ಶನಿವಾರ, ಮೇ 21, 2022
23 °C

ಸುಮಲತಾ ರಾಜಕೀಯ ಅನನುಭವಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಂಸದೆ ಸುಮಲತಾ ಅವರಿಗೆ ರಾಜಕೀಯವಾಗಿ ಅನುಭವದ ಕೊರತೆಯಿದೆ. ಅವರು ವೈಯಕ್ತಿಕ ಲಾಭಕ್ಕೆ ಟೀಕಿಸುವುದನ್ನು ಬಿಟ್ಟು ಮೊದಲು ಮಂಡ್ಯ ಜನರ ಋಣ ತೀರಿಸಲಿ’ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಕೊಂಡರಾಜನಹಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಆರ್‌ಎಸ್‌ ಜಲಾಶಯಕ್ಕೆ ಭವ್ಯ ಇತಿಹಾಸವಿದೆ. ರಾಜ ಮಹಾರಾಜರು ಒಡವೆ ಅಡವಿಟ್ಟು ಡ್ಯಾಂ ಕಟ್ಟಿಸಿದ್ದಾರೆ. ಮಾಧ್ಯಮದ ಮುಂದೆ ಪೋಸು ಕೊಡುವ ಉದ್ದೇಶಕ್ಕೆ ಮಂಡ್ಯ ಜನರಲ್ಲಿ ಆತಂಕ ಸೃಷ್ಟಿಸಬೇಡಿ’ ಎಂದು ವ್ಯಂಗ್ಯವಾಡಿದರು.

‘ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದ್ದರೆ ಆ ಬಗ್ಗೆ ತಾಂತ್ರಿಕ ಸಮಿತಿ ಅಥವಾ ಸರ್ಕಾರ ಉತ್ತರ ಕೊಡಲಿ. ಆದರೆ, ಸುಮಲತಾ ಅವರು ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಗೊಂದಲ ಸೃಷ್ಟಿಸುವುದು ಸರಿಯಲ್ಲ. ಜಲಾಶಯದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಎಷ್ಟೇ ಪ್ರಭಾವಿಗಳಾದರೂ ಸರ್ಕಾರ ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು.

‘ಕುಮಾರಸ್ವಾಮಿ ಹಾಗೂ ದೇವೇಗೌಡರು ರಾಜ್ಯದ ಸಂಪತ್ತು ಉಳಿಸುವ ಕೆಲಸ ಮಾಡಿದ್ದಾರೆ ಎಂಬ ಸತ್ಯ ಜನರಿಗೆ ಗೊತ್ತಿದೆ. ಸುಮಲತಾ ಅವರು ಮಾಹಿತಿ ಪಡೆದು ಬೇರೆಯವರ ಬಗ್ಗೆ ಮಾತನಾಡಬೇಕು. ಮಾಧ್ಯಮದಲ್ಲಿ ಫೋಕಸ್ ಆಗಬೇಕೆಂಬ ಉದ್ದೇಶಕ್ಕೆ ಸುಳ್ಳು ಆರೋಪ ಮಾಡಬಾರದು’ ಎಂದು ಕುಟುಕಿದರು.

‘ಸುಮಲತಾ ಅವರು ನನ್ನ ತಮ್ಮ ಪ್ರಜ್ವಲ್‌ ರೇವಣ್ಣರನ್ನು ಹೊಗಳಿ ಪೊಲಿಟಿಕಲ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಅಭಿನಂದನೆ. ನಾನು ಮಂಡ್ಯ ಚುನಾವಣಾ ಸೋಲು ಒಪ್ಪಿಕೊಂಡಿದ್ದೇನೆ. ಆದರೆ, ಐದು ಮುಕ್ಕಾಲು ಲಕ್ಷ ಜನ ಮತ ಹಾಕಿದ್ದಾರೆ. ಬೇಜಾರಿಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಚುನಾವಣೆಯಲ್ಲಿ ಗೆದ್ದಿರುವ ಸುಮಲತಾ ಅವರೇ ವೈಯಕ್ತಿಕ ಟೀಕೆ, ಆರೋಪದಲ್ಲೇ ಕಾಲಹರಣ ಮಾಡಬೇಡಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು