ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿವಿದ ನೀಲ್ಗಾಯ್‌: ನೌಕಾಪಡೆಯ ಕೋಲಾರ ಮೂಲದ ಯೋಧ ನಿಧನ

ಜಾಮ್‌ನಗರದಲ್ಲಿ ದುರಂತ: ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
Published 14 ಮಾರ್ಚ್ 2024, 15:13 IST
Last Updated 14 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ಕೋಲಾರ: ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೋಲಾರದ ಯೋಧರೊಬ್ಬರು ಕಾಡುಪ್ರಾಣಿ ತಿವಿತದಿಂದ ಗುಜರಾತ್‌ ರಾಜ್ಯದ ಜಾಮ್‌ನಗರದಲ್ಲಿ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ.

ನಗರದ ಗಲ್‍ಪೇಟೆ ನಿವಾಸಿಗಳಾದ ಪ್ರಸನ್ನ ಹಾಗೂ ಸರಿತಾ ದಂಪತಿ ಪುತ್ರ ಹರ್ಷಿತ್ ಪ್ರಸನ್ನ (22) ಮೃತ ನಾವಿಕ.

ಮಂಗಳವಾರ ಜಾಮ್‌ನಗರದಲ್ಲಿ ನೌಕಾಪಡೆಯ ಶಿಬಿರದಲ್ಲಿ ಜಿಂಕೆ ಹೋಲುವ ನೀಲ್ಗಾಯ್‌ (ಬ್ಲೂ ಬುಲ್) ತನ್ನ ಕೊಂಬಿನಿಂದ ಹರ್ಷಿತ್‌ ಪ್ರಸನ್ನ ಅವರಿಗೆ ಹಿಂದಿನಿಂದ ತಿವಿದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಪ್ರಯೋಜನವಾಗಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹರ್ಷಿತ್‍ ಅವರ ಪಾರ್ಥಿವ ಶರೀರವನ್ನು ಬುಧವಾರ ಸಂಜೆ ಪೋಷಕರಿಗೆ ನೌಕಪಡೆಯ ಸಿಬ್ಬಂದಿ ಒಪ್ಪಿಸಿದರು. ಗುರುವಾರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಇದಾದ ನಂತರ ಗಲ್‍ಪೇಟೆಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹರ್ಷಿತ್‍ ಅವರ ತಾಯಿ, ಪುತ್ರನ ಕ್ಯಾಪ್ ಹಾಗೂ ಭಾವಚಿತ್ರ ಹಿಡಿದುಕೊಂಡು ಕಣ್ಣೀರು ಹಾಕಿದರು. 

‘ಯುದ್ಧ ಭೂಮಿಯಲ್ಲಿ ಕೆಲಸ ಮಾಡಬೇಕು, ದೇಶ ಸೇವೆ ಮಾಡಬೇಕೆಂಬ ಇಚ್ಛೆಯಿಂದ ನಾಲ್ಕು ವರ್ಷಗಳ ಹಿಂದೆ ನೌಕಾಪಡೆಗೆ ಸೇರಿದ್ದ. ಆಗ ಆತನಿಗೆ ಕೇವಲ 18 ವರ್ಷ. ತಾನಂದುಕೊಂಡಂತೇ ಒಂದೊಂದೇ ಗುರಿ ಸಾಧಿಸಿ ಹೆತ್ತವರ ಆಸೆ ಆಕಾಂಕ್ಷೆ ಈಡೇರಿಸುತ್ತಿದ್ದ. ಆದರೆ, ಈಗ ದುರಂತದಲ್ಲಿ ಅಂತ್ಯಗೊಂಡಿದೆ’ ಎಂದು ಸಂಬಂಧಿಕರು ಹೇಳಿದರು.

‘ನಿತ್ಯ ಪೋಷಕರಿಗೆ ದೂರವಾಣಿ ಕರೆ ಮಾತನಾಡುತ್ತಿದ್ದ. ನಿಧನದ ಕೆಲವೇ ನಿಮಿಷಗಳ ಮೊದಲಷ್ಟೇ ಮಾತನಾಡಿದ್ದ. ಪ್ಲಾಸ್ಟಿಕ್‌ ತಿನ್ನಲು ಹೋಗುತ್ತಿದ್ದ ನೀಲ್ಗಾಯ್‍ ಮರಿಗಳನ್ನು ಓಡಿಸಲು ಹೋಗಿದ್ದಾನೆ. ಈ ವೇಳೆ ತಾಯಿ ನೀಲ್ಗಾಯ್ ತನ್ನ ಕೊಂಬಿನಿಂದ ಹರ್ಷಿತ್‍ನ ಹೊಟ್ಟೆ ಭಾಗಕ್ಕೆ ತಿವಿದಿದೆ. ಅಲ್ಲಿನ ಸಿಬ್ಬಂದಿಯು ಪೋಷಕರಿಗೆ ವಿಚಾರ ಮುಟ್ಟಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT