ಭಾನುವಾರ, ಏಪ್ರಿಲ್ 18, 2021
31 °C
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ

ಸಹಕಾರ ರಂಗದಲ್ಲಿ ರಾಜಕೀಯ ಬೇಡ: ರಾಜೇಂದ್ರಕುಮಾರ್ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟರೆ ಜನರ ಹಣವನ್ನು ದೇಶ ಬಿಟ್ಟು ಹೋಗೋರಿಗೆ ನೀಡಿ ಮುಳುಗಿಸುತ್ತಾರೆ. ಆದರೆ, ಸಹಕಾರ ಬ್ಯಾಂಕ್‌ಗಳು ಜನರ ಹಣವನ್ನು ಸ್ಥಳೀಯ ಸಮುದಾಯದ ಆರ್ಥಿಕ ಸದೃಢತೆಗೆ ಮಾತ್ರ ಬಳಸುತ್ತವೆ’ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.

ಇಲ್ಲಿ ಬುಧವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಹಕಾರ ಕ್ಷೇತ್ರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸಬಹುದು. ಸಾಲ ಮನ್ನಾ, ಸಬ್ಸಿಡಿ, ಸಾಲ ಸಿಗುವುದು ಸಹಕಾರಿ ಬ್ಯಾಂಕ್‌ಗಳಿಂದ ಮಾತ್ರ’ ಎಂದು ಅಭಿಪ್ರಾಯಪಟ್ಟರು.

‘ಭಾರತೀಯ ರಿಸರ್ವ್‌ ಬ್ಯಾಂಕ್‌ನವರು ಖಾಸಗಿ ಬ್ಯಾಂಕ್‌ಗಳನ್ನು ನಿಷ್ಕ್ರೀಯ ಆಸ್ತಿ ಮೌಲ್ಯದಿಂದ (ಎನ್‌ಪಿಎ) ತಪ್ಪಿಸಲು ಹಣದ ನೆರವು ನೀಡಿದರು. ಆದರೆ, ಸಹಕಾರಿ ಬ್ಯಾಂಕ್‌ಗಳಿಗೆ ಹಣಕಾಸು ನೆರವು ನೀಡದೆ ಎನ್‌ಪಿಎ ಅಡಿಗೆ ತಂದರು. ಆದರೂ ಸಹಕಾರಿ ಬ್ಯಾಂಕ್‌ಗಳು ಆರ್ಥಿಕವಾಗಿ ಮುಂಚೂಣಿಯಲ್ಲಿವೆ’ ಎಂದರು.

‘ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟ ಹಣ ಎಂದಿಗೂ ಹಾಳಾಗಲ್ಲ. ಆ ಹಣ ರೈತರು, ಮಹಿಳೆಯರಿಗೆ ನೆರವಾಗಿ ಸಿಗುತ್ತದೆ. ರೈತರು ಮತ್ತು ಮಹಿಳೆಯರು ಇನ್ನಾದರು ಜಾಗೃತರಾಗಿ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟು ವಹಿವಾಟು ನಡೆಸಬೇಕು’ ಎಂದು ಸಲಹೆ ನೀಡಿದರು.

‘ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ಬ್ಯಾಂಕ್‌ಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಚುನಾವಣಾ ರಾಜಕೀಯ ಸಹಕಾರ ರಂಗದಲ್ಲಿ ನುಸುಳಬಾರದು. ಮಹಿಳೆಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಮೂಲಕ ಬ್ಯಾಂಕ್‌ಗಳಿಗೆ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.

‘ಜನರಿಕ್ ಔಷಧ ಮಳಿಗೆಗಳ ಸ್ಥಾಪನೆಗೆ ಖಾಸಗಿಯವರಿಗೆ ಪರವಾನಗಿ ನೀಡಿದರೆ ಅವರು ಮತ್ತೆ ಫಾರ್ಮಸಿ ಮಾಫಿಯಾ ಬಳಸಿ ಜನರನ್ನು ವಂಚಿಸುತ್ತಾರೆ. ಈ ಕಾರಣಕ್ಕೆ ಜನರಿಕ್ ಔಷಧ ಮಳಿಗೆಗಳ ಸ್ಥಾಪನೆಗೆ ಸಹಕಾರ ಸಂಘಗಳಿಗೆ ಅವಕಾಶ ಕಲ್ಪಿಸುತ್ತಿದ್ದೇವೆ’ ಎಂದು ವಿವರಿಸಿದರು.

ತೃಪ್ತಿಯಿದೆ: ‘ಸಹಕಾರಿ ರಂಗಕ್ಕೆ ಕಳಂಕ ಬಾರದಂತೆ ಬ್ಯಾಂಕ್‌ನ ಆಡಳಿತ ಮಂಡಳಿ ಕೆಲಸ ಮಾಡಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕನ್ನು ಉಳಿಸಿದ ತೃಪ್ತಿಯಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

‘ಡಿಸಿಸಿ ಬ್ಯಾಂಕ್‌ನ ಸಾಧನೆಯಿಂದ ಅವಿಭಜಿತ ಕೋಲಾರ ಜಿಲ್ಲೆಯ ರೈತರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಇದೀಗ ಅವಳಿ ಜಿಲ್ಲೆಯ ಸೊಸೈಟಿಕಗಳ ಮೂಲಕ ಜನರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಬ್ಯಾಂಕ್‌ ಆರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಆಶಯ ಹೊಂದಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.