ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ₹ 6.39 ಕೋಟಿ ಮೌಲ್ಯದ ಮೊಬೈಲ್‌ಗಳ ದರೋಡೆ

Last Updated 6 ಆಗಸ್ಟ್ 2021, 14:12 IST
ಅಕ್ಷರ ಗಾತ್ರ

ಕೋಲಾರ: ತಮಿಳುನಾಡಿನಿಂದ ಗುರುವಾರ ರಾತ್ರಿ ಜಿಲ್ಲೆಯ ಮಾರ್ಗವಾಗಿ ಬೆಂಗಳೂರಿಗೆ ಮೊಬೈಲ್‌ ಸಾಗಿಸುತ್ತಿದ್ದ ಕಂಟೈನರ್‌ ಅಡ್ಡಗಟ್ಟಿದ ದರೋಡೆಕೋರರು ₹ 6.39 ಕೋಟಿ ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಬೆಂಗಳೂರಿನ ಶ್ರೀಜಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿಗೆ ಸೇರಿದ ಕಂಟೈನರ್‌ನಲ್ಲಿ ತಮಿಳುನಾಡಿನ ಚೆನ್ನೈನಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಎಂ.ಐ ಕಂಪನಿ ಮೊಬೈಲ್‌ಗಳನ್ನು ಸಾಗಿಸಲಾಗುತ್ತಿತ್ತು. ಕಾರಿನಲ್ಲಿ ಹಿಂಬಾಲಿಸಿ ಬಂದ 6 ದರೋಡೆಕೋರರು ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಬಳಿ ಕಂಟೈನರ್‌ ಅಡ್ಡಗಟ್ಟಿ ಚಾಲಕ ಸುರೇಶ್‌ ಜತೆ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆಕೋರರು ಸುರೇಶ್‌ ಮೇಲೆ ಹಲ್ಲೆ ನಡೆಸಿ ಸಮೀಪದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಬಾಯಿಗೆ ಬಟ್ಟೆ ತುರುಕಿ, ಕೈ ಕಾಲುಗಳನ್ನು ಕಟ್ಟಿದ್ದಾರೆ. ಬಳಿಕ ಕಂಟೈನರ್‌ನಲ್ಲಿದ್ದ ಮೊಬೈಲ್‌ಗಳನ್ನು ಸಂಪೂರ್ಣವಾಗಿ ಮತ್ತೊಂದು ಲಾರಿಗೆ ತುಂಬಿಸಿಕೊಂಡಿದ್ದಾರೆ. ನಂತರ ಖಾಲಿ ಕಂಟೈನರ್ ಅನ್ನು ಕೋಲಾರ ತಾಲ್ಲೂಕಿನ ನೆರ್ನಹಳ್ಳಿ ಬಳಿ ನಿಲ್ಲಿಸಿ ಮೊಬೈಲ್‌ ಸರಕಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿದ್ದ ಸುರೇಶ್‌ರನ್ನು ನೋಡಿದ ದಾರಿಹೋಕರು ಬಳಿ ಹೋಗಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸುರೇಶ್‌ ಮುಳಬಾಗಿಲು ಗ್ರಾಮಾಂತರ ಠಾಣೆಗೆ ತೆರಳಿ ದರೋಡೆ ಪ್ರಕರಣ ದಾಖಲಿಸಿದ್ದಾರೆ. ಚೆನ್ನೈನಲ್ಲಿರುವ ಎಂ.ಐ ಕಂಪನಿಯ ಮೊಬೈಲ್‌ ಉತ್ಪಾದನಾ ಘಟಕದಿಂದ ಹೊಸಕೋಟೆ ಬಳಿಯ ಕಂಪನಿ ಗೋದಾಮಿಗೆ ಮೊಬೈಲ್‌ ಸಾಗಿಸಲಾಗುತ್ತಿತ್ತು.

ವಿಶೇಷ ತಂಡ: ‘ಇದೊಂದು ಪೂರ್ವಯೋಜಿತ ಕೃತ್ಯವೆಂದು ತನಿಖೆಯಿಂದ ಗೊತ್ತಾಗಿದೆ. ಚಾಲಕ ಸುರೇಶ್‌ ಮೂತ್ರ ವಿಸರ್ಜನೆಗಾಗಿ ಜಿಲ್ಲೆಯ ನಂಗಲಿ ಟೋಲ್‌ ಬಳಿ ರಾತ್ರಿ ವಾಹನ ನಿಲ್ಲಿಸಿದ್ದರು. ದರೋಡೆಕೋರರು ಅಲ್ಲಿಂದ ಹಿಂಬಾಲಿಸಿ ಬಂದು ಕೃತ್ಯ ಎಸಗಿರುವ ಶಂಕೆಯಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಆರೋಪಿಗಳ ಪತ್ತೆಗೆ ಮುಳಬಾಗಿಲು ಡಿವೈಎಸ್ಪಿ ನೇತೃತ್ವದಲ್ಲಿ 2 ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT