ಕೋಲಾರ: ಪಶು ಇಲಾಖೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಹೈನು ಉದ್ಯಮಕ್ಕೆ ಇದರಿಂದ ಪೆಟ್ಟು ಬೀಳುತ್ತದೆ. ಈ ನಿಟ್ಟಿನಲ್ಲಿ ಪಶು ಭಾಗ್ಯ ಯೋಜನೆಯನ್ನು ಮುಂದುವರಿಸಬೇಕು. ಖಾಸಗೀಕರಣದ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದೆ.
ಅತಿವೃಷ್ಟಿ, ಅನಾವೃಷ್ಟಿ, ಸಾಂಕ್ರಾಮಿಕ ರೋಗಗಳ ಹಾವಳಿಯಿಂದ ಲಕ್ಷಾಂತರ ಕೃಷಿ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಬೆಳೆದ ಬೆಳೆಗಳಿಗೆ ಬೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಲಕ್ಷಾಂತರ ಕುಟುಂಬಗಳ ಕೈಹಿಡಿದ ಹೈನೋದ್ಯಮಕ್ಕೆ ಧಕ್ಕೆ ಬರುವ ಪಶು ಇಲಾಖೆಯ ಖಾಸಗೀಕರಣ ನೀತಿ ಕೈಬಿಡಬೇಕು. ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಶುಲ್ಕ ವಿಧಿಸಲು ಮುಂದಾಗಿರುವುದು ಮಾನವೀಯತೆಯಲ್ಲ ಎಂದು ದೂರಿದೆ.
ರೈತರಿಗೆ ವರದಾನವಾಗಿದ್ದ ಪಶುಭಾಗ್ಯ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿವರ್ಷ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿವಿಧ ಅನುದಾನವನ್ನು ರೈತರಿಗೆ ತಲುಪಿಸಲಾಗುತ್ತಿತ್ತು. ಜೊತೆಗೆ ಆಕಸ್ಮಿಕವಾಗಿ ಹಸು, ಕುರಿ ಮೃತಪಟ್ಟರೆ ಈ ಯೋಜನೆಯಿಂದ ಪರಿಹಾರ ಸಿಗುತ್ತಿತ್ತು. ಅದನ್ನು ಮೂಲೆಗುಂಪು ಮಾಡಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪ ಹೇಳುತ್ತಿದ್ದಾರೆ. ಇದರಿಂದ ಯೋಜನೆಗಳು ಇಲಾಖೆಯ ಕೊಠಡಿಗಳಲ್ಲಿ ದೂಳು ಹಿಡಿಯುವಂತಾಗಿದೆ ಎಂದು ಟೀಕಿಸಿದೆ.
ಸಮರ್ಪಕವಾಗಿ ಗ್ರಾಮೀಣ ಸೇವೆ ಮಾಡಲು ವೈದ್ಯರನ್ನು ನೇಮಕ ಮಾಡಬೇಕು. ಮೂಕಪ್ರಾಣಿಗಳ ಹೆಸರಿನಲ್ಲಿ ಚಿಕಿತ್ಸೆಗೆ ಶುಲ್ಕ ವಸೂಲಿ ಮಾಡಿ ಪಶು ಇಲಾಖೆಯನ್ನು ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ದೂರಿದೆ.
ಉಪ ನಿರ್ದೇಶಕ ಜಗದೀಶ್ ಅವರಿಗೆ ಮನವಿ ನೀಡಲಾಯಿತು. ಮುಖಂಡರಾದ ಎ. ನಳಿನಿಗೌಡ, ಈಕಂಬಳ್ಳಿ ಮಂಜುನಾಥ್, ಸಿ. ನಾರಾಯಣಗೌಡ, ಐತಾಂಡಹಳ್ಳಿ ಮಂಜುನಾಥ್, ಕಿರಣ್, ಮರಗಲ್ ಮುನಿಯಪ್ಪ, ಮುನ್ನಾ, ನಾಗೇಶ್, ಕುವ್ವಣ್ಣ, ವೆಂಕಟೇಶ್, ಯಲ್ಲಣ್ಣ, ಹರೀಶ್, ಆಂಜಿ, ಮಂಗಸಂದ್ರ ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಶಿವಾರೆಡ್ಡಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.