ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ಗೌರವ ನೀಡದಿರೋದು ದೇಶವೇ?’

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ರಮೇಶ್‌ಕುಮಾರ್‌ ಕಿಡಿ
Last Updated 29 ಜನವರಿ 2021, 13:27 IST
ಅಕ್ಷರ ಗಾತ್ರ

ಕೋಲಾರ: ‘ಉಪವಾಸ ಇರೋರಿಗೆ ಊಟ ಬೇಡ, ಊರಿಗೆ ಶಾಲೆ ಬೇಡ. ಕೇವಲ ರಾಮಮಂದಿರ ಕಟ್ಟಿದರೆ ಸಾಕು ಎನ್ನುವವರಿಗೆ ಈ ದೇಶ ಆಳಲು ಬಿಟ್ಟಿದ್ದೇವೆ. ರೈತರು, ಸೈನಿಕರಿಗೆ ಗೌರವದಿಂದ ಬದುಕಲು ಅವಕಾಶ ನೀಡದಿರೋದು ಒಂದು ದೇಶವೇ?’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಕಿಡಿಕಾರಿದರು.

ಡಿಸಿಸಿ ಬ್ಯಾಂಕ್‌ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಸಿಸಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾಧ್ಯಮಗಳು ಒಂದು ಲಕ್ಷ ಟ್ರ್ಯಾಕ್ಟರ್ ಒಂದೆಡೆ ಸೇರಿಸುವ ರೈತರ ನೋವಿನ ಬಗ್ಗೆ ಸುದ್ದಿ ಮಾಡುತ್ತಿಲ್ಲ. ಬದಲಿಗೆ ಯಾವೊನೋ ಒಬ್ಬ ಕಿಡಿಗೇಡಿ ಕೆಂಪುಕೋಟೆ ಮೇಲೆ ಬಾವುಟ ಹಾಕಿದ್ದನ್ನು ಪದೇಪದೇ ತೋರಿಸುತ್ತಿವೆ’ ಎಂದು ಟೀಕಿಸಿದರು.

‘‘ದೆಹಲಿಯಲ್ಲಿ ರೈತರ ಹೋರಾಟ ನಿಲ್ಲಿಸುವಂತೆ ಸೂಚಿಸಲಾಗಿದೆ. ಹೋರಾಟನಿರತ ರೈತರಿರುವ ಪ್ರದೇಶದಲ್ಲಿ ವಿದ್ಯುತ್‌ ಮತ್ತು ಕುಡಿಯುವ ನೀರಿನ ಸೇವೆ ಸ್ಥಗಿತಗೊಳಿಸಲಾಗಿದೆ. ಗಾಜಿಪುರ ಗಡಿಯಲ್ಲಿ ನಾಳೆಯೊಳಗೆ 10 ಲಕ್ಷ ರೈತರು ಸೇರುತ್ತಿದ್ದಾರೆ. ಇದು ರೈತರ ಶಕ್ತಿ’ ಎಂದು ಗುಡುಗಿದರು.

‘ಬಡ ರೈತರು ಹರಿದ ಪಂಚೆ, ನಿಕ್ಕರ್ ಹಾಕಿಕೊಂಡು ಹೋದರೆ ವಾಣಿಜ್ಯ ಬ್ಯಾಂಕ್‌ಗಳ ಸಿಬ್ಬಂದಿ ಒಳಗೂ ಬಿಡೋದಿಲ್ಲ. ಸಾಲ ಕೇಳಿದರೆ ಚಿನ್ನ, ಭೂಮಿ ಅಡವಿಡಬೇಕು. ಸಮಯಕ್ಕೆ ಸಾಲ ತೀರಿಸದಿದ್ದರೆ ಮನೆಮುಂದೆ ತಮಟೆ ಬಾರಿಸುತ್ತಾರೆ. ರೈತರು ಮರ್ಯಾದೆಗೆ ಅಂಜಿ ವಿಷ ಕುಡಿದು ಸಾಯುವ ಪರಿಸ್ಥಿತಿ ಸೃಷ್ಟಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಳಿ ಬಟ್ಟೆ ಹಾಕಿಕೊಂಡು ಕಾರಿನಲ್ಲಿ ಬಂದು ಸಾಲ ಪಡೆದು ಮುಳುಗಿಸುವ ಮಲ್ಯರಂತಹ ವಂಚಕರಿಗೆ ವಾಣಿಜ್ಯ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಚೆನ್ನಾಗಿ ಡ್ರೆಸ್ ಮಾಡಿಕೊಂಡು ಟೋಪಿ ಹಾಕುವವರಿಗೆ ಮಾತ್ರ ಅಲ್ಲಿ ಸುಲಭವಾಗಿ ಸಾಲ ಸಿಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.

‘ರೈತರು, ಮಹಿಳೆಯರನ್ನು ಕರೆದು ಕೂರಿಸಿ ಬಡ್ಡಿರಹಿತ ಸಾಲ ಕೊಡುವ ಡಿಸಿಸಿ ಬ್ಯಾಂಕ್‌ನಲ್ಲೇ ಉಳಿತಾಯದ ಹಣ ಠೇವಣಿ ಇಡಬೇಕು. ಇದು ಜನರ ಬ್ಯಾಂಕ್. ಉಳಿತಾಯದ ಹಣಕ್ಕೆ ಡಿಸಿಸಿ ಬ್ಯಾಂಕ್‌ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ಕೊಡುತ್ತದೆ’ ಎಂದರು.

ಪಾಪದ ಕೆಲಸ: ‘ಬ್ಯಾಂಕ್‌ನ ವಿಷಯದಲ್ಲಿ ಮಹಿಳೆಯರಿಗಿರುವ ಬದ್ಧತೆ ಪುರುಷರಿಗೆ ಇಲ್ಲವಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ ಬಡ್ಡಿರಹಿತ ಸಾಲ ಪಡೆದು ಅದನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವುದು ಪಾಪದ ಕೆಲಸ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಕಾರ್ಯಕ್ರಮದಲ್ಲಿ ರೈತರಿಗೆ ₹ 1.97 ಕೋಟಿ ಶೂನ್ಯಬಡ್ಡಿ ಸಾಲ ವಿತರಿಸಲಾಯಿತು. ಜಿ.ಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವಿ.ವೆಂಕಟಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಲ್.ಅನಿಲ್‌ಕುಮಾರ್‌, ಸೋಮಣ್ಣ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಗ್ರಾ.ಪಂ ಸದಸ್ಯರಾದ ರವಿ, ಭೂಪತಿಗೌಡ, ಸುಗಟೂರು ಸೊಸೈಟಿ ಅಧ್ಯಕ್ಷ ತಿಮ್ಮರಾಯಪ್ಪ, ಉಪಾಧ್ಯಕ್ಷೆ ರುಕ್ಕಮ್ಮ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT