ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಭ್ರಷ್ಟಾಚಾರದ ಪಾಲುದಾರ: ಸಿದ್ದರಾಮಯ್ಯ ಮೂದಲಿಕೆ

Last Updated 3 ಮೇ 2019, 11:53 IST
ಅಕ್ಷರ ಗಾತ್ರ

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಚೌಕೀದಾರ್ (ಕಾವಲುಗಾರ) ಎಂದು ಹೇಳಿಕೊಂಡು ಹಣ ಲೂಟಿ ಮಾಡುವ ಭ್ರಷ್ಟರಿಗೆ ಬೆಂಬಲ ಕೊಟ್ಟಿದ್ದಾರೆ. ಅವರು ಚೌಕೀದಾರ್ ಅಲ್ಲ ಭ್ರಷ್ಟಾಚಾರದ ಪಾಲುದಾರ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೂದಲಿಸಿದರು.

ಇಲ್ಲಿ ಶನಿವಾರ ನಡೆದ ಕಾಂಗ್ರೆಸ್– ಜೆಡಿಎಸ್‌ ಮೈತ್ರಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಮೋದಿ ರಫೇಲ್ ಹಗರಣದಲ್ಲಿ ಅನಿಲ್‌ ಅಂಬಾನಿ ಜತೆ ಶಾಮೀಲಾಗಿದ್ದಾರೆ. ರಾಷ್ಟ್ರಪತಿಯು ಮೋದಿಗೆ ಚೌಕೀದಾರ್ ಎಂದು ನಾಮಕರಣ ಮಾಡಿಲ್ಲ. ಬದಲಿಗೆ ಮೋದಿಯೇ ತಾನು ಚೌಕೀದಾರ್‌ ಎಂದು ಹೇಳಿಕೊಂಡು ಬೀದಿ ಬೀದಿ ಅಲೆಯುತ್ತಿದ್ದಾರೆ’ ಎಂದು ಜರಿದರು.

‘ಬಿಜೆಪಿಯಲ್ಲಿನ ಭ್ರಷ್ಟರೆಲ್ಲಾ ಚೌಕೀದಾರ್‌ಗಳೇ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಆರ್‌.ಅಶೋಕ್, ಕಟ್ಟಾ ಸುಬ್ರಮಣ್ಯನಾಯ್ಡು ಅವರೆಲ್ಲಾ ಚೌಕೀದಾರ್‌ಗಳು. ಜೈಲಿಗೆ ಹೋಗಿ ಬಂದ ಈ ಚೌಕೀದಾರ್‌ಗಳಿಗೆ ಜನ ಮತ ಹಾಕಬೇಕಾ?’ ಎಂದು ಗುಡುಗಿದರು.

‘ಬ್ಯಾಂಕ್‌ಗಳ ಕೋಟಿಗಟ್ಟಲೆ ಹಣ ಲೂಟಿ ಮಾಡಿ ದೇಶ ತೊರೆದವರನ್ನು ತಡೆಯದ ಮೋದಿಗೆ ನಾಚಿಕೆಯಾಗಬೇಕು. ನೀರವ್ ಮೋದಿ, ಲಲಿತ್ ಮೋದಿ, ವಿಜಯ್‌ ಮಲ್ಯ ಅವರಂತಹ ವಂಚಕರು ಜನರ ಹಣ  ಲೂಡಿ ಮಾಡಿ ರಾತ್ರೋರಾತ್ರಿ ದೇಶ ಬಿಟ್ಟರೂ ಅವರನ್ನು ಯಾಕೆ ಕಾಯಲಿಲ್ಲ?’ ಎಂದು ಪ್ರಶ್ನಿಸಿದರು.

‘ಬಿಜೆಪಿ ಚುನಾವಣೆಗಾಗಿ ದೇಶದ ಸೈನಿಕರನ್ನು ಬಳಸಿಕೊಳ್ಳುತ್ತಿದೆ. 5 ವರ್ಷದಲ್ಲಿ ಮೋದಿ ಸಾಧನೆ ಶೂನ್ಯ. ಇದನ್ನು ಮರೆಮಾಚಲು ಬಿಜೆಪಿ ಮುಖಂಡರು ಸೈನಿಕರ ಸಾಧನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿಗೆ ಬೆಂಬಲ ಕೊಡಬೇಡಿ’ ಎಂದು ಮನವಿ ಮಾಡಿದರು.

ಕಾಳಜಿ ಇಲ್ಲ: ‘ಮೋದಿಗೆ ರೈತರು ಮತ್ತು ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸಿದ ಮೋದಿ ಬಂಡವಾಳಶಾಹಿಗಳ ಕೋಟಿಗಟ್ಟಲೇ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಕೊಂಡಿದೆ. ಇದಕ್ಕೆ ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವೇ ಸಾಕ್ಷಿ. ಪಂಚ ರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್‌ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದೆ’ ಎಂದರು.

‘ರಾಹುಲ್‌ ಗಾಂಧಿ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರಂಭದಲ್ಲೇ ಕೃಷಿ ಸಾಲ ಮನ್ನಾ ಮಾಡಿಸಿದರು. ರಾಜ್ಯದ ಮೈತ್ರಿ ಸರ್ಕಾರ ಸಹ ರೈತರ ₹ 48 ಸಾವಿರ ಕೋಟಿ ಸಾಲ ಮನ್ನಾ ಮಾಡಿತು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಕೃಷಿ ಸಾಲ ಮನ್ನಾ ಮಾಡಿದ್ದೇವು. ಆದರೆ, ಮೋದಿ ಸರ್ಕಾರ ನಯಾ ಪೈಸೆ ಸಾಲ ಮನ್ನಾ ಮಾಡಿಲ್ಲ’ ಎಂದು ಆರೋಪಿಸಿದರು.

ಟೋಪಿ ಹಾಕಿದ್ದಾರೆ: ‘ಮೋದಿಯವರು ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗಾವಕಾಶ ಸೃಷ್ಟಿಸುವ ಭರವಸೆ ನೀಡಿ ಯುವಕರಿಗೆ ಟೋಪಿ ಹಾಕಿದ್ದಾರೆ. ಉದ್ಯೋಗ ಸೃಷ್ಟಿಗೆ ಬದಲಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮುಗಿಸಲು ಯತ್ನಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಎತ್ತಿನಹೊಳೆ, ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆ ಜಾರಿಗೊಳಿಸಿದೆ. ಆದರೆ, ಬಿಜೆಪಿಯುವರು ಈ ಭಾಗದ ಜನರಿಗೆ ಏನು ಕೊಟ್ಟರು? ಬಿಜೆಪಿಯ ಸುಳ್ಳು ಭರವಸೆ ಬಗ್ಗೆ ತಲೆಕಡಿಸಿಕೊಳ್ಳಬೇಡಿ. ಸಂವಿಧಾನ ವಿರೋಧಿ ಬಿಜೆಪಿಗೆ ಮತ ಹಾಕಬೇಡಿ’ ಎಂದು ಹೇಳಿದರು.

ನಾಲಾಯಕ್: ‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಗ್ರಾಮ ಪಂಚಾಯಿತಿ ಸದಸ್ಯನಾಗುವುದಕ್ಕೂ ನಾಲಾಯಕ್. ದೇಶದಲ್ಲಿರುವ ಅಂಬೇಡ್ಕರ್ ಪುತ್ಥಳಿಗಳನ್ನು ಧ್ವಂಸ ಮಾಡುವಂತೆ ಹೇಳಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮತಾಂಧ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಯವ ಇಂತಹ ದುರುಳರಿಗೆ ಮತ ಹಾಕಬೇಕಾ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT