ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು | ಮೃತ ಅನಿಲ್ ಕುಮಾರ್ ಮನೆಗೆ ಶಾಸಕ ಭೇಟಿ

Published 31 ಅಕ್ಟೋಬರ್ 2023, 16:48 IST
Last Updated 31 ಅಕ್ಟೋಬರ್ 2023, 16:48 IST
ಅಕ್ಷರ ಗಾತ್ರ

ಮಾಲೂರು:  ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಅವರು ಹತ್ಯೆಯಾಗಿರುವುದು ದುರಾದೃಷ್ಟಕರ ಸಂಗತಿ ಎಂದು ಶಾಸಕ ಕೆ.ವೈ.ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರು ತಮ್ಮ ಪ್ರವಾಸ ಮುಗಿಸಿ ಮಂಗಳವಾರ ಬರುತ್ತಿದ್ದಂತೆ ನೇರವಾಗಿ ಮಿಣಸಂದ್ರ ಗ್ರಾಮದ ಮೃತ ಅನಿಲ್‌ಕುಮಾರ್‌ ಮನೆಗೆ ತೆರಳಿ ಮೃತರ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇತ್ತೀಚೆಗೆ ತಾಲ್ಲೂಕಿನ ಜಯಮಂಗಲ ಗ್ರಾ.ಪಂ. ಕಾಂಗ್ರೆಸ್ ಬೆಂಬಲಿತ ಸದಸ್ಯ ಅನಿಲ್ ಕುಮಾರ್ ದುಷ್ಕರ್ಮಿಗಳಿಂದ ಹಾಡು ಹಗಲೇ ಕೊಲೆಯಾಗಿದ್ದರು. 

ಈ ವೇಳೆ ಗ್ರಾಮಸ್ಥರು ಹಾಗೂ ಮೃತರ ಸಂಬಂಧಿಗಳು ಪರಾರಿಯಾಗಿರುವ ಕೊಲೆಯ ಮುಖ್ಯ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. 

ಮೃತ ಅನಿಲ್ ಕುಮಾರ್ ಪತ್ನಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸಲಾಗುವುದು. ಇವರ ನಾಲ್ಕು ವರ್ಷದ ಮಗಳ ಮದುವೆ ವೇಳೆಗೆ ₹10 ಲಕ್ಷ ಹಣ ಬರುವಂತೆ ವಿಮೆ ಮಾಡಿಸಲಾಗುವುದು
ಕೆ.ವೈ.ನಂಜೇಗೌಡ, ಶಾಸಕ 

ಈ ವೇಳೆ ಮಾತನಾಡಿದ ಶಾಸಕ ಕೆ.ವೈ.ನಂಜೇಗೌಡ ಅವರು, ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಪಡಿಸುವ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಕೊಲೆ ಮಾಡುವ ಹಂತಕ್ಕೆ ತಲುಪಿರುವುದು ಖಂಡನೀಯ. ಮೃತ ಅನಿಲ್ ಕುಮಾರ್ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿ ವಿಚಾರವಾಗಿ ನನ್ನ ಬಳಿ ಮಾತನಾಡುತ್ತಿದ್ದರು. ಇಂತಹ ವ್ಯಕ್ತಿ ಕೊಲೆ ಬೇಸರದ ಸಂಗತಿ ಎಂದರು.

ಕೊಲೆಯಾದ ದಿನ ನಾನು ಇರಲಿಲ್ಲ. ಹೊರ ದೇಶಕ್ಕೆ ಪ್ರವಾಸ ತೆರಳಿದ್ದೆ. ಅನಿಲ್ ಕೊಲೆ ವಿಚಾರ ತಿಳಿದ ತಕ್ಷಣ ವಾಪಸ್ ಬರಲು ಪ್ರಯತ್ನಿಸಿದೆ ಆದರೆ ಆಗಲಿಲ್ಲ. ಹಾಗಾಗಿ ಪ್ರವಾಸದಿಂದ ನೇರವಾಗಿ ಮೃತರ ಮನೆಗೆ ಬಂದಿದ್ದೇವೆ. ಗೃಹ ಮಂತ್ರಿಗಳ ಬಳಿ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪೊಲೀಸರು ಈಗಾಗಲೇ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮುಖ್ಯ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ತಹಶೀಲ್ದಾರ್ ರಮೇಶ್ , ರತ್ನಮ್ಮ ನಂಜೇಗೌಡ, ಸಿ.ಲಕ್ಷ್ಮಿನಾರಾಯಣ್, ಮಧುಸೂದನ್, ವಿಜಯನಾರಸಿಂಹ, ಹನುಮಂತಪ್ಪ, ಕ್ಷೇತ್ರನಹಳ್ಳಿ ವೆಂಕಟೇಶಗೌಡ, ಹನುಮಂತರೆಡ್ಡಿ, ಸುನೀಲ್ ನಂಜೇಗೌಡ, ಸಂಪೆಂಗೆರೆ ಮುನಿರಾಜು, ಬಾಳಿಗಾನಹಳ್ಳಿ ಶ್ರೀನಿವಾಸ್, ಹರೀಶ್, ವಸಂತ್, ನಾರಾಯಣಸ್ವಾಮಿ ಸೇರಿದಂತೆ ಮಿಣಸಂದ್ರ ಗ್ರಾಮಸ್ಥರು ಇದ್ದರು.

ಗ್ರಾಮಸ್ಥರ ಒತ್ತಾಯ

ಕೊಲೆಗಾರರಿಗೆ ಶಿಕ್ಷೆ ಆಗಬೇಕು. ಮುಖ್ಯ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಗ್ರಾಮದ ರಸ್ತೆ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಅನಿಲ್ ಕುಮಾರ್ ಕೊಲೆ ನಡೆದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT