ಶುಕ್ರವಾರ, ಜನವರಿ 17, 2020
23 °C
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಕೋಲಾರ ಜಿಲ್ಲೆಯಲ್ಲಿ ಚಳವಳಿ ಬೇರು ಜೀವಂತ: ಸಮ್ಮೇಳನಾಧ್ಯಕ್ಷ ಗೋವಿಂದರೆಡ್ಡಿ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಕ್ಕಳ ಸಾಹಿತಿ ಸಿ.ಎಂ.ಗೋವಿಂದರೆಡ್ಡಿ ಅವರು ಜಿಲ್ಲೆಯ ಮಾಲೂರು ತಾಲ್ಲೂಕಿನ ಚೆನ್ನಿಗರಾಯಪುರ ಗ್ರಾಮದವರು.

ಹಿಂದುಳಿದ ರೈತ ಕುಟುಂಬದಲ್ಲಿ ಜನಿಸಿದ ಇವರು ಮಾಲೂರು ತಾಲ್ಲೂಕಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪೂರೈಸಿದರು. ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದರು. ‘ಕೋಲಾರ ಜಿಲ್ಲೆಯ ಜಾತ್ರೆಗಳು: ಒಂದು ಅಧ್ಯಯನ’ ಕುರಿತ ಇವರ ಸಂಶೋಧನಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಾಗಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಮಕ್ಕಳ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಕನ್ನಡದ ದನಿಯಾಗಿ ಕೆಲಸ ಮಾಡಿದ್ದಾರೆ. ಮಕ್ಕಳಿಗಾಗಿ ಹಲವು ಕವನಸಂಕಲನ ಪ್ರಕಟಿಸಿದ್ದಾರೆ. ಕನ್ನಡದ ಪ್ರಪ್ರಥಮ ಮಕ್ಕಳ ಮಹಾಕಾವ್ಯ ‘ಮತ್ತೊಂದು ಮಹಾಭಾರತ’ವನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಅಲ್ಲದೇ, ಹನಿಗವನ, ಮಕ್ಕಳ ನಾಟಕ, ಮಹಾಕಾವ್ಯ ಹಾಗೂ ನೀಳ್ಗವಿತೆ ಬರೆದಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಕ್ಕಳ ಸಾಹಿತ್ಯ ಪುಸ್ತಕ ಬಹುಮಾನ, ‘ಪ್ರಜಾವಾಣಿ’ಯ ದೀಪಾವಳಿ ಶಿಶು ಕಾವ್ಯ ಸ್ಪರ್ಧೆ ಬಹುಮಾನ, ಸಿಸು ಸಂಗಮೇಶ ದತ್ತಿ ಬಹುಮಾನ, ವಸುದೇವ ಭೂಪಾಲಂ ದತ್ತಿ ಪುರಸ್ಕಾರ, ಪೆರ್ಲ ಕಾವ್ಯ ಪ್ರಶಸ್ತಿ, ನಾ.ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ, ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಹರ್ಡೇಕರ್‌ ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಸೊಗಸು ಬಹುಮಾನ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಗೌರವಕ್ಕೆ ಭಾಜನರಾಗಿದ್ದಾರೆ.

ಬಹುಮುಖಿ ಚಿಂತನೆಯ ಗೋವಿಂದರೆಡ್ಡಿ ಅವರು ಕನ್ನಡ ನೆಲ, ಜಲ, ಭಾಷೆ, ಹೋರಾಟ, ಸಾಹಿತ್ಯ ಕೃಷಿ, ಜನರ ಬದುಕು ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ಧ ಭಾಗ ಕೆಳಗಿನಂತಿದೆ.

ಪ್ರಶ್ನೆ: ಸಮಕಾಲೀನ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅಭಿಪ್ರಾಯ?

ಗೋವಿಂದರೆಡ್ಡಿ: ಸಾಹಿತಿಗಳಲ್ಲಿ ಎರಡು ಗುಂಪಾಗಿದೆ. ಗುಂಪುಗಾರಿಕೆ ಹಿಂದೆಯೇ ಪಕ್ಷ, ರಾಜಕೀಯ ಬರುತ್ತದೆ. ಸಾಹಿತಿಗಳು ಗುಂಪುಗಾರಿಕೆ ಬಿಟ್ಟು ಸಾಹಿತ್ಯ ಮತ್ತು ಜನರ ಪರವಾಗಿ ನಿಲ್ಲಬೇಕು. ಸಾಹಿತಿಗಳು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಇರಬೇಕು. ಅವರ ವಿಚಾರಗಳು ಸಮಾಜಕ್ಕೆ ಹಿತವಾಗಿರಬೇಕು. ಲೋಕದ ದೃಷ್ಟಿಯಿಂದ ಪ್ರಯೋಜನವಾಗುವ ವಿಚಾರಪರ ಸಾಹಿತ್ಯ ರಚನೆ ಒಳ್ಳೆಯದು.

ಜಿಲ್ಲೆಯ ನೀರಾವರಿ ಹೋರಾಟ ಸಾಗಬೇಕಾದ ದಿಕ್ಕು ಮತ್ತು ನೀರಿನ ಸಮಸ್ಯೆಗೆ ಪರಿಹಾರವೇನು?

ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು. ಉತ್ತರ ಕರ್ನಾಟಕದ ಜೀವನದಿಗಳಿಂದ ಜಿಲ್ಲೆಗೆ ನೀರು ಹರಿಸಬೇಕು. ಎತ್ತಿನಹೊಳೆ, ಯರಗೋಳ್‌ ಯೋಜನೆಗಳು ಅಡ್ಡದಾರಿ ಹಿಡಿದಿವೆ. ಕೆ.ಸಿ ವ್ಯಾಲಿ ಯೋಜನೆ ಶಾಶ್ವತ ಪರಿಹಾರವಲ್ಲ. ಕೆ.ಸಿ ವ್ಯಾಲಿ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಆಗುವುದಿಲ್ಲ. ಕೊಳಚೆ ನೀರಾಗಿರುವುದರಿಂದ ಸಂಸ್ಕರಿಸಿದರೂ ರಾಸಾಯನಿಕಗಳು ಹಾಗೆಯೇ ಇರುತ್ತವೆ. ಈ ವಿಷಕಾರಿ ನೀರು ಅಂತರ್ಜಲ ಸೇರುವ ಅಪಾಯವಿದೆ. ನೀರಾವರಿ ಹೋರಾಟ ಜನಾಂದೋಲನವಾಗಬೇಕು.

ದೇಶದಲ್ಲಿ ಬಹು ಚರ್ಚಿತ ವಿಷಯವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ನಿಮ್ಮ ನಿಲುವೇನು?

ಸಿಎಎ ಬಗ್ಗೆ ರಾಜಕೀಯ ದೃಷ್ಟಿಯಿಂದ ಬೇರೆ ಬೇರೆ ಅಭಿಪ್ರಾಯ ಕೇಳಿಬರುತ್ತಿವೆ. ಕಾಯ್ದೆ ಜನಪರವಾಗಿದ್ದರೆ ಒಪ್ಪಿಕೊಳ್ಳಬೇಕು. ದೇಶದ ಹಿತದೃಷ್ಟಿಯಿಂದ ಸಿಎಎ ಒಳ್ಳೆಯದು. ಜನಸಾಮಾನ್ಯರು ಕಾಯ್ದೆ ಸರಿಯಾಗಿ ಅರ್ಥಮಾಡಿಕೊಳ್ಳದೆ ಪರ–ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ಕಾಯ್ದೆ ಅರ್ಥವಾಗದಿರುವುದೇ ಗೊಂದಲಕ್ಕೆ ಪ್ರಮುಖ ಕಾರಣ. ಸರ್ಕಾರ ಗೊಂದಲ ನಿವಾರಿಸಬೇಕು. ಜನರು ಕಾಯ್ದೆಯ ಸತ್ಯಾಸತ್ಯತೆ ತಿಳಿದು ನಿಲುವು ತಳೆಯಬೇಕು.

ಮಕ್ಕಳ ಶಿಕ್ಷಣ ಮಾಧ್ಯಮ ಯಾವುದಿರಬೇಕು?

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲೂ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಹೆಚ್ಚಿನ ಜ್ಞಾನಾರ್ಜನೆಗೆ ಇಂಗ್ಲಿಷ್‌ ಬೇಕು. ಆದರೆ, ಕನ್ನಡ ಅನ್ನದ ಭಾಷೆ. ಹೀಗಾಗಿ ಮಾತೃ ಭಾಷೆ ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಬೇಕು. ವಿಷಯವಾಗಿ ಇಂಗ್ಲಿಷ್‌ ಕಲಿತರೆ ಒಳ್ಳೆಯದು. ರಾಜ್ಯಕ್ಕೆ ವಲಸೆ ಬಂದಿರುವವರೂ ಕನ್ನಡ ಕಲಿಯಬೇಕು.

ತೆಲುಗು ಪ್ರಭಾವ ಹೆಚ್ಚಿರುವ ಕೋಲಾರ ಜಿಲ್ಲೆಯಲ್ಲಿ ಕನ್ನಡ ಭಾಷೆ ಬೆಳವಣಿಗೆ ಮತ್ತು ಉಳಿವಿಗೆ ಸಲಹೆಗಳೇನು?

ಕನ್ನಡ ಭಾಷೆ ಅಳಿಯುವ ಸ್ಥಿತಿಯಲ್ಲಿಲ್ಲ. ತೆಲುಗು, ತಮಿಳು ಭಾಷೆ ಪ್ರಭಾವ ಇರಬಹುದು. ಆದರೆ, ತೆಲುಗು ಹಾಗೂ ತಮಿಳು ಭಾಷಿಕರು ಸಹ ಕನ್ನಡ ಕಲಿಯುತ್ತಿದ್ದಾರೆ. ವಿದ್ಯಾಭ್ಯಾಸ, ಸಂವಹನಕ್ಕೆ ಕನ್ನಡ ಬಳಕೆಯಾಗುತ್ತಿದೆ. ತೆಲುಗು ನನ್ನ ಮಾತೃ ಭಾಷೆ. ಆದರೆ, ನಾನು ಕಲಿತದ್ದು ಮತ್ತು ಕಲಿಸಿದ್ದು ಕನ್ನಡ. ಎಲ್ಲರೂ ಕನ್ನಡ ಪೋಷಿಸಬೇಕು.

ಚಳವಳಿಗಳ ತವರು ಕೋಲಾರ ಜಿಲ್ಲೆಯಲ್ಲಿ ಹೋರಾಟ ಹಾಗೂ ಹೋರಾಟಗಾರರು ನಿಷ್ಕ್ರಿಯವಾಗಿರುವ ಬಗ್ಗೆ ಏನು ಹೇಳುತ್ತೀರಿ?

ಜಿಲ್ಲೆಯಲ್ಲಿ ಹೋರಾಟಗಾರರು ಕ್ರಿಯಾಶೀಲರಾಗಿದ್ದಾರೆ. ಚಳವಳಿಯ ಬೇರು ಜೀವಂತವಾಗಿದೆ. ಹಿಂದೆ ಅನ್ಯಾಯ, ಶೋಷಣೆ ಹೆಚ್ಚಿದ್ದ ಕಾಲದಲ್ಲಿ ಚಳವಳಿ ಕಾವು ತೀವ್ರವಾಗಿತ್ತು. ಈಗ ಸಾಕಷ್ಟು ಸಾಮಾಜಿಕ ಸುಧಾರಣೆಯಾಗಿದೆ. ಜಾತೀಯತೆ, ಶೋಷಣೆ ಕಡಿಮೆಯಾಗಿದೆ. ಹೀಗಾಗಿ ಹೋರಾಟದ ಕಾವು ಸ್ವಲ್ಪ ತಗ್ಗಿದೆ. ಆದರೂ ಅನ್ಯಾಯ, ಶೋಷಣೆ ನಡೆದಾಗ ಹೋರಾಟದ ಕಿಚ್ಚು ಹೊತ್ತುತ್ತದೆ.

ಮಕ್ಕಳಲ್ಲಿ ಓದುವ ಆಸಕ್ತಿ ಕುಂದಿದೆಯೇ?

ಈ ಹಿಂದೆ ಮನರಂಜನೆ ಸಾಧನಗಳು ಕಡಿಮೆಯಿದ್ದವು. ಹೀಗಾಗಿ ಮಕ್ಕಳು ಹೆಚ್ಚು ಪುಸ್ತಕ ಓದುತ್ತಿದ್ದರು. ಟಿ.ವಿ, ಮೊಬೈಲ್‌ ಬಳಕೆಯು ಮಕ್ಕಳ ಓದಿಗೆ ಕೊಡಲಿ ಪೆಟ್ಟು ಕೊಟ್ಟಿದೆ. ಆಡುವಾಗ, ಊಟ ಮಾಡಿಸುವಾಗ ಪೋಷಕರು ಮಕ್ಕಳ ಕೈಗೆ ಮೊಬೈಲ್‌ ಕೊಡುತ್ತಾರೆ. ಮಕ್ಕಳು ಇದನ್ನೇ ಚಟವಾಗಿ ಬೆಳೆಸಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕು. ಎಳೆ ವಯಸ್ಸಿನಲ್ಲೇ ಮಕ್ಕಳನ್ನು ತಿದ್ದಿ ಸಂಸ್ಕಾರವಂತರನ್ನಾಗಿ ಮಾಡಬೇಕು. ಸಾಹಿತ್ಯದ ಓದಿನಿಂದ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು