ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ್‌ಗೆ ‘ಕಮಲ’ ಪಡೆಯ ಪೆಟ್ಟು

‘ಮೂಡಣ ಬಾಗಿಲ’ಲ್ಲಿ ಕೈ ಕೊಟ್ಟ ಅದೃಷ್ಟ: ಸಚಿವಗಾದಿಗೆ ರಾಜೀನಾಮೆ
Last Updated 13 ಜನವರಿ 2021, 16:55 IST
ಅಕ್ಷರ ಗಾತ್ರ

ಕೋಲಾರ: ಬಿಜೆಪಿ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರಿಗೆ ‘ಕಮಲ ಪಡೆ’ ದೊಡ್ಡ ಪೆಟ್ಟು ಕೊಟ್ಟಿದ್ದು, ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಿಂದ ಸ್ಥಳೀಯವಾಗಿ ಅವರಿಗೆ ತೀವ್ರ ಮುಖಭಂಗವಾಗಿದೆ.

ರಾಜ್ಯದ ‘ಮೂಡಣ ಬಾಗಿಲು’ ಎಂದೇ ಹೆಸರಾಗಿರುವ ಜಿಲ್ಲೆಯ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದ ನಾಗೇಶ್‌ ಆರಂಭದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಬೆಂಬಲಿಸಿದ್ದರು.

ಮೈತ್ರಿ ಸರ್ಕಾರದಲ್ಲಿ ಸಚಿವಗಾದಿ ಸಿಗದೆ ಒಳಗೊಳಗೆ ಕುದಿಯುತ್ತಿದ್ದ ಅವರನ್ನು 2019ರ ಜೂನ್‌ನಲ್ಲಿ ಸಚಿವರನ್ನಾಗಿ ಮಾಡಲಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನಾಗೇಶ್‌ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ನಂತರ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರ ಬಣ ಸೇರಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು.

ಇದಕ್ಕೆ ಪ್ರತಿಫಲವಾಗಿ ಕಮಲ ಪಾಳಯವು ಅವರಿಗೆ ಮಂತ್ರಿಗಿರಿ ದಯಪಾಲಿಸುವುದರ ಜತೆಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ನೀಡಿತ್ತು. ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ರ ನಾಮಬಲದಿಂದ ಗೆದ್ದು ಬಂದಿದ್ದ ನಾಗೇಶ್‌ ಸಚಿವರಾದ ನಂತರ ಕೊತ್ತೂರು ಮಂಜುನಾಥ್‌ರಿಂದ ದೂರವಾಗುತ್ತಾ ಸಾಗಿದರು. ಇಬ್ಬರ ಸಂಬಂಧ ಹಳಸಿ ಪರಸ್ಪರರು ಹಾವು–ಮುಂಗುಸಿಯಂತಾಗಿದ್ದರು.

ಮತ್ತೊಂದೆಡೆ ಸಂಸದ ಮುನಿಸ್ವಾಮಿ ಅವರ ವಿರುದ್ಧವೂ ಕತ್ತಿ ಮಸಿಯುತ್ತಿದ್ದ ನಾಗೇಶ್‌ ತಮ್ಮದೇ ಆಪ್ತ ಕೂಟ ಕಟ್ಟಿಕೊಂಡು ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಮುಳಬಾಗಿಲು ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ನಾಗೇಶ್‌ರ ಬೆಂಬಲಿಗರು ಸೋತು ರಾಜಕೀಯವಾಗಿ ಅವರ ಶಕ್ತಿ ಕುಂದಿತ್ತು.

ಲಂಚದ ಕುತ್ತು?: ಬಳ್ಳಾರಿ ಜಿಲ್ಲೆ ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಮೋಹನ್‌ರಾಜ್‌ರ ವರ್ಗಾವಣೆಗೆ ₹ 1 ಕೋಟಿ ಲಂಚ ಕೇಳಿದ ಆರೋಪ ನಾಗೇಶ್‌ರ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ಮೋಹನ್‌ರಾಜ್‌ರ ಪುತ್ರಿ ಎಂ.ಸ್ನೇಹಾ ಅವರು ಪ್ರಧಾನಿಮಂತ್ರಿ ಕಚೇರಿಗೆ ದೂರು ಸಹ ಕೊಟ್ಟಿದ್ದರು. ಇಲಾಖೆಯಲ್ಲಿನ 600ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಯಲ್ಲಿ ನಾಗೇಶ್‌ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸ್ನೇಹಾ ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣವೇ ನಾಗೇಶ್‌ ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿತು ಎಂಬ ಮಾತು ಕಮಲ ಪಾಳಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ನಾಗೇಶ್‌ರ ವಿರುದ್ಧದ ಲಂಚದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್‌ ಅವರನ್ನು ಸಂಪುಟದಿಂದ ಕೈಬಿಡುವಂತೆ 2020ರ ಡಿಸೆಂಬರ್‌ನಲ್ಲೇ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿತ್ತು. ಶತಾಯಗತಾಯ ಸಚಿವಗಾದಿ ಉಳಿಸಿಕೊಳ್ಳಲು ಅಂತಿಮ ಕ್ಷಣದವರೆಗೂ ತೀವ್ರ ಕಸರತ್ತು ನಡೆಸಿದ್ದ ನಾಗೇಶ್‌ ‘ರಾಜೀನಾಮೆ ಕೊಡುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಆದರೆ, ಅವರ ತಂತ್ರಗಾರಿಕೆ ಫಲಿಸಲಿಲ್ಲ.

ಸಂಭ್ರಮಾಚರಣೆ: ನಾಗೇಶ್‌ರ ರಾಜೀನಾಮೆಯ ಸುದ್ದಿ ತಿಳಿಯುತ್ತಿದ್ದಂತೆ ಅವರ ವಿರೋಧಿಗಳು ಹಾಗೂ ಕೊತ್ತೂರು ಮಂಜುನಾಥ್‌ ಬೆಂಬಲಿಗರು ಮುಳಬಾಗಿಲಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ‘ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲದಿಂದ ಗೆಲುವು ಸಾಧಿಸಿ ಬಳಿಕ ‘ಕೈ’ ಪಾಳಯದಿಂದ ಕಮಲ ಪಡೆಯತ್ತ ವಾಲಿದ್ದ ನಾಗೇಶ್‌ ಅವರಿಗೆ ಬಿಜೆಪಿ ತಕ್ಕಪಾಠ ಕಲಿಸಿದೆ’ ಎಂದು ಕೊತ್ತೂರು ಬೆಂಬಲಿಗರು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT