ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು | ಬೀಳುವ ಸ್ಥಿತಿಯಲ್ಲಿ ಎನ್. ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆ

ಕೆ.ತ್ಯಾಗರಾಜ್ ಕೊತ್ತೂರು
Published 19 ಡಿಸೆಂಬರ್ 2023, 5:50 IST
Last Updated 19 ಡಿಸೆಂಬರ್ 2023, 5:50 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಎನ್.ವಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ಸುಮಾರು ಮೂರು ವರ್ಷಗಳಿಂದ ಬೀಳುವ ಸ್ಥಿತಿಯಲ್ಲಿ ಇದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯದಲ್ಲಿಯೇ ಕಾಲ ದೂಡುವಂತಾಗಿದೆ.

ಶಾಲೆಯಲ್ಲಿ 8ರಿಂದ 10ನೆಯ ತರಗತಿಯವರೆಗೂ ಒಟ್ಟು 170 ವಿದ್ಯಾರ್ಥಿಗಳು ಓದುತ್ತಿದ್ದು, ಏಳು ಶಿಕ್ಷಕರು ಹಾಗೂ ಒಬ್ಬ ಸಹಾಯಕರು ಇದ್ದಾರೆ. ನಾಲ್ಕು ತರಗತಿ ಕೊಠಡಿಗಳಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿಗಳನ್ನು ಬೀಳುವ ಸ್ಥಿತಿಯಲ್ಲಿ ಇರುವ ಕಟ್ಟಡದಲ್ಲಿಯೇ ಕೂರಿಸಿ ಪಾಠ ಮಾಡಲಾಗುತ್ತಿದೆ. ಜೊತೆಗೆ ಮುಖ್ಯ ಶಿಕ್ಷಕರ ಕಚೇರಿ, ಸಿಬ್ಬಂದಿ ಕೊಠಡಿ, ಬಿಸಿ ಊಟದ ಸಾಮಾಗ್ರಿಗಳನ್ನು ಇಡುವ ಕೊಠಡಿ ಹಾಗೂ ವಿಜ್ಞಾನ ಪ್ರಯೋಗಾಲಯದ ಕೊಠಡಿಗಳು ಇವೆ. ಕಟ್ಟಡ ಹಳೆಯದಾಗಿದ್ದು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ.

ಕಟ್ಟಡದ ಕಾಮಗಾರಿ ಸರಿಯಾಗಿ ಮಾಡದೆ ಇರುವುದರಿಂದ ಮೇಲ್ ಚಾವಣಿಯ ಸಿಮೆಂಟ್ ಹಾಗೂ ಕಾಂಕ್ರೀಟ್ ಸದಾ ಉದುರುತ್ತಿದ್ದು ಕಂಬಿಗಳು ಹೊರಬಂದಿವೆ. ಕಾಂಕ್ರೀಟ್ ಒಳಗೆ ಹಾಕಲಾಗಿದ್ದ ವಿದ್ಯುತ್ ಪೈಪುಗಳು ನೇತಾಡುತ್ತಿವೆ. ಜೊತೆಗೆ ಕಟ್ಟಡದ ಪಾಯಾಗೆ ಹಾಕಿರುವ ಸಿಮೆಂಟ್ ಕಟ್ಟುಗಳು (ಬೀಮ್) ಅಲ್ಲಲ್ಲಿ ಬಿಚ್ಚಿಕೊಂಡು ಒಳಗಿನ ಕಂಬಿಗಳು ತುಕ್ಕು ಹಿಡಿದು ಮುರಿದು ಕಂಬಿಗಳು ಬೇರ್ಪಟ್ಟಿವೆ. ಹೀಗಾಗಿ ಕಟ್ಟಡ ಯಾವಾಗ ಯಾರ ಮೇಲೆ ಬೀಳುತ್ತದೆಯೇ ಹೇಳಲಾಗದಂತ ಸ್ಥಿತಿ ಏರ್ಪಟ್ಟಿದೆ.

ಮುಳಬಾಗಿಲು ತಾಲ್ಲೂಕು ಕೇಂದ್ರಕ್ಕೆ ಕೇವಲ 6 ಕಿಲೋಮೀಟರ್ ದೂರದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಶಾಲೆಗೆ ಸುಸಜ್ಜಿತವಾದ ಕಟ್ಟಡ ಇಲ್ಲ. ಹಾಗಾಗಿ, ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗಲು ಹಿಂದೂ ಮುಂದೂ ನೋಡುತ್ತಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಇದ್ದರೂ ಕಟ್ಟಡ ಸರಿ ಇಲ್ಲದ ಕಾರಣದಿಂದ ವಿದ್ಯಾರ್ಥಿಗಳು ಸ್ಥಳೀಯ ಖಾಸಗಿ ಶಾಲೆಗಳಿಗೆ ಹಾಗೂ ಮುಳಬಾಗಿಲು ನಗರಕ್ಕೆ ಹೊಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದರು.

ವೃತ್ತಾಕಾರವಾಗಿ ಇರುವ ಕಟ್ಟಡದ ಒಳಗಿನ ಮೇಲ್ ಚಾವಣಿಯ ಸಿಮೆಂಟ್ ಎಲ್ಲಾ ಕಡೆಗಳಲ್ಲಿಯೂ ಸಂಪೂರ್ಣವಾಗಿ ಉದುರಿ ಬಿದ್ದಿದ್ದು ಅಸ್ಥಿಪಂಜರದಂತೆ ಕಂಬಿಗಳು ತೇಲಿಕೊಂಡಿವೆ.ಇನ್ನು ಕಂಬಿಗಳೂ ಸಹ ಈಚೆಗೆ ಬಿದ್ದ ಮಳೆಗೆ ಸೋರಿಕೆಯಿಂದಾಗಿ ತುಕ್ಕು ಹಿಡಿದಿದ್ದು ಅಲ್ಲಲ್ಲಿ ಮುರಿದು ಹಾಳಾಗಿವೆ.ಚಾವಣಿಯಲ್ಲಿ ಹಾಕಿರುವ ವಿದ್ಯುತ್ ಪೈಪುಗಳು ನೇತಾಡುತ್ತಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಳಗೆ ಬರಲು ಹೆದರುವಂತಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿಗಳು ದೂರಿದರು.

ಮೇಲ್ ಚಾವಣಿಯನ್ನು ಹಿಡಿದುಕೊಳ್ಳಲು ಆಧಾರವಾಗಿ ಹಾಕಲಾಗಿರುವ ಸಿಮೆಂಟ್ ಕಟ್ಟುಗಳಲ್ಲಿಯೂ ಸಿಮೆಂಟ್ ಉದುರಿ ಹೋಗುತ್ತಿದ್ದು ಕೆಲವೇ ದಿನಗಳಲ್ಲಿ ಕಟ್ಟಡದಲ್ಲಿ ಸಿಮೆಂಟ್ ಮಾಯವಾಗಿ ಕೇವಲ ಕಂಬಿಗಳು ಮಾತ್ರ ಕಾಣಿಸುವಂತಹ ವಾತಾವರಣ ನಿರ್ಮಾಣವಾಗಿದೆ.

ಪಾಯದ ಸಿಮೆಂಟ್ ಮಾಯ

ಇನ್ನು ಕಟ್ಟಡಕ್ಕೆ ಹಾಕಿರುವ ಪಾಯದಲ್ಲಿನ ಸಿಮೆಂಟ್ ಸಹ ಅಲ್ಲಲ್ಲಿ ಉದುರಿ ಹೋಗಿದ್ದು ಕಾಂಕ್ರೀಟ್ ಕಂಬಿಗಳು ತೇಲಿ ಕೊಂಡಿವೆ.ಅಕಸ್ಮಾತ್ ಮಳೆ ನಿರಂತರವಾಗಿ ಬಿದ್ದರೆ ಪಾಯವೂ ಸಹ ಕುಸಿದು ಬೀಳಬಹುದಾಗಿದೆ.

ಶಾಲೆಯ ಕೊಠಡಿಗಳ ಮೇಲೆ ಗಿಡಗಳು

ಬಿಸಿಯೂಟದ ಅಡುಗೆ ಕೋಣೆ ಇರುವ ಪಕ್ಕದ ಬೋಧನಾ ಕೊಠಡಿಗಳು ಸಹ ಹಳೆಯದ್ದಾಗಿದ್ದು ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟುಕೊಂಡಿವೆ. ಬಿರುಕುಗಳಲ್ಲಿ ಅರಳಿ ಮುಂತಾದ ಗಿಡಗಳು ಬೆಳೆಯುತ್ತಿದ್ದು, ಗಿಡ ಮರವಾಗಿ ಬದಲಾದಂತೆ ಬೇರುಗಳು ಗೋಡೆಗಳಲ್ಲಿ ಇಳಿಯಲಿದೆ. ಆಗ ಸಹಜವಾಗಿಯೇ ಕೊಠಡಿಗಳು ಬೀಳುವ ಹಂತಕ್ಕೆ ತಲುಪಬಹುದು.

ಶೌಚಾಲಯದ ದುರವಸ್ಥೆ

ಹಳೆಯ ಕಟ್ಟಡದಲ್ಲಿ ಶೌಚಾಲಯ ಇದ್ದು ಅದನ್ನು ಇತ್ತೀಚಿಗೆ ಯಾರೂ ಬಳಸುತ್ತಿಲ್ಲ. ಹೀಗಾಗಿ ಪುಂಡ ಪೋಕರಿಗಳು ಬಾಗಿಲುಗಳನ್ನು ಅರ್ಧದಷ್ಟು ಮುರಿದು ನಾಶ ಪಡಿಸಿದ್ದಾರೆ. ಹೀಗಾಗಿ ಹಾವುಗಳು ಅಥವಾ ವಿಷಕಾರಿ ಜಂತುಗಳು ಸೇರಿಕೊಳ್ಳುವಂತಹ ವಾತಾವರಣ ಇದೆ.

ಬೇಕು ಆಂಗ್ಲ ಮಾಧ್ಯಮ: ಎನ್.ವಡ್ಡಹಳ್ಳಿ ಗ್ರಾಮದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಇದ್ದು ಬಹುತೇಕ ಪೋಕಷರು ತಮ್ಮ ಮಕ್ಕಳನ್ನು ಕನ್ನಡ ಮಾದ್ಯಮದ ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಿದರೆ ದಾಖಲಾತಿ ಹೆಚ್ಚಾಗಲಿದೆ ಎಂಬುದು ವಿದ್ಯಾರ್ಥಿಗಳ ಅಭಿಪ್ರಾಯ

ಕ್ರಮ ಕೈಗೊಳ್ಳುವ ನಿರೀಕ್ಷೆ

ಹಳೆಯ ಕಟ್ಟಡದ ಮೇಲ್ ಚಾವಣಿ ಹಾಗೂ ಇಡೀ ಕಟ್ಟಡ ಬೀಳುವ ಸ್ಥಿತಿಯಲ್ಲಿ ಇದ್ದು ಈ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಅಂಜಲಿ ಮುಖ್ಯ ಶಿಕ್ಷಕಿ ಕಳಪೆ ಕಾಮಗಾರಿ ಕಟ್ಟಡ ನಿರ್ಮಾಣವಾಗಿ ಸುಮಾರು 19 ವರ್ಷಗಳಾಗಿವೆ.  ಕಳಪೆ ಕಾಮಗಾರಿಯಿಂದ ಸಿಮೆಂಟ್ ಉದುರುತ್ತಲೇ ಇದ್ದು ವಿದ್ಯಾರ್ಥಿಗಳ ತಲೆಗಳು ಹಾಗೂ ಬಟ್ಟೆಗಳ ಮೇಲೆ ಮಣ್ಣು ತುಂಬಿಕೊಂಡಿರುತ್ತದೆ. ತಲೆ ಕೆಳಗೆ ಬಗ್ಗಿಸಿದರೆ ಮಣ್ಣು ಊಟದ ತಟ್ಟೆಗಳಲ್ಲಿ ಬೀಳುತ್ತದೆ. ಹೀಗಾಗಿ ಊಟವೂ ಮಾಡಲಾಗುತ್ತಿಲ್ಲ ಭಯದಿಂದ ಓಡಾಡುವಂತಾಗಿದೆ. ಆದ್ದರಿಂದ ಕೂಡಲೇ ಸಂಭಂದಿಸಿದ ಅಧಿಕಾರಿಗಳು ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಬೇಕು ಎನ್.ದೇವರಾಜ್ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ

ಕಟ್ಟಡದ ಒಳಗಿನ ಆಧಾರ ಕಟ್ಟುಗಳಲ್ಲಿ ಸಿಮೆಂಟ್ ಉದುರಿ ಬೀಳುವ ಸ್ಥಿತಿಯಲ್ಲಿದೆ
ಕಟ್ಟಡದ ಒಳಗಿನ ಆಧಾರ ಕಟ್ಟುಗಳಲ್ಲಿ ಸಿಮೆಂಟ್ ಉದುರಿ ಬೀಳುವ ಸ್ಥಿತಿಯಲ್ಲಿದೆ
ಕಟ್ಟಡದ ಪಾಯಾದಲ್ಲಿನ ಸಿಮೆಂಟ್ ಕಟ್ಟುಗಳಲ್ಲಿ ಕಬ್ಬಿಣದ ಕಂಬಿಗಳು ಮುರಿದು ಹೋಗಿರುವುದು.
ಕಟ್ಟಡದ ಪಾಯಾದಲ್ಲಿನ ಸಿಮೆಂಟ್ ಕಟ್ಟುಗಳಲ್ಲಿ ಕಬ್ಬಿಣದ ಕಂಬಿಗಳು ಮುರಿದು ಹೋಗಿರುವುದು.
ಶಾಲೆಯ ಬೋಧನಾ ಕೊಠಡಿಗಳ ಮೇಲೆ ಗಿಡಗಳು ಬೆಳೆದಿರುವುದು.
ಶಾಲೆಯ ಬೋಧನಾ ಕೊಠಡಿಗಳ ಮೇಲೆ ಗಿಡಗಳು ಬೆಳೆದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT