ಮಂಗಳವಾರ, ಜನವರಿ 18, 2022
23 °C
ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಏಕೆ ಸುಮ್ಮನಿದ್ದಾರೆ? ಸುದರ್ಶನ್ ಪ್ರಶ್ನೆ

ಟಿಕೆಟ್‌ ನಿರಾಕರಣೆಯಿಂದ ಸ್ವಾಭಿಮಾನಕ್ಕೆ ಧಕ್ಕೆ: ಕಾಂಗ್ರೆಸ್‌ ನಾಯಕ ಸುದರ್ಶನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ವಿಧಾನ ಪರಿಷತ್ ಚುನಾವಣೆಗೆ ನನಗೆ ಟಿಕೆಟ್ ನಿರಾಕರಿಸಿದ ಪಕ್ಷದ ನಿರ್ಧಾರದಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಿಂದುಳಿದ ವರ್ಗಗಳ ಧ್ವನಿಯಾಗಬೇಕಾಗಿದ್ದ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಏಕೆ ಮೌನ ವಹಿಸಿದ್ದಾರೆ ಎಂಬ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾದ ನಂತರ ಅವರ ಜತೆಗೂಡಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಒಂದು ತಂಡವಾಗಿ ರಾಜ್ಯದೆಲ್ಲೆಡೆ ಕಾರ್ಯಕ್ರಮ ರೂಪಿಸಲು ಹಗಲಿರುಳು ಶ್ರಮಿಸಿದ್ದೇನೆ. ಆದರೂ ಅವರು ಕೊನೆ ಹಂತದಲ್ಲಿ ಟಿಕೆಟ್ ನೀಡುವ ಕುರಿತು ಮೌನ ವಹಿಸಿದ್ದು ಬೇಸರ ತರಿಸಿದೆ’ ಎಂದರು.

‘ಗ್ರಾ.ಪಂ ಸದಸ್ಯನಾಗಿ, ಎಂಪಿಸಿಎಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ವಿಕೇಂದ್ರೀಕರಣ ವ್ಯವಸ್ಥೆ ಕೇಂದ್ರೀಕರಣದತ್ತ ಸಾಗುತ್ತಿರುವುದು ವಿಷಾದಕರ. ಗ್ರಾ.ಪಂಗಳ ಮಹತ್ವ ಮತ್ತೆ ತಂದುಕೊಡುವ ಹಾದಿಯಲ್ಲಿ ಸದನದಲ್ಲಿ ಧ್ವನಿಯಾಗುವ ಉದ್ದೇಶದಿಂದ ಟಿಕೆಟ್ ಬಯಸಿದ್ದೆ. ಸಾಮಾಜಿಕ ನ್ಯಾಯಕ್ಕಾಗಿ ನಾನು ಈ ಬಾರಿ ಪರಿಷತ್‌ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದೆ’ ಎಂದು ಹೇಳಿದರು.

‘ಅವಿಭಜಿತ ಕೋಲಾರ ಜಿಲ್ಲೆಯ 11 ಕ್ಷೇತ್ರಗಳಲ್ಲಿ 3 ಮಂದಿ ಪರಿಶಿಷ್ಟ ಸಮುದಾಯದ ಶಾಸಕರಿದ್ದಾರೆ. ಉಳಿದ 8 ಶಾಸಕರಲ್ಲಿ ಮತ್ತು 4 ಮಂದಿ ವಿಧಾನ ಪರಿಷತ್‌ ಸದಸ್ಯರಲ್ಲಿ ಕನಿಷ್ಢ ಒಬ್ಬ ಹಿಂದುಳಿದ ವರ್ಗದ ಪ್ರತಿನಿಧಿ ಇಲ್ಲ. ಈ ಬಗ್ಗೆ ಪಕ್ಷದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಏಕೆ ಗಮನ ಹರಿಸಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

ವ್ಯವಸ್ಥೆ ಕಲುಷಿತ: ’ಹಿಂದೆ ಶಾಸಕನಾಗಿದ್ದಾಗಲೂ ಮತ್ತು ಶಾಸಕನಲ್ಲದಿದ್ದರೂ 10 ವರ್ಷಗಳಿಂದ ಪಕ್ಷ ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯಲ್ಲಿ ವ್ಯಕ್ತಿಗತ ಪ್ರತಿಷ್ಠೆ, ಅಸೂಯೆಯ ರಾಜಕಾರಣದಿಂದ ವ್ಯವಸ್ಥೆ ಕಲುಷಿತಗೊಂಡಿದೆ. ನಾಯಕತ್ವದಲ್ಲಿನ ಬೀದಿ ಕಾಳಗದಿಂದ ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.

‘ಸ್ನೇಹಿತರು, ಮತದಾರರ ಒತ್ತಾಯದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ಸ್ಪರ್ಧಿಸಲು ನಿರ್ಧರಿಸಿದ್ದೆ. ಜಾತಿ, ಹಣದ ಪ್ರಭಾವ ಮೀರಿ ನನ್ನ ಹಿರಿತನ, ಅನುಭವ, ಸಂಘಟನಾ ಸೇವೆ ಗಮನಿಸುವ ಜವಾಬ್ದಾರಿ ಪಕ್ಷದ ಮುಖಂಡರಿಗಿತ್ತು. ಆದರೆ, ಆ ರೀತಿ ಆಗಲಿಲ್ಲ. ಅನಿಲ್‍ಕುಮಾರ್ ಹಿಂದೆಯೂ ಗೊಂದಲದಿಂದ ಸೋತಿದ್ದಾರೆ. ಮತ್ತೆ ಆ ರೀತಿ ಆಗಬಾರದು, ಜಿಲ್ಲೆಯಲ್ಲಿ ಪಕ್ಷದ ಗೊಂದಲ ನಿವಾರಣೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸುರ್ಜೇವಾಲ ಗಮನ ಹರಿಸಬೇಕು’ ಎಂದರು.

ವಕೀಲ ಸೋಮಶೇಖರ್, ಮೈಸೂರು ಮಿನರಲ್ಸ್ ಮಾಜಿ ನಿರ್ದೇಶಕ ಆರ್.ಕಿಶೋರ್‌ಕುಮಾರ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು