ಗುರುವಾರ , ಜುಲೈ 7, 2022
23 °C
ಸಸ್ಯದ ಬೆಳವಣಿಗೆಗೆ ಹೆಚ್ಚು ಪೂರಕ

ನ್ಯಾನೋ ಯೂರಿಯಾ ಗೊಬ್ಬರದಿಂದ ಅಡ್ಡ ಪರಿಣಾಮವಿಲ್ಲ: ಶಾಸಕ ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಪರಿಸರಕ್ಕೆ ಹಾಗೂ ಭೂಮಿಗೆ ಯಾವುದೇ ಅಡ್ಡಪರಿಣಾಮವಿಲ್ಲದ ಸಸ್ಯದ ಬೆಳವಣಿಗೆಗೆ ಹೆಚ್ಚು ಪೂರಕವಾದ ವಿಶ್ವದ ಪ್ರಥಮ ನ್ಯಾನೋ ಯೂರಿಯಾ ಗೊಬ್ಬರವನ್ನು ಪ್ರಧಾನಿ ನರೇಂದ್ರಮೋದಿ ಲೋಕಾರ್ಪಣೆ ಮಾಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನ್ಯಾನೋ ಯೂರಿಯಾ ಗೊಬ್ಬರವನ್ನು ರೈತರಿಗೆ ವಿತರಿಸಿ ಮಾತನಾಡಿ, ‘ಪ್ರಸ್ತುತ ರೈತರು ಬಳಸುತ್ತಿರುವ ಯೂರಿಯಾ ಗೊಬ್ಬರವನ್ನು 100 ಕೆ.ಜಿ ಬೆಳೆಗೆ ಬಳಸಿದರೆ 25 ಕೆ.ಜಿ ಮಾತ್ರ ಬೆಳೆಗೆ ಸಿಗುತ್ತದೆ. ಉಳಿದ ಶೇ 75ರಷ್ಟು ಗೊಬ್ಬರ ವಾತಾವರಣ, ಭೂಮಿ, ಅಂತರ್ಜಲಕ್ಕೆ ಸೇರಿ ಜೀವ ಸಂಕುಲಕ್ಕೆ ಸಮಸ್ಯೆಯಾಗುತ್ತಿದೆ ಮತ್ತು ಮಣ್ಣಿನ ಫಲವತ್ತತೆ ಹಾಳು ಮಾಡುತ್ತಿದೆ’ ಎಂದರು.

‘ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ಯೋಜನೆಯಡಿ ಯೂರಿಯಾಗೆ ಪರ್ಯಾಯವಾಗಿ ಮಣ್ಣಿನ ರಕ್ಷಣೆಗೆ ಇತರೆ ಮೂಲ ಕಂಡುಕೊಳ್ಳಲು ನೀಡಿದ ಸಲಹೆಯಂತೆ ಇಫ್ಕೊ ಸಂಸ್ಥೆಯು ನಿರಂತರವಾಗಿ ಸಂಶೋಧನೆ ಮಾಡಿ ನ್ಯಾನೋ ಯೂರಿಯಾವನ್ನು ಕೊಡುಗೆಯಾಗಿ ನೀಡಿದೆ’ ಎಂದು ವಿವರಿಸಿದರು.

‘ಸದಾನಂದಗೌಡರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲೇ 2017ರಲ್ಲಿ ನ್ಯಾನೋ ಯೂರಿಯಾವನ್ನು ನೀಡಿದ್ದು, ಅದನ್ನು 11 ಸಾವಿರ ರೈತರ ಜಮೀನುಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಿರಂತರ ಪರೀಕ್ಷಿಸಿದ ನಂತರ ನೀಡಿದ ವರದಿಯಂತೆ ನ್ಯಾನೋ ಯೂರಿಯಾವನ್ನು ಅನುಮೋದಿಸಿ ಪ್ರಧಾನಿಯವರು ಲೋಕಾರ್ಪಣೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೃಷಿಗೆ ವರದಾನ: ‘ಯೂರಿಯಾ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣು ತನ್ನ ಗುಣ ಕಳೆದುಕೊಂಡು ಫಲವತ್ತತೆ ನಾಶವಾಗಿ ಜೀವ ಸಂಕುಲಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ಅರಿತು ಇಫ್ಕೋ ಸಂಸ್ಥೆ ಬಿಡುಗಡೆ ಮಾಡಿರುವ ಪರಿಸರಸ್ನೇಹಿ, ರೈತರ ಆರ್ಥಿಕತೆಗೆ ಪೂರಕವಾದ ನ್ಯಾನೋ ಗೊಬ್ಬರ ಕೃಷಿಗೆ ವರದಾನವಾಗಲಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅಭಿಪ್ರಾಯಪಟ್ಟರು.

‘ದೇಶದ 10 ಕಡೆಗಳಲ್ಲಿ ನ್ಯಾನೋ ಯೂರಿಯಾ ಘಟಕಗಳನ್ನು ಸ್ಥಾಪಿಸುವ ಪ್ರಯತ್ನ ಹಾಗೂ ದಕ್ಷಿಣ ಭಾರತಕ್ಕೆ ನ್ಯಾನೋ ಯೂರಿಯಾ ಪೂರೈಕೆಗಾಗಿ ಕರ್ನಾಟಕದ ದೇವನಹಳ್ಳಿ ಸಮೀಪ ಘಟಕ ಸ್ಥಾಪನೆಗೆ ಇಫ್ಕೋ ಮುಂದಾಗಿರುವುದು ಶ್ಲಾಘನೀಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಬ್ಸಿಡಿ ಉಳಿಸುತ್ತಿದೆ: ‘ಒಂದು ಎಕರೆಗೆ 4 ಚೀಲ ಯೂರಿಯಾ ಗೊಬ್ಬರ ಹಾಕುವ ಬದಲಿಗೆ ಕೇವಲ ₹ 480 ಮೌಲ್ಯದ ಒಂದು ಲೀಟರ್ ನ್ಯಾನೋ ಯೂರಿಯಾವನ್ನು ಸಸ್ಯಗಳ ಮೇಲೆ ಸಿಂಪಡಿಸಿದರೆ ಸಾಕು. ಬೆಂಗಳೂರು ಘಟಕದಲ್ಲಿ 3 ಕೋಟಿ ಲೀಟರ್ ಉತ್ಪಾದನೆ ಗುರಿಯೊಂದಿಗೆ ಇಫ್ಕೋ ರೈತರಿಗೆ ಮತ್ತು ದೇಶದ ಖಜಾನೆಗೆ ಪ್ರತಿ ವರ್ಷ ಸುಮಾರು ₹ 1 ಲಕ್ಷ ಕೋಟಿ ಯೂರಿಯಾ ಸಬ್ಸಿಡಿ ಉಳಿಸುವ ಕೆಲಸ ಮಾಡುತ್ತಿದೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಹೇಳಿದರು.

‘₹ 6 ಲಕ್ಷ ಷೇರು ಬಂಡವಾಳದೊಂದಿಗೆ ಆರಂಭವಾಗಿ ಇಂದು ₹ 600 ಕೋಟಿ ಷೇರು ಹೊಂದಿದೆ. ವರ್ಷಕ್ಕೆ ಸುಮಾರು ₹ 40 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. 36,800 ಸಹಕಾರಿ ಸಂಘಗಳ ಸದಸ್ಯತ್ವ ಹೊಂದಿದೆ. ದೇಶದ ರಾಸಾಯನಿಕ ಗೊಬ್ಬರಗಳ ಅಗತ್ಯತೆಯಲ್ಲಿ ಶೇ 60ರಷ್ಟನ್ನು ಸಂಸ್ಥೆಯೇ ಪೂರೈಸುತ್ತಿದೆ’ ಎಂದು ಇಫ್ಕೋ ಸಂಸ್ಥೆ ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ನಾರಾಯಣಸ್ವಾಮಿ ವಿವರಿಸಿದರು.

‘ನ್ಯಾನೋ ಯೂರಿಯಾದಿಂದ ಭೂಮಿ ಕೆಡೋದಿಲ್ಲ, ಪರಿಸರ ಮತ್ತು ಅಂತರ್ಜಲಕ್ಕೆ ಹಾನಿಯಿಲ್ಲ, ಸಬ್ಸಿಡಿ ರಹಿತವಾಗಿದೆ. 2022-23ರಲ್ಲಿ ದೇಶದ ಖಜಾನೆಗೆ ₹ 2.5 ಲಕ್ಷ ಕೋಟಿ ಸಬ್ಸಿಡಿಯ ಹೊರೆ ಇಳಿಸಲಿದೆ. 1 ಲೀಟರ್ ಗೊಬ್ಬರ ನ್ಯಾನೋ ಯೂರಿಯಾ 2 ಚೀಲ ಗೊಬ್ಬರಕ್ಕೆ ಸಮವಾಗಲಿದ್ದು, ಸಸ್ಯಗಳಿಗೆ 2 ಬಾರಿ ಸಿಂಪಡಿಸಿದರೆ ಸಾಕು, ಒಂದು ಲೀಟರ್ ನೀರಿಗೆ 5 ಎಂಎಲ್ ನ್ಯಾನೋ ಯೂರಿಯಾ ಮಿಶ್ರಣ ಮಾಡಿ ಸಿಂಪಡಿಸಬಹುದು’ ಎಂದರು.

ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಗೋಪಾಲಪ್ಪ, ನಿರ್ದೇಶಕ ನಾಗರಾಜ್, ಟಿಎಪಿಸಿಎಂಎಸ್ ನಿರ್ದೇಶಕ ನಾರಾಯಣಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು