ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಶ್ರೀನಿವಾಸಗೌಡರು ಸತ್ತ ಹಾವು: ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಗುಡುಗು

Last Updated 19 ಡಿಸೆಂಬರ್ 2021, 14:33 IST
ಅಕ್ಷರ ಗಾತ್ರ

ಕೋಲಾರ: ‘ಶಾಸಕ ಶ್ರೀನಿವಾಸಗೌಡರು ಜೆಡಿಎಸ್‌ ಪಾಲಿಗೆ ಸತ್ತ ಹಾವು. ಆ ಹಾವನ್ನು ಮಣ್ಣು ಮಾಡಿ 3 ದಿನಕ್ಕೆ ಹಾಲು ತುಪ್ಪ ಬಿಟ್ಟು ತಿಥಿಯನ್ನೂ ಮಾಡಿ ಮುಗಿಸಿದ್ದೇವೆ. ಅವರ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳುವ ಅಗತ್ಯವೂ ಇಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಗೋವಿಂದರಾಜು ಗುಡುಗಿದರು.

ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀನಿವಾಸಗೌಡರ ಕೋಲಾರ ಕ್ಷೇತ್ರದ ದೊಡ್ಡ ಕಪ್ಪು ಚುಕ್ಕೆ. ಅವರನ್ನು ಗೆಲ್ಲಿಸಿದ ನಮಗೆ ಈ ರೀತಿ ಅನ್ಯಾಯ ಮಾಡುತ್ತಾರೆ ಎಂದು ಕನಸು ಮನಸ್ಸಿನಲ್ಲೂ ಭಾವಿಸಿರಲಿಲ್ಲ. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಶ್ರೀನಿವಾಸಗೌಡರು ಮಾಧ್ಯಮದ ಮುಂದೆ ಬಂದು ಹೇಳಿರುವುದು ನಾಚಿಕೆಗೇಡು’ ಎಂದು ಟೀಕಿಸಿದರು.

‘ಶ್ರೀನಿವಾಸಗೌಡರಿಗೆ ನಿಯತ್ತಿಲ್ಲ. ಜೆಡಿಎಸ್ ಕಾರ್ಯಕರ್ತರೆಲ್ಲರೂ ಅವರನ್ನು ಸಂಪೂರ್ಣ ಮರೆತಿದ್ದಾರೆ. ಸತ್ತ ಹಾವಿನ ಬಗ್ಗೆ ಮಾತನಾಡುವುದು ವ್ಯರ್ಥ. ಜೆಡಿಎಸ್ ಪಕ್ಷದಿಂದ ಗೆದ್ದು ಕಾಂಗ್ರೆಸ್ ಕಡೆಗೆ ಹೋದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದು ಅನೈತಿಕ. ನಾನು ಅವರಿಂದ ಸಾಸಿವೆ ಕಾಳಷ್ಟು ಸಹಾಯ ಪಡೆದಿಲ್ಲ. ದೇವೇಗೌಡರು, ಕುಮಾರಸ್ವಾಮಿ ನನ್ನನ್ನು ವಿಧಾನ ಪರಿಷತ್‌ ಸದಸ್ಯನಾಗಿ ಮಾಡಿದರು’ ಎಂದರು.

‘ಶ್ರೀನಿವಾಸಗೌಡರು ಜೆಡಿಎಸ್‌ ಬಿಟ್ಟಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಶಕ್ತಿ ತೋರಿಸುತ್ತೇವೆ. ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಚುನಾವಣೆಗಳಲ್ಲಿ ಟಿಕೆಟ್‌ ಕೊಡುತ್ತೇವೆ’ ಎಂದು ಹೇಳಿದರು.

ಕಾಂಗ್ರೆಸ್‌ ಋಣ ತೀರಿಸಿದ್ದಾರೆ: ‘ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಮಾಲೂರು, ಕೆಜಿಎಫ್ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿಯ ಮುನಿಸ್ವಾಮಿ ಅವರಿಗೆ ಸಹಾಯ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಸಂಸದರು ಚುನಾವಣೆಯಲ್ಲಿ ಋಣ ತೀರಿಸಿ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿದ್ದಾರೆ’ ಎಂದು ದೂರಿದರು.

‘ಪರಿಷತ್‌ ಚುನಾವಣೆಯಲ್ಲಿ ಯಾವ ಪಕ್ಷಗಳು ಏನೇನು ಮಾಡಿವೆ ಎಂಬುದು ಗೊತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂಡ ಮಾಡಿಕೊಂಡು ಚುನಾವಣೆ ಎದುರಿಸಿವೆ. ಸಂಸದ ಮುನಿಸ್ವಾಮಿ ಹಾಗೂ ಶಾಸಕ ರಮೇಶ್‌ಕುಮಾರ್‌ ಹೊಸಕೋಟೆ ಬಳಿ ಒಂದೇ ಕಾರು ಹತ್ತಿ ಚನ್ನಸಂದ್ರದವರೆಗೆ ಒಟ್ಟಿಗೆ ಹೋಗುತ್ತಾರೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಕುಟುಕಿದರು.

‘ಸಂಸದರು ಮತ್ತು ರಮೇಶ್‌ಕುಮಾರ್‌ ಏನೇನೋ ಚರ್ಚಿಸಿ ವೇಣುಗೋಪಾಲ್‌ರನ್ನು ಬಲಿಪಶು ಮಾಡಿ ಕೊನೆಗೆ ವಿಷ ಕುಡಿಯುವ ಸ್ಥಿತಿಗೆ ತಂದಿದ್ದಾರೆ. ಪರಿಷತ್‌ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಸೋತಿದ್ದಾರೆ. ಸೋಲು ಗೆಲುವು ಸಾಮಾನ್ಯ. ಪಕ್ಷ ಈಗಲೂ ಬಲಿಷ್ಠವಾಗಿದ್ದು, ಧೃತಿಗೆಡಲ್ಲ’ ಎಂದು ಹೇಳಿದರು.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ, ಪಕ್ಷದ ಮುಖಂಡರಾದ ರಾಮೇಗೌಡ, ವಕ್ಕಲೇರಿ ರಾಮು, ಮಲ್ಲೇಶ್‌ಬಾಬು, ಕೆ.ಎಸ್.ನಂಜುಂಡಪ್ಪ, ಸಿಎಂಆರ್ ಶ್ರೀನಾಥ್, ಗೋಪಾಲಗೌಡ, ನಟರಾಜ್, ಶಬರೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT