ಕೋಲಾರ: ಜಿಲ್ಲೆಯಲ್ಲಿ ಕಳೆದ 12 ದಿನಗಳ ಅಂತರದಲ್ಲಿ ಮೂವರು ಬಾಲಕಿಯರು, ಒಬ್ಬ ಬಾಲಕ ಕಾಣೆಯಾಗಿದ್ದ ಪ್ರಕರಣಗಳನ್ನು ಅತ್ಯಂತ ವೇಗವಾಗಿ ಮತ್ತು ಯಶಸ್ವಿಯಾಗಿ ಬಗೆಹರಿಸುವಲ್ಲಿ ಕೋಲಾರ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ದೆಹಲಿ ಪ್ರಕರಣದಲ್ಲಿ 24 ಗಂಟೆ, ಬೆಂಗಳೂರು ಪ್ರಕರಣದಲ್ಲಿ 8 ಗಂಟೆ ಹಾಗೂ ಹೈದರಾಬಾದ್ ಪ್ರಕರಣದಲ್ಲಿ ಕೇವಲ 2 ಗಂಟೆಗಳಲ್ಲಿ ಪತ್ತೆ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಕರಣ 1: ಅ.15ರಂದು ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದ ಬಾಲಕಿ ಕಾಣೆಯಾಗಿದ್ದು, ಅ.16 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಾಲಕಿಯ ದೆಹಲಿಗೆ ರೈಲಿನಲ್ಲಿ ತೆರಳುತ್ತಿರುವ ಮಾಹಿತಿ ದೊರೆತಿದೆ. ಅ.17ರಂದು ಮಹಿಳಾ ಠಾಣೆ ಸಿಬ್ಬಂದಿ ವಿಮಾನದಲ್ಲಿ ದೆಹಲಿಗೆ ತೆರಳಿ ಕ್ಯಾಬ್ ಮೂಲಕ ಮೀರತ್ಗೆ ಹೋಗಿ ಸುಮಾರು ಎರಡು ಗಂಟೆ ಪ್ರತಿ ಬೋಗಿಯನ್ನು ಶೋಧಿಸಿದ್ದಾರೆ. ಬಾಲಕಿಯನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.

ಪ್ರಕರಣ 2, 3: ಅ.24ರಂದು ಶಾಲೆಗೆ ಹೋಗಿ ವಾಪಸ್ಸು ಬಾರದೇ ಕಾಣೆಯಾಗಿದ್ದ ಇಬ್ಬರು ಬಾಲಕಿಯರ ಕುರಿತು ಅ.25ರಂದು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ ಒಬ್ಬರು ಮೊಬೈಲ್ ಮೂಲಕ ಸಂಪರ್ಕ ಸಾಧಿಸಿದ ಹಿನ್ನೆಲೆಯಲ್ಲಿ ಸ್ಥಳದ ಮಾಹಿತಿ ಪಡೆದು, ಉಪ್ಪಾರಪೇಟೆ ಪೊಲೀಸ್ ಠಾಣೆಯ ಸಹಕಾರದಿಂದ ಮೆಜೆಸ್ಟಿಕ್ನಲ್ಲಿ ಇಬ್ಬರನ್ನೂ ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಯಾರನ್ನೋ ಭೇಟಿಯಾಗಲು ಇವರಿಬ್ಬರು ಹುಬ್ಬಳ್ಳಿ–ಧಾರವಾಡ ರೈಲು ಹಿಡಿದು ಹೊರಟ್ಟಿದ್ದರು ಎಂಬುದು ಗೊತ್ತಾಗಿದೆ.

ಪ್ರಕರಣ 4: ಅ.21 ರಂದು ಕೋಲಾರ ತಾಲ್ಲೂಕಿನ ರಾಮಸಂದ್ರದ ಬಾಲಕನೊಬ್ಬ ಕಾಣೆಯಾಗಿದ್ದು, ಅ.26 ರಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೈದರಾಬಾದ್ ಎಲ್.ಬಿ.ನಗರದಲ್ಲಿರುವ ಮಾಹಿತಿ ದೊರೆತ ತಕ್ಷಣ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಬಾಲಕನನ್ನು ಸುರಕ್ಷಿತವಾಗಿ ಪತ್ತೆ ಮಾಡಿ ಕೋಲಾರಕ್ಕೆ ಕರೆತರಲಾಯಿತು.

ಈ ಎಲ್ಲಾ ಕಾರ್ಯಾಚರಣೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ರವಿಶಂಕರ್, ಜಗದೀಶ್, ಡಿವೈಎಸ್ಪಿ ಎಂ.ಎಚ್.ನಾಗ್ತೆ ನೇತೃತ್ವದಲ್ಲಿ ನಡೆದವು.

ಕೋಲಾರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಂಕರಾಚಾರಿ, ಪಿಎಸ್ಐ ಸರಸ್ವತಮ್ಮ, ಸಿಬ್ಬಂದಿ ಬಿ.ಶ್ರೀನಿವಾಸಯ್ಯ, ರಮೇಶ್, ದೇವರಾಜ್, ಎಸ್.ಎನ್. ಮಂಜುನಾಥ್, ರಾಜೇಶ್.ಕೆ, ಅರುಣ್ ಮೂರ್ತಿ, ನಿಂಗಣ್ಣ, ರೋಜಾ, ಭಾರತಿ ಹಾಗೂ ತಾಂತ್ರಿಕ ವಿಭಾಗದ ಮುರಳಿ ಮತ್ತು ಶ್ರೀನಾಥ್ ಶ್ರಮವಹಿಸಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಥುರಾ, ದೆಹಲಿ ರೈಲ್ವೆ ಪೊಲೀಸರು ಹಾಗೂ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯ ಮಾರುತಿ.ಬಿ, ಹರೀಶ್ ಎಚ್.ಆರ್., ಎಎಸ್ಐ ಪ್ರವೀಣ್ ಕುಮಾರ್ ಕೆ.ಎಸ್. ಅವರು ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.

ಪೋಷಕರೇ ಮಕ್ಕಳ ಮೇಲೆ ಕಣ್ಣಿಡಿ

ಮಕ್ಕಳ ಮೇಲೆ ಪೋಷಕರು ಸದಾ ನಿಗಾ ಇಡಬೇಕು. ಎಲ್ಲಿ ಹೋಗುತ್ತಾರೆ ಎಲ್ಲಿ ತಿರುಗಾಡುತ್ತಾರೆ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಿರಬೇಕು. ಮಕ್ಕಳು ಮೊಬೈಲ್ ಬಳಸುವುದಕ್ಕೆ ಕಡಿವಾಣ ಹಾಕಬೇಕು. ಮೊಬೈಲ್ ಕೊಟ್ಟಿದ್ದರೆ ಅದನ್ನು ಆಗಾಗ್ಗೆ ಪರಿಶೀಲನೆ ನಡೆಸುತ್ತಿರಬೇಕು. ಮಕ್ಕಳನ್ನು ಮಾತನಾಡಿಸಿ ಸಮಸ್ಯೆ ಆಲಿಸಬೇಕು. ಶಾಲಾ ಶಿಕ್ಷಕರು ಕೂಡ ಮಕ್ಕಳ ಮೇಲೆ ನಿಗಾ ಇಡಬೇಕು ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋಲಾರ

ಮುಳಬಾಗಿಲು ಪ್ರಕರಣದಲ್ಲೂ ಪತ್ತೆ

ಮುಳಬಾಗಿಲು ನಗರದಲ್ಲಿ ಈಚೆಗೆ ಕಾಣೆಯಾಗಿದ್ದ ಇಬ್ಬರು ಮಕ್ಕಳನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ದೂರು ದಾಖಲಾಗಿರಲಿಲ್ಲ. 11 ಹಾಗೂ 14 ವರ್ಷ ವಯಸ್ಸಿನ ಬಾಲಕಿಯರು ಶಾಲೆಗೆ ಹೋಗುವುದಾಗಿ ಮನೆಯಿಂದ ತೆರಳಿದ್ದರು. ಆದರೆ ಶಾಲೆಗೆ ಹೋಗದೆ ಮನೆಗೂ ಬರದೇ ಕಾಣೆಯಾಗಿದ್ದರು. ಈ ಸಂಬಂಧ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದರು. ಸಾಮಾಜಿಕ ಜಾಲತಾಣದಲ್ಲೂ ಸಹಾಯ ಹಸ್ತ ಕೋರಲಾಗಿತ್ತು. ಅದೇ ದಿನ ಪತ್ತೆ ಹಚ್ಚಿದ್ದರು.

ಮೊಬೈಲ್ನಲ್ಲಿದ್ದ ಆ್ಯಪ್ನಿಂದ ಬಾಲಕಿ ಪತ್ತೆ

ಮನೆ ಬಿಟ್ಟು ದೆಹಲಿಯತ್ತ ತೆರಳುತ್ತಿದ್ದ ಬಾಲಕಿಯ ಮೊಬೈಲ್ನಲ್ಲಿ ಅಳವಡಿಸಿದ್ದ ‘ಪೇರೆಂಟ್ ಕಂಟ್ರೋಲ್ ಆ್ಯಪ್’ ಜಾಡು ಹಿಡಿದು ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೋಷಕರೇ ಆಕೆಯ ಮೊಬೈಲ್ನಲ್ಲಿ ಈ ಆ್ಯಪ್ ಅಳವಡಿಸಿದ್ದರು. ನಂತರ ಬಾಲಕಿಯ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಬಾಲಕಿಯು ಆಗ್ರಾಕ್ಕೂ ಹೋಗಿ ಬಂದಿದ್ದಾಳೆ. ಆದರೂ ಪೊಲೀಸರು ತಮ್ಮ ಪ್ರಯತ್ನ ಬಿಡದೆ ರೈಲ್ವೆ ಪೊಲೀಸರ ಸಹಕಾರ ಪಡೆದು ರೈಲಿನ ಬೋಗಿಗಳನ್ನು ತಡಕಾಡಿ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಂದೆ ಬೈಯ್ದರೆಂದು ಸಿಟ್ಟಿನಿಂದ ಬಾಲಕಿಯ ಮನೆ ಬಿಟ್ಟು ಹೋಗಿದ್ದಳು ಎಂಬುದು ಗೊತ್ತಾಗಿದೆ.