ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುಮೆಗೆ ಜೋಡೆತ್ತು ಅಲಭ್ಯ

ಮುಂಗಾರು ಚುರುಕು: ಗ್ರಾಮೀಣ ರೈತರ ಪರದಾಟ
Last Updated 8 ಜುಲೈ 2022, 6:09 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನಲ್ಲಿ ಈಗ ಮುಂಗಾರು ಹಂಗಾಮು ಚುರುಕಾಗಿದೆ. ಮೊದಲ ಬಾರಿಗೆ ಮಳೆ ಸುರಿದಾಗ ಬಹುತೇಕ ರೈತರು ಟ್ರ್ಯಾಕ್ಟರ್‌ ಬಳಸಿ ಹೊಲವನ್ನು ಹದಗೊಳಿಸುವುದು ಸಹಜ. ಆದರೆ, ಬೀಜ ಬಿತ್ತನೆ ಕಾರ್ಯಕ್ಕೆ ನೇಗಿಲು ಮೂಲಕ ಉಳುಮೆಗೆ ಆದ್ಯತೆ ನೀಡುತ್ತಾರೆ. ಇದಕ್ಕಾಗಿ ನಾಟಿ ದನಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಆದರೆ, ಈ ಕಾರ್ಯಕ್ಕೆ ಈಗ ಎತ್ತುಗಳು ಸಿಗದೆ ರೈತರು ಪರದಾಡುತ್ತಿದ್ದಾರೆ.

ಟ್ರ್ಯಾಕ್ಟರ್‌ನಲ್ಲಿ ಬಿತ್ತನೆಯ ಎಲ್ಲಾ ಕೆಲಸವನ್ನು ಮಾಡುವುದು ಅಸಾಧ್ಯ. ಹಾಗಾಗಿ, ಕೃಷಿ ಚಟುವಟಿಕೆಗಳಿಗೆ ಎತ್ತುಗಳು ಇರುವ ಮನೆಗೆ ರೈತರು ಪ್ರದಕ್ಷಿಣೆ ಹಾಕುವಂತಾಗಿದೆ.

ತಾಲ್ಲೂಕಿನ ಗ್ರಾಮಗಳಲ್ಲಿ ಈಗ ಜೋಡೆತ್ತು ಹೊಂದಿರುವವರೇ ಶ್ರೀಮಂತರು ಎನ್ನುವಂತಾಗಿದೆ. ಅವರ ಮನೆ ಮುಂದೆ ಬಿತ್ತನೆ ಮಾಡಲು ಕರೆಯುವುದಕ್ಕಾಗಿ ರೈತರು ಸರದಿಯಲ್ಲಿ ನಿಲ್ಲುವಂತಾಗಿದೆ. ಮುಂಗಾರು ಮಳೆ ಚುರುಕಾಗಿರುವುದರಿಂದ ಜೋಡೆತ್ತು ಬಳಸಿ ಉಳುಮೆ ಮಾಡುವ ಕಾರ್ಯಕ್ಕೆ ಬೆಲೆಯೂ ಬಂದಿದೆ. ತಲೆತಲಾಂತರದಿಂದ ಎತ್ತುಗಳಿಂದಲೇ ಬಿತ್ತನೆ ಮಾಡುತ್ತಿರುವ ರೈತರು ಈಗ ಅಕ್ಷರಶಃ ತೊಂದರೆಗೆ ಸಿಲುಕಿದ್ದಾರೆ. ಅದರಲ್ಲೂ ಬೇಸಿಗೆ ವೇಳೆ ಎತ್ತುಗಳನ್ನು ಮಾರಾಟ ಮಾಡಿದವರು ಈಗ ಪರಿತ‍ಪಿಸುತ್ತಿದ್ದಾರೆ.

ಸಾಮಾನ್ಯವಾಗಿ ನೇಗಿಲು ಬಳಸಿ ಉಳುಮೆಗೆ ಒಂದು ದಿನಕ್ಕೆ ₹ 1,500 ಬಾಡಿಗೆ ಇದೆ. ಎತ್ತುಗಳಿಲ್ಲದ ರೈತರು ಇದಕ್ಕಿಂತಲೂ ಹೆಚ್ಚಿನ ಮೊತ್ತ ನೀಡುತ್ತೇವೆ ಎಂದರೂ ಉಳುಮೆ ಮಾಡಿಕೊಡುವ ರೈತರು
ಸಿಗುತ್ತಿಲ್ಲ.

ಒಂದೂವರೆ ದಶಕದ ಹಿಂದೆ ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಮನೆಗೊಂದು ಜೋಡೆತ್ತು ಇರುತ್ತಿದ್ದವು. ಬದಲಾದ ಕಾಲಮಾನಕ್ಕೆ ಅನುಗುಣವಾಗಿ ರೈತರು ಸೀಮೆ ಹಸುಗಳ ಮೊರೆ ಹೋದರು. ಇದರ ಪರಿಣಾಮ ಕೊಟ್ಟಿಗೆಯಲ್ಲಿ ನಾಟಿ ಹಸುಗಳು ಮಾಯವಾದವು. ಈಗ ಹುಡುಕಿದರೂ ಗ್ರಾಮಗಳಲ್ಲಿ ನಾಟಿ ದನಗಳು ಸಿಗುತ್ತಿಲ್ಲ.

ತಾಲ್ಲೂಕಿನ ದೊಡ್ಡಬಂಡಹಳ್ಳಿ ಗ್ರಾಮ ನಾಟಿ ದನಗಳನ್ನು ಸಾಕುವುದಕ್ಕೆ ಕೋಲಾರ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿತ್ತು. ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಜೋಡೆತ್ತುಗಳಿದ್ದವು. ಈಗ ಗ್ರಾಮದಲ್ಲೂ ಜೊಡೆತ್ತುಗಳ ಸಾಕಾಣಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಜೋಡೆತ್ತು ಸಾಕುತ್ತಿರುವ ರೈತ ಅರಸಪ್ಪನವರ ನಾಗರಾಜ್‌.

‘ಗ್ರಾಮದ ಬಹುತೇಕರು ಎತ್ತುಗಳನ್ನು ಮಾರಿಕೊಂಡಿದ್ದಾರೆ. ಕೆಲವರು ಟ್ರ್ಯಾಕ್ಟರ್ ಖರೀದಿಸಿದ್ದಾರೆ. ಹೀಗಾಗಿ, ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ’ ಎಂಬುದು ಅವರ ನೋವು.

ಎತ್ತುಗಳನ್ನು ಸಾಕಾಣಿಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಒಂದು ಜೋಡೆತ್ತು ಸಾಕಲು ಕುಟುಂಬದ ಸದಸ್ಯರೊಬ್ಬರು ದಿನಪೂರ್ತಿ ಅವುಗಳ ಮೇಲೆ ನಿಗಾ ಇಡಬೇಕಿದೆ. ರೈತರು ಎತ್ತುಗಳನ್ನು ಮಾರಿರುವುದರಿಂದ ನೇಗಿಲು ಉಳುಮೆಗೆ ಸಮಸ್ಯೆಯಾಗಿದೆ ಎನ್ನುತ್ತಾರೆ ಕಸಬಾ ಹೋಬಳಿಯ ಪಿ. ಗಂಗಾಪುರ ಗ್ರಾಮದ ಶಿವಣ್ಣ.

ಈಗ ಎತ್ತುಗಳ ಬೆಲೆಯೂ ದುಬಾರಿಯಾಗಿದೆ. ಒಂದು ಜೋಡೆತ್ತಿಗೆ ₹ 50 ಸಾವಿರದಿಂದ ₹ 70 ಸಾವಿರ ಬೆಲೆ ಇದೆ. ಮೈಕಟ್ಟು ಚೆನ್ನಾಗಿರುವ ಎತ್ತುಗಳ ಬೆಲೆ ₹ 1 ಲಕ್ಷ ದಾಟುತ್ತದೆ. ಅವುಗಳ ಆರೈಕೆಗೂ ಅಷ್ಟೇ ಖರ್ಚಾಗುತ್ತದೆ. ಹಾಗಾಗಿ, ರೈತರು ಎತ್ತುಗಳನ್ನು ತಂದು ಸಾಕುವುದು ಕಷ್ಟದ ಕೆಲಸ ಎನ್ನುತ್ತಾರೆ ಕದರೀಪುರ ಗ್ರಾಮದ
ಮಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT