ಭಾನುವಾರ, ಏಪ್ರಿಲ್ 11, 2021
29 °C
ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿ– ಅಧಿಕಾರಿಗಳ ವಿರುದ್ಧ ರೈತ ಮುಖಂಡರ ಆಕ್ರೋಶ

ಸಾಲಕ್ಕೆ ನೋಟಿಸ್‌: ಡಿ.ಸಿ ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಪಿಎಲ್‌ಡಿ ಬ್ಯಾಂಕ್‌ಗಳು ಕೃಷಿ ಹಾಗೂ ಕುಕ್ಕುಟ ಸಾಲ ವಸೂಲಾತಿಗಾಗಿ ರೈತರಿಗೆ ನೋಟಿಸ್‌ ನೀಡಿರುವ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ರೈತರು ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಿಎಲ್‌ಡಿ ಬ್ಯಾಂಕ್‌ಗಳು ಸಾಲದ ಕಂತು ಕಟ್ಟುವಂತೆ ನೋಟಿಸ್‌ ಜಾರಿ ಮಾಡಿ ರೈತರಿಗೆ ಕಿರುಕುಳ ನೀಡುತ್ತಿವೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಕೊಟ್ಟಿವೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಬಡ್ಡಿ ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಬೆಳೆ ನಷ್ಟ ಹಾಗೂ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾದ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

‘ಆರ್ಥಿಕ ಸಂಕಷ್ಟದಲ್ಲಿರುವ ರೈತರು ಜೀವನ ಸಾಗಿಸುವುದೇ ದುಸ್ತರವಾಗಿದೆ. ಕೋವಿಡ್‌ನಿಂದ ಸಾಕಷ್ಟು ರೈತ ಕುಟುಂಬಗಳ ಬೀದಿ ಪಾಲಾಗಿವೆ. ಪಿಎಲ್‌ಡಿ ಬ್ಯಾಂಕ್‌ಗಳು ಗಾಯದ ಮೇಲೆ ಬರೆ ಎಳೆದಂತೆ ಸಾಲ ಮರು ಪಾವತಿಗೆ ನೋಟಿಸ್‌ ಕೊಟ್ಟು ರೈತರನ್ನು ಬೆದರಿಸುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ವಂಚಿಸಿ ದೇಶ ಬಿಟ್ಟು ಹೋಗುವ ಕಾರ್ಪೊರೇಟ್‌ ಕಂಪನಿ ಮಾಲೀಕರನ್ನು ರಕ್ಷಿಸುವ ಸರ್ಕಾರಗಳು ದೇಶಕ್ಕೆ ಅನ್ನ ಕೊಡುವ ರೈತರನ್ನು ನಿರ್ಲಕ್ಷಿಸುತ್ತಿವೆ. ಸಣ್ಣ ಮೊತ್ತದ ಸಾಲ ಪಡೆದ ರೈತರಿಗೆ ನೋಟಿಸ್‌ ಕೊಟ್ಟು ಹಾದಿಬೀದಿಯಲ್ಲಿ ಮಾನ ಹರಾಜು ಹಾಕುತ್ತವೆ’ ಎಂದು ಕೆಪಿಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಗುಡುಗಿದರು.

ರೈತ ವಿರೋಧಿಗಳು: ‘ಕುಟುಂಬದ ಎಲ್ಲಾ ಸದಸ್ಯರಿಗೂ ಕೊರೊನಾ ಸೋಂಕು ತಗುಲಿ ಪ್ರಾಣಾಪಾಯದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದೇವೆ. ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಪಿಎಲ್‌ಡಿ ಬ್ಯಾಂಕ್‌ ಆಡಳಿತ ಮಂಡಳಿ ಸಾಲವನ್ನು ಬಡ್ಡಿ ಸಮೇತ ಒಂದೇ ಕಂತಿನಲ್ಲಿ ಕಟ್ಟುವಂತೆ ನೋಟಿಸ್‌ ಕೊಟ್ಟಿದೆ’ ಎಂದು ರೈತ ತ್ಯಾಗರಾಜ್‌ ಅಳಲು ತೋಡಿಕೊಂಡರು.

‘ಸಕಾಲಕ್ಕೆ ಸಾಲ ಕಟ್ಟದಿದ್ದರೆ ಜಮೀನು ಹಾಗೂ ಮನೆ ಹರಾಜು ಹಾಕುವುದಾಗಿ ಬ್ಯಾಂಕ್‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರೈತ ವಿರೋಧಿ ಧೋರಣೆಯ ಅಧಿಕಾರಿಗಳು ನಮ್ಮ ಬದುಕನ್ನೇ ಕಸಿದುಕೊಳ್ಳಲು ಹೊರಟಿದ್ದಾರೆ. ಸಾಲಕ್ಕಾಗಿ ಮನೆ, ಜಮೀನು ಹರಾಜು ಹಾಕಿದರೆ ನಾವು ಬದುಕುವುದು ಹೇಗೆ?’ ಎಂದು ಕಣ್ಣೀರಿಟ್ಟರು.

ಜಿಲ್ಲಾಡಳಿತ ಹೊಣೆ: ‘ಸಾಲ ಮರುಪಾವತಿಗಾಗಿ ನೋಟಿಸ್‌ ನೀಡುವುದನ್ನು ನಿಲ್ಲಿಸಬೇಕು. ಬ್ಯಾಂಕ್‌ನ ನೋಟಿಸ್‌ನಿಂದ ರೈತರಿಗೆ ತೊಂದರೆಯಾದರೆ ಜಿಲ್ಲಾಡಳಿತ ಮತ್ತು ಪಿಎಲ್‌ಡಿ ಬ್ಯಾಂಕ್ ಅಧಿಕಾರಿಗಳೇ ಹೊಣೆ. ಸಾಲ ಮರು ಪಾವತಿಗೆ ಕನಿಷ್ಠ ಒಂದು ವರ್ಷ ಕಾಲಾವಕಾಶ ನೀಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೆಪಿಆರ್‌ಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎನ್.ಶ್ರೀರಾಮ್, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು