ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿಯಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು

ಸೋತರೂ ಜ್ಞಾನೋದಯವಾಗಿಲ್ಲ: ಶಾಸಕ ಶ್ರೀನಿವಾಸಗೌಡ ತೀವ್ರ ವಾಗ್ದಾಳಿ
Last Updated 12 ಜುಲೈ 2021, 14:44 IST
ಅಕ್ಷರ ಗಾತ್ರ

ಕೋಲಾರ: ‘ಸತತ 7 ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಸಾಧನೆ ಶೂನ್ಯ. ಕೆ.ಸಿ ವ್ಯಾಲಿ ಯೋಜನೆಗೂ ಅವರಿಗೂ ಸಂಬಂಧವೇ ಇಲ್ಲ. ಆದರೂ ಕೆ.ಸಿ ವ್ಯಾಲಿ ಯೋಜನೆಗೆ ತಾನೇ ಕಾರಣ ಎಂದು ಹೇಳಿಕೊಳ್ಳುತ್ತಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಾಗ್ದಾಳಿ ನಡೆಸಿದರು.

ಇಲ್ಲಿ ಸೋಮವಾರ ಬಡ ರೋಗಿಗಳ ಚಿಕಿತ್ಸೆಗೆ ಇಫ್ಕೋ ಕಿಸಾನ್‌ ಸೇವಾ ಟ್ರಸ್ಟ್ ವತಿಯಿಂದ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಜಿಲ್ಲೆಯ ಜನರು ಮುನಿಯಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಸೋತರೂ ಅವರಿಗೆ ಜ್ಞಾನೋದಯವಾಗಿಲ್ಲ’ ಎಂದು ವ್ಯಂಗ್ಯವಾಡಿದರು.

‘ಶಾಸಕರಾದ ರಮೇಶ್‌ಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಶ್ರಮದ ಫಲವಾಗಿ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಂಡಿದೆ. ಮುನಿಯಪ್ಪರ ವಿಚಾರ ಮಾತನಾಡಿ ಅವರನ್ನು ದೊಡ್ಡವರನ್ನಾಗಿ ಮಾಡುವುದು ಬೇಡ. ಮುನಿಯಪ್ಪ ಏನೇ ಮಾತನಾಡಿದರೂ ಅವರ ಮಾತು ಯಾರು ಕೇಳುತ್ತಾರೆ’ ಎಂದು ಕುಟುಕಿದರು.

‘ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಕ್ಷೇತ್ರದಲ್ಲಿ ಈ ಹಿಂದೆ 10 ವರ್ಷ ಶಾಸಕರಾಗಿ ಅಧಿಕಾರ ಅನುಭವಿಸಿದ ಮಹಾಶಾಯ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ರನ್ನು ಟೀಕಿಸಿದರು.

‘ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯ ತೀರ್ಮಾನದಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಕಳೆದ ಬಾರಿ ತಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಪಡೆದಿತ್ತು. ಆದರೆ, ಪಕ್ಷದ ಒಬ್ಬ ಸದಸ್ಯ ಸಗಣಿ ತಿನ್ನಲಿಕ್ಕೆ ಹೋಗಿದ್ದರಿಂದ ಪಕ್ಷಕ್ಕೆ ಅಧಿಕಾರ ಕೈತಪ್ಪಿತು. ಈ ಬಾರಿ ಜಿ.ಪಂನಲ್ಲಿ ಪಕ್ಷ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿಹಾರ ಘೋಷಿಸಿ: ‘ಟೊಮೆಟೊ ಬೆಲೆ ಕುಸಿದು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮೆಟೊ ಬೆಳೆಗಾರರು ಕೋವಿಡ್‌ ಹಾಗೂ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಟೊಮೆಟೊ ವಹಿವಾಟಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಟೊಮೆಟೊ ಬೆಳೆ ಎಕರೆಗೆ ₹ 50 ಸಾವಿರ ಪರಿಹಾರ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಎಕರೆ ಟೊಮೆಟೊ ಬೆಳೆಗೆ ಘೋಷಿಸಿರುವ ₹ 10 ಸಾವಿರ ಏನೇನೂ ಸಾಲದು. ಒಂದು ಎಕರೆ ಟೊಮೆಟೊ ಬೆಳೆಗೆ ಸುಮಾರು ₹ 2 ಲಕ್ಷ ಖರ್ಚಾಗುತ್ತದೆ.  ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಹಾಗೂ ಇತರೆ ಕೃಷಿ ಉಪಕರಣಗಳಿಗೆ ಕಂಪನಿಗಳು ನಿಗದಿಪಡಿಸಿದ ಬೆಲೆಗೆ ರೈತರು ಖರೀದಿ ಮಾಡಬೇಕು. ಆದರೆ, ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿ ಇರುವುದಿಲ್ಲ. ಇದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದರು.

‘ರೈತರು ಟೊಮೆಟೊ ಬೆಳೆಗೆ ಖರ್ಚು ಮಾಡಿದ ಬಂಡವಾಳವಾದರೂ ಸಿಗಬೇಕೆಂಬ ದೃಷ್ಟಿಯಿಂದ ಎಕರೆಗೆ ಕನಿಷ್ಠ ₹ 50 ಸಾವಿರ ಪರಿಹಾರ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ. ಸರ್ಕಾರವೇ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸಬೇಕು. ಜಿಲ್ಲೆಯಲ್ಲಿ ಮಾವು ಬೆಳೆಗಾರರ ಪರಿಸ್ಥಿತಿಯೂ ಟೊಮೆಟೊ ಬೆಳಗಾರರಂತೆಯೇ ಆಗಿದ್ದು, ಮಾವಿಗೂ ಬೆಂಬಲ ಬೆಲೆ ಘೋಷಿಸಬೇಕು’ ಎಂದು ಕೋರಿದರು.

ಅಡೆತಡೆ ನಿವಾರಣೆ: ‘ಜಿಲ್ಲಾ ಕೇಂದ್ರದ ಮುಖ್ಯರಸ್ತೆಗಳ ಕಾಮಗಾರಿ ಮುಗಿದಿದೆ. ಶ್ರೀನಿವಾಸಪುರ ವೃತ್ತದಿಂದ ಬಂಗಾರಪೇಟೆ ರಸ್ತೆಯ ಅಂಬೇಡ್ಕರ್ ವೃತ್ತದವರೆಗೆ ಹಾಗೂ ಶಾರದಾ ಚಿತ್ರಮಂದಿರ ವೃತ್ತದವರೆಗಿನ ರಸ್ತೆ ಅಭಿವೃದ್ಧಿಗೆ ಕೆಲ ವ್ಯಾಪಾರಿಗಳು ತಡೆಯೊಡ್ಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ವ್ಯಾಪಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಅಡೆತಡೆ ನಿವಾರಿಸುತ್ತೇವೆ’ ಎಂದು ಭರವಸೆ ನೀಡಿದರು.

ಸರ್ಕಾರಿ ಮಹಿಳಾ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಟಪ್ಪ ಹಾಗೂ ಜೆಡಿಎಸ್‌ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT