ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಮುನಿಸ್ವಾಮಿಗೆ ಕೋಲಾರ ಇತಿಹಾಸ ಗೊತ್ತಿಲ್ಲ: ಕೋಚಿಮುಲ್ ಅಧ್ಯಕ್ಷ ನಂಜೇಗೌಡ

ವಿನಾಕಾರಣ ಆರೋಪ ಶೋಭೆಯಲ್ಲ: ಶಾಸಕ ನಂಜೇಗೌಡ ವಾಗ್ದಾಳಿ
Last Updated 7 ಜುಲೈ 2020, 13:29 IST
ಅಕ್ಷರ ಗಾತ್ರ

ಕೋಲಾರ: ‘ಸಂಸದ ಮುನಿಸ್ವಾಮಿ ಅವರಿಗೆ ಅವಿಭಜಿತ ಕೋಲಾರ ಜಿಲ್ಲೆಯ ಇತಿಹಾಸ ಗೊತ್ತಿಲ್ಲ. ಹೀಗಾಗಿ ಅವರು ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ’ ಎಂದು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ವಾಗ್ದಾಳಿ ನಡೆಸಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಸದರು ಪದೇಪದೇ ಡಿಸಿಸಿ ಬ್ಯಾಂಕ್‌ ಹಾಗೂ ಕೋಚಿಮುಲ್‌ ಬಗ್ಗೆ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಸಲಹೆ ಸೂಚನೆ ನೀಡಲಿ. ಆಗ ಅವರ ಬಗ್ಗೆ ಗೌರವ ಹೆಚ್ಚುತ್ತದೆ. ವಿನಾಕಾರಣ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ’ ಎಂದು ಕುಟುಕಿದರು.

‘ರಾಜ್ಯ ಸರ್ಕಾರದಿಂದ ಕೋಚಿಮುಲ್‌ಗೆ ಯಾವುದೇ ಅನುದಾನ ಬರುವುದಿಲ್ಲ. ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ ನೇರವಾಗಿ ಅವರ ಖಾತೆಗೆ ಹೋಗುತ್ತದೆ. 30 ವರ್ಷ ಇತಿಹಾಸವಿರುವ ಹಾಲು ಒಕ್ಕೂಟದಲ್ಲಿ ಯಾರೂ ರಾಜಕಾರಣ ಮಾಡಿಲ್ಲ. ಅನುಭವದ ಕೊರತೆಯಿಂದ ಸಂಸದರು ಮನಸೋಇಚ್ಛೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಜಿಲ್ಲೆಯಲ್ಲಿ ಎಂವಿಕೆ ಗೋಲ್ಡನ್‌ ಡೇರಿ ನಿರ್ಮಾಣ ಕಾಮಗಾರಿ ತಡೆ ಹಿಡಿಯಲಾಗಿದೆ. ಡೇರಿಗೆ ಗುದ್ದಲಿ ಪೂಜೆ ನಡೆಸಲಾಗಿದ್ದು, ಒಕ್ಕೂಟ ವಿಭಜನೆ ಆಗುವವರೆಗೂ ತಾತ್ಕಾಲಿಕ ತಡೆ ಇರುತ್ತದೆ. ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಹೊಸ ಯೋಜನೆ ರೂಪಿಸಿ 2 ವರ್ಷದಲ್ಲಿ ಕೆಲಸ ಆರಂಭಿಸಲಾಗುವುದು. ಸಂಸದರು ಟೀಕೆ ಮಾಡುವುದಕ್ಕೂ ಮುನ್ನ ವಿಷಯ ತಿಳಿದು ಮಾತನಾಡಬೇಕು’ ಎಂದು ಸಲಹೆ ನೀಡಿದರು.

ಅಧಿಕಾರಿಗಳ ನಿರ್ಲಕ್ಷ್ಯ: ‘ಸರ್ಕಾರದ ಯಾವುದೇ ಕಾರ್ಯಕ್ರಮ ನಡೆದರೂ ಹಾಗೂ ಯಾವುದೇ ಸಚಿವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಾಗ ಸ್ಥಳೀಯ ಶಾಸಕರಿಗೆ ತಿಳಿಸಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಪ್ರವೃತ್ತಿ ಕೈಬಿಟ್ಟು ಸ್ಥಳೀಯ ಜನಪ್ರತಿನಿಧಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಕೊರೊನಾ ಸೋಂಕು ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಲಾಕ್‌ಡೌನ್ ವೇಳೆ ಸೂಕ್ತ ಸುರಕ್ಷತಾ ಮಾರ್ಗಸೂಚಿ ರೂಪಿಸಲಿಲ್ಲ. ಲಾಕ್‌ಡೌನ್‌ ಸಡಿಲಿಕೆ ನಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋವಿಡ್–19 ನೆಪದಲ್ಲಿ ಬಿಜೆಪಿ ಸರ್ಕಾರ ಜನರಿಗೆ ಪರಿಹಾರ ನೀಡದೆ ಲೂಟಿ ಮಾಡುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT