ಶನಿವಾರ, ಜನವರಿ 25, 2020
28 °C
ತಾಲ್ಲೂಕು ಕಚೇರಿಗೆ ಶಾಸಕ ಶ್ರೀನಿವಾಸಗೌಡ ದಿಢೀರ್‌ ಭೇಟಿ

ಅಧಿಕಾರಿಗಳು– ಸಿಬ್ಬಂದಿಗೆ ಶಾಕ ಶ್ರೀನಿವಾಸಗೌಡ ತೀವ್ರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಇಲ್ಲಿನ ತಾಲ್ಲೂಕು ಕಚೇರಿಗೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ ಶಾಸಕ ಕೆ.ಶ್ರೀನಿವಾಸಗೌಡ ಕಚೇರಿಯಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವಿನಾಕಾರಣ ಕಚೇರಿಗೆ ಅಲೆಸುತ್ತಾರೆ’ ಎಂದು ಸಾರ್ವಜನಿಕರು ಶಾಸಕರ ಎದುರು ಅಳಲು ತೋಡಿಕೊಂಡದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸಗೌಡ, ‘ಈ ಹಿಂದೆ ನಾನು ಭೇಟಿ ನೀಡಿದ್ದಾಗ ವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದೆ. ಆದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಳೆ ಚಾಳಿ ಮುಂದುವರಿಸಿದ್ದೀರಿ. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಹೇಳಿ ಬೇರೆಡೆಗೆ ವರ್ಗಾವಣೆ ಮಾಡಿಸುತ್ತೇನೆ. ಜನರಿಗೆ ಯಾಕೆ ತೊಂದರೆ ಕೊಡುತ್ತೀರಿ?’ ಎಂದು ಕಿಡಿಕಾರಿದರು.

‘ಇನ್ನು ಮುಂದೆ ಪ್ರತಿ ಮಂಗಳವಾರ ತಾಲ್ಲೂಕು ಕಚೇರಿಗೆ ಭೇಟಿ ಕೊಟ್ಟು ಸಾರ್ವಜನಿಕರ ಸಮಸ್ಯೆ ಆಲಿಸುತ್ತೇನೆ. ಏನೇ ಸಮಸ್ಯೆಯಿದ್ದರೂ ಅಧಿಕಾರಿಗಳು ಸ್ಥಳದಲ್ಲೇ ಅರ್ಜಿ ಪರಿಶೀಲಿಸಿ ಬಗೆಹರಿಸಬೇಕು. ಗೊಂದಲ ಇದ್ದರೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸಬೇಕು’ ಎಂದು ಸೂಚಿಸಿದರು.

‘ಜನರು ಮುಖ್ಯವಾಗಿ ಭೂಮಿಗೆ ಸಂಬಂಧಪಟ್ಟ ದಾಖಲೆಪತ್ರ, ಆದಾಯ ಮತ್ತು ಜಾತಿ ಪ್ರಮಾಣಪತ್ರ ತೆಗೆದುಕೊಳ್ಳಲು ತಾಲ್ಲೂಕು ಕಚೇರಿಗೆ ಬರುತ್ತಾರೆ. ಅಧಿಕಾರಿಗಳು ಸಕಾಲಕ್ಕೆ ಅರ್ಜಿ ವಿಲೇವಾರಿ ಮಾಡದಿದ್ದಾಗ ಕಚೇರಿಗೆ ದಲ್ಲಾಳಿಗಳು ಪ್ರವೇಶ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಬೇಡಿ’ ಎಂದು ತಾಕೀತು ಮಾಡಿದರು.

‘ತಾಲ್ಲೂಕಿನ ಕಾಮಾಂಡಹಳ್ಳಿ ಸಮೀಪದ ಸರ್ಕಾರಿ ಗೋಮಾಳದ ಜಾಗಕ್ಕೆ ನಕಲಿ ದಾಖಲೆಪತ್ರ ಸೃಷ್ಟಿಸಲಾಗಿದೆ. ಆ ದಾಖಲೆಪತ್ರ ತಾಲ್ಲೂಕು ಕಚೇರಿಯಲ್ಲೇ ಸಿದ್ಧವಾಗಿದೆ. ಈ ಸಂಬಂಧ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ. ಜತೆಗೆ ಗೋಮಾಳದ ಮೂಲ ದಾಖಲೆ ನೀಡಬೇಕು’ ಎಂದು ತಹಶೀಲ್ದಾರ್‌ಗೆ ಆದೇಶಿಸಿದರು.

ಸಹಿಸುವುದಿಲ್ಲ: ‘ಪಹಣಿ ತಿದ್ದುಪಡಿ ಮತ್ತು ಪಿ ನಂಬರ್ ಸಮಸ್ಯೆ ಹಲವು ತಿಂಗಳಿಂದ ಮುಂದುವರಿದಿದೆ. ಅರ್ಜಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಏನು ಸಮಸ್ಯೆ? ಜನ ಸೇವೆ ಮಾಡಲು ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಅದು ಬಿಟ್ಟು ಸಬೂಬು ಹೇಳಿ ಕೆಲಸ ಮಾಡಿದಿದ್ದರೆ ಸಹಿಸುವುದಿಲ್ಲ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ತಾಲ್ಲೂಕಿನ ಪ್ರತಿ ಹೋಬಳಿ ಕೇಂದ್ರದಲ್ಲಿ ಸಾರ್ವಜನಿಕರ ಕುಂದು ಕೊರತೆ ಸಭೆ, ಕಂದಾಯ ಅದಾಲತ್ ನಡೆಸಲಾಗುತ್ತದೆ. ಜನ ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)