದಿ ಮುಖಂಡರು ಹುಟ್ಟಿ ಕೊಂಡಿದ್ದಾರೆ. ಚುನಾವಣೆಗೆ ಮಾತ್ರ ಸಹಕಾರಿ ರಂಗವನ್ನು ಉಪಯೋಗಿಸಿ ಕೊಳ್ಳಬೇಕು. ನಂತರ ಸಂಘದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು’ ಎಂದರು.

ಒಕ್ಕೂಟದ ನಿರ್ದೇಶಕಿ ಆರ್.ಅರುಣಾ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ ಮಾತನಾಡಿದರು. ತಾಲ್ಲೂಕು ಭೂ ಬ್ಯಾಂಕ್ ನಿರ್ದೇಶಕ ಗೊಲ್ಲಹಳ್ಳಿ ಸತೀಶ್, ಹಿರಿಯ ಸಹಕಾರಿ ಎಂ.ನಂಜುಂಡಪ್ಪ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಉಪ ವ್ಯವಸ್ಥಾಪಕ ಶ್ರೀಧರಮೂರ್ತಿ, ಶ್ರೀರಾಮ್, ಕೃಷ್ಣಪ್ಪ, ಶ್ರೀನಿವಾಸಗೌಡ, ರವಿಕುಮಾರ್, ಆನಂದ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.